ಕಾಪು: ಮಜೂರು, ಪಾದೂರು, ಕಳತ್ತೂರು ಪರಿಸರದ ಗ್ರಾಮೀಣ ಜನರಲ್ಲಿ ಭೀತಿ ಸೃಷ್ಟಿಸಿದ್ದ ಚಿರತೆ ಮರಿಯೊಂದನ್ನು ಸ್ಥಳೀಯ ಯುವಕರೇ ಸೆರೆ ಹಿಡಿದು ಬೋನಿನೊಳಗೆ ಕೂಡಿಹಾಕಿದ್ದಾರೆ. ಪಾದೂರು ಐಎಸ್‌ಪಿಆರ್‌ಎಲ್ ಘಟಕದ ಹೊರವಲಯದಲ್ಲಿ ಸ್ಥಳೀಯರಾದ ಪ್ರಕಾಶ್, ಪೃಥ್ವಿ ಮತ್ತು ಸೂರಜ್ ಅವರು ಚಿರತೆಯನ್ನು ಹಿಡಿಯುವ ಸಾಹಸ ಮಾಡಿದ್ದು, ಸೆರೆಯಾದ ಮರಿಯನ್ನು ಅರಣ್ಯ ಇಲಾಖೆಯ ಬೋನಿನೊಳಗೆ ಅಟ್ಟಿದ್ದಾರೆ. ಕಳತ್ತೂರು, ಮಜೂರು ಮತ್ತು ಪಾದೂರು ಪರಿಸರಲ್ಲಿ ಕಳೆದ ಕೆಲವು ಸಮಯಗಳಿಂದ ಚಿರತೆ ಮತ್ತು ಎರಡು ಮರಿಗಳು ತಿರುಗಾಡುತ್ತಿರುವ ಬಗ್ಗೆ ಸ್ಥಳೀಯರು ದೂರುತ್ತಿದ್ದು, ಇದನ್ನು ಗಮನಿಸಿ ಅರಣ್ಯ ಇಲಾಖೆಯ ಸಿಬಂದಿ ಐಎಸ್‌ಪಿಆರ್‌ಎಲ್‌ನ ಹೊರಭಾಗ ಮತ್ತು ಒಳಭಾಗದಲ್ಲಿ ಬೋನು ಇರಿಸಿದ್ದರು.
ಬುಧವಾರ ಬೆಳಗ್ಗೆ ಚಿರತೆಮರಿಯೊಂದು ಇದೆ ಎಂಬ ವಿಚಾರ ಬೆಳಕಿಗೆ ಬಂದ ಬಳಿಕ ಮೂವರು ಯುವಕರು ಹೇಗಾದರೂ ಮಾಡಿ ಚಿರತೆ ಮರಿಯನ್ನು ಸೆರೆ ಹಿಡಿಯಬೇಕೆಂದು ಉಪಾಯ ಮಾಡಿದ್ದರು. ಅದರಂತೆ ಮಧ್ಯಾಹ್ನ ಗೋಣಿ ಚೀಲ ಮತ್ತು ಬಲೆಯನ್ನು ಉಪಯೋಗಿಸಿ ಚಿರತೆ ಮರಿಯನ್ನು ಸೆರೆ ಹಿಡಿದು ಸ್ಥಳೀಯರ ಪ್ರಶಂಸೆಗೆ ಕಾರಣರಾದರು.
ತಾಯಿಗಾಗಿ ಕಾಯುತ್ತಿದೆ ಮರಿ: ಯುವಕರು ಸೆರೆ ಹಿಡಿದ ಸುಮಾರು 8 ತಿಂಗಳು ಪ್ರಾಯದ ಚಿರತೆ ಮರಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬೋನಿನೊಳಗೆ ಹಾಕಿ ಯೋಜನಾ ಘಟಕದ ಸ್ಥಾವರದೊಳಗೆ ಇರಿಸಿದ್ದು, ಮರಿಯನ್ನು ಹುಡುಕಿಕೊಂಡು ಬರುವ ತಾಯಿಯನ್ನು ಬೋನಿನೊಳಗೆ ಬಂಧಿಸಲು ಬೇಕಾದ ವ್ಯವಸ್ಥೆಯನ್ನು ಮಾಡಿದ್ದಾರೆ. ಅರಣ್ಯ ಅಧಿಕಾರಿಗಳಾದ ನಾಗೇಶ್ ಬಿಲ್ಲವ, ಜಯರಾಮ ಶೆಟ್ಟಿ, ಪ್ರಭಾತ್ ಕುಮಾರ್, ಮಜೂರು ಗ್ರಾ.ಪಂ. ಸದಸ್ಯ ಸಂದೀಪ್ ಕುಮಾರ್, ಸದಸ್ಯ ಪ್ರಶಾಂತ್ ರಾವ್ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.