ತಿಪಟೂರು: ಕೆಲ ಗ್ರಾಮೀಣ ಪ್ರದೇಶಗಳು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದ್ದರೆ ಇನ್ನೂ ಕೆಲ ಭಾಗಗಳಲ್ಲಿ ಬಸ್ ವ್ಯವಸ್ಥೆಯೂ ಇಲ್ಲದೆ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಹೊನ್ನವಳ್ಳಿ ಹೋಬಳಿ ಬಳುವ ನೇರಲು ಗ್ರಾಪಂ ವ್ಯಾಪ್ತಿಯ ಗಡಿ ಭಾಗದ ಗ್ರಾಮ ಕಾಳಮ್ಮನಬೆಟ್ಟ ಮಜುರೆ ಬೊಮ್ಮೇನಹಳ್ಳಿ ತಾಂಡಾ ದಲ್ಲಿ ಸಾರಿಗೆ ವ್ಯವಸ್ಥೆಯೇ ಇಲ್ಲ. ತಮ್ಮ ಕೆಲಸ ಕಾರ್ಯಗಳಿಗೋ ಅಥವಾ ನೆಂಟರಿಷ್ಟರ ಮನೆಗಳಿಗೆ ಹೋಗಬೇಕೆಂದರೆ 7 ಕಿ.ಮೀ ದೂರದ ಬಳುವನೇರಲು ಗೇಟ್‌ಗೆ ಬರಬೇಕಿದೆ. ಬೆಳಗ್ಗೆ 7ಕ್ಕೆ ಖಾಸಗಿ ಬಸ್ ಬರುವುದು ಬಿಟ್ಟರೆ ಅದೇ ಬಸ್ ಪುನಃ ಸಂಜೆ 7ಕ್ಕೆ ವಾಪಸ್ ಬರುತ್ತದೆ. ಒಂದು ಬಸ್ ಬಿಟ್ಟರೆ ಮತ್ಯಾವ ಬಸ್ ತಲೆ ಹಾಕುವುದಿಲ್ಲ.
ಯಾವುದಾದರೂ ತುರ್ತು ಕೆಲಸ ವಿದ್ದರೆ ಸ್ವಂತ ವಾಹನ ಮಾಡಿಕೊಂಡು ಹೋಗಬೇಕಾದ ಸ್ಥಿತಿಯಿದೆ. ಗ್ರಾಮದಲ್ಲಿ ಸುಮಾರು 40-50 ಲಂಬಾಣಿ ಕುಟುಂಬಗಳಿದ್ದು ಬಂಡೆ ಕೆಲಸ, ಗಾರೆ ಕೆಲಸ, ಕೂಲಿನಾಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಕೂಲಿ ಮಾಡಿದ ಹಣದಿಂದ ಜೀವನ ನಡೆಸುವುದೇ ಕಷ್ಟವಾಗಿದ್ದು ಆಟೋಗಳಲ್ಲಿ ಓಡಾಡಲು ಹಣಎಲ್ಲಿಂದ ತರಲಿ ಎನ್ನುತ್ತಾರೆ ಇಲ್ಲಿನ ಲಂಬಾಣಿ ಜನ.
ಮಕ್ಕಳ ವಿದ್ಯಾಭ್ಯಾಸ ಮೊಟಕು: ಈ ಗ್ರಾಮದಲ್ಲಿ 1ರಿಂದ 5ರವರೆಗೆ ಮಾತ್ರ ಸರ್ಕಾರಿ ಶಾಲೆಯಿದೆ. ಇನ್ನೂ 6ರಿಂದ 7ನೇ ತರಗತಿ ಓದಬೇಕೆಂದರೆ 5.ಕಿ.ಮೀ ದೂರದ ದಾಸನಕಟ್ಟೆಗೆ ಹೋಗಬೇಕು. ಇಷ್ಟು ದೂರ ನಿತ್ಯ ನಡೆದುಕೊಂಡು ಹೋಗಲು ಸಾಧ್ಯವಿಲ್ಲದ ಕಾರಣ ಮಕ್ಕಳ ವಿದ್ಯಾಭ್ಯಾಸಕ್ಕೆ ಕುತ್ತುಂಟಾಗುತ್ತಿದೆ. ಬಸ್ ವ್ಯವಸ್ಥೆ ಇಲ್ಲದ್ದರಿಂದ ಪೋಷಕರು ಮಕ್ಕಳನ್ನು ಕೂಲಿಗೆ ಕರೆದುಕೊಂಡು ಹೋಗುತ್ತಿ ದ್ದಾರೆಂದು ಇಲ್ಲಿನ ಹಿರಿಯರು ಹೇಳುತ್ತಾರೆ.
ಸ್ವತ್ಛತೆ ಮರೀಚಿಕೆ: ಲಂಬಾಣಿ ತಾಂಡಾದಲ್ಲಿ ಸ್ವತ್ಛತೆ ಮರೀಚಿಕೆಯಾಗಿದೆ. ಚರಂಡಿ ಇಲ್ಲವೇ ಇಲ್ಲ. ಮನೆಗಳಲ್ಲಿ ಬಳಸಿದ ತ್ಯಾಜ್ಯ ನೀರು ರಸ್ತೆಗಳಲ್ಲಿಯೇಹರಿಯುತ್ತಿದ್ದು ಎಲ್ಲಿ ನೋಡಿದರೂ ಕಸದ ರಾಶಿ ಎದ್ದು ಕಾಣುತ್ತಿದೆ. ಸಾಂಕ್ರಾಮಿಕ ರೋಗ ಹೆಚ್ಚಾಗುತ್ತಿರುವ ಇಂತಹ ಸಂದರ್ಭದಲ್ಲಿ ಗ್ರಾಪಂ ಸಿಬ್ಬಂದಿ ಸ್ವತ್ಛತೆಗೆ ಆದ್ಯತೆ ನೀಡುತ್ತಿಲ್ಲ ಎಂಬುದು ಗ್ರಾಮಸ್ಥರ ದೂರಾಗಿದೆ.
ಪ್ರವಾಸಿ ಕ್ಷೇತ್ರಗಳಿದ್ದರೂ ಬಸ್ ಇಲ್ಲ: ಬೊಮ್ಮೇ ನಹಳ್ಳಿ ತಾಂಡಾ ಸುತ್ತಮುತ್ತ ಪ್ರಸಿದ್ಧ ಪ್ರವಾಸಿ ಕ್ಷೇತ್ರಗಳಾದ ಶ್ರೀಕಾಳಮ್ಮನ ಗುಡ್ಡ, ಶ್ರೀಅಡವೀಶ್ವರ ಸ್ವಾಮಿ, ಶ್ರೀ ರೇವಣಸಿದ್ದೇಶ್ವರ ಸ್ವಾಮಿ ಬೆಟ್ಟಗಳಿದ್ದು ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಆದರೆ, ಬಸ್ ವ್ಯವಸ್ಥೆಯೇಇಲ್ಲ.
ತಿಪಟೂರು ಕೆಎಸ್‌ಆರ್‌ಟಿಸಿ ಡಿಪೋಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳು ಬಸ್ ವ್ಯವಸ್ಥೆ ಕಲ್ಪಿಸಿಲ್ಲ. ಇನ್ನೆರಡು ವಾರಗಳಲ್ಲಿ ಕಲ್ಪಿಸದಿದ್ದರೆ ಡಿಪೋ ಬಳಿ ಪ್ರತಿಭಟನೆ ನಡೆಸಲಾಗುವುದು.
–ಬಿ.ಟಿ.ಕುಮಾರ್, ಸೇವಾಲಾಲ್ ಲಂಬಾಣಿ ಸಮಾಜ ತಾಲೂಕು ಅಧ್ಯಕ್ಷರು
-ಬಿ.ರಂಗಸ್ವಾಮಿ, ತಿಪಟೂರು