Advertisement

ಬೊಮ್ಮನಹಾಳ್‌ ರಸ್ತೆಗಿಲ್ಲ ಅಭಿವೃದ್ಧಿ ಭಾಗ್ಯ!

05:12 PM Nov 15, 2018 | Team Udayavani |

ಬಳ್ಳಾರಿ: ಲೋಕೋಪಯೋಗಿ ಇಲಾಖೆ-ಮಹಾನಗರ ಪಾಲಿಕೆ ನಡುವಿನ ಸಮನ್ವಯತೆ ಕೊರತೆಯಿಂದಾಗಿ ನಗರದ ಮಿಲ್ಲರ್‌ಪೇಟೆ-ಕಣೇಕಲ್‌ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿಗೆ ಕೊಕ್ಕೆ ಬಿದ್ದಿದೆ. ಕಳೆದ ಎರಡು ದಶಕಗಳಿಂದ ಅಭಿವೃದ್ಧಿ ಕಾಣದ ಈ ರಸ್ತೆಗೆ ಇತ್ತೀಚಿಗೆ ಬಿಡುಗಡೆಯಾಗಿದ್ದ ಅನುದಾನ, ಇಲಾಖೆಗಳ ನಡುವಿನ ಹಗ್ಗಜಗ್ಗಾಟದಿಂದ ಅನುದಾನವೂ ಕೂಡ ಬಳಕೆಯಾಗದೆ ವಾಪಸ್‌ ಹೋಗಿದೆ.

Advertisement

ನಗರದ ಮಿಲ್ಲರ್‌ಪೇಟೆಯಿಂದ ಕಣೇಕಲ್‌ ಬಸ್‌ ನಿಲ್ದಾಣ ಬಳಿಯ ಬೊಮ್ಮನಹಾಳ್‌ (ಕಣೇಕಲ್‌) ರಸ್ತೆ ಕಳೆದ ಎರಡು ದಶಕಗಳಿಂದ ಅಭಿವೃದ್ಧಿಯನ್ನೇ ಕಾಣದಾಗಿದೆ. 1999ರಲ್ಲಿ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿಯವರು ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಡಾಂಬರ್‌ ಕಂಡಿದ್ದ ಈ ರಸ್ತೆ ಪುನಃ ಈವರೆಗೂ ಅಭಿವೃದ್ಧಿಯನ್ನೇ ಕಂಡಿಲ್ಲ. ಸಂಪೂರ್ಣ ಗುಂಡಿಗಳಿಂದ ಕೂಡಿರುವ ಈ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳ ಸಂಚಾರದಿಂದಾಗಿ ರಸ್ತೆಯ ಇಕ್ಕೆಲಗಳಲ್ಲಿರುವ ನಿವಾಸಿಗಳಿಗೆ ಧೂಳಿನ ಅಭಿಷೇಕ ಮಾಡುತ್ತಿದೆ.

ಈ ಸಮಸ್ಯೆಯಿಂದ ಮುಕ್ತಿಗೊಳಿಸುವ ಸಲುವಾಗಿ ರಸ್ತೆ ನಿರ್ಮಾಣಕ್ಕೆಂದು 2014ರಲ್ಲೇ ಜಿಲ್ಲಾಡಳಿತ 4 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರೂ, ಲೋಕೋಪಯೋಗಿ ಇಲಾಖೆ-ಮಹಾನಗರ ಪಾಲಿಕೆ ನಡುವಿನ ಸಮನ್ವಯತೆ ಕೊರತೆಯಿಂದ ಅನುದಾನವೂ ವಾಪಸ್‌ ಹೋಗಿದ್ದು, ರಸ್ತೆ ಅಭಿವೃದ್ಧಿ ಮರೀಚಿಕೆಯಾಗಿದೆ.

ಅನುದಾನ ವಾಪಸ್‌: ನಗರದ ಮಿಲ್ಲರ್‌ಪೇಟೆಯ ಗಂಗಪ್ಪ ಜಿನ್‌ ವೃತ್ತದಿಂದ ರಾಣಿತೋಟ ವೃತ್ತದವರೆಗಿನ 2 ಕಿ.ಮೀ.  ಮ್ಮನಹಾಳ್‌ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಜಿಲ್ಲಾಧಿಕಾರಿಗಳು 2014ರಲ್ಲೇ 4 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರು. 2015ರಲ್ಲಿ ಅಂದಿನ ಮೇಯರ್‌ ನಾಗಮ್ಮ, ಶಾಸಕ ಅನಿಲ್‌ಲಾಡ್‌ ಭೂಮಿಪೂಜೆಯನ್ನು ನೆರವೇರಿಸಿದ್ದರು. ದುರಸ್ತಿಗೊಳಿಸುವ ಸಲುವಾಗಿ ರಸ್ತೆಯನ್ನು ಅಗೆಯಲಾಗಿತ್ತು. ಬಳಿಕ ರಸ್ತೆಯನ್ನು ಅತಿಕ್ರಮಿಸಿಕೊಂಡಿದ್ದ ಇಕ್ಕೆಲಗಳಲ್ಲಿನ ವಾಣಿಜ್ಯ ಮಳಿಗೆ, ಮನೆಗಳನ್ನು ತೆರವುಗೊಳಿಸುವಂತೆ ಸೂಚಿಸಲಾಯಿತು. ಈ ಜವಾಬ್ದಾರಿಯನ್ನು ಮಹಾನಗರ ಪಾಲಿಕೆ ಮತ್ತು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿತ್ತು. ಎರಡೂ ಇಲಾಖೆಗಳ ನಡುವೆ ಸಮನ್ವದ ಕೊರತೆಯಿಂದಾಗಿ ರಸ್ತೆ ಒತ್ತುವರಿ ತೆರವುಗೊಳಿಸಿಲ್ಲ. ಪರಿಣಾಮ ರಸ್ತೆ ನಿರ್ಮಿಸಲು ಮುಂದೆ ಬಂದಿದ್ದ ಗುತ್ತಿಗೆದಾರರು ಕಾಮಗಾರಿಯನ್ನು ಕೈಬಿಟ್ಟಿದ್ದರಿಂದ ರಸ್ತೆ ಅಭಿವೃದ್ದಿಯೇ ನೆನಗುದಿಗೆ ಬಿದ್ದಿದೆ.

ರಸ್ತೆ ನಿರ್ಮಾಣಕ್ಕೆ 2014ರಲ್ಲಿ ಬಿಡುಗಡೆಯಾಗಿದ್ದ ಅನುದಾನವನ್ನು ನಿಗದಿತ ಉದ್ದೇಶಕ್ಕೆ ಬಳಕೆಯಾಗದ ಹಿನ್ನೆಲೆಯಲ್ಲಿ ಅದನ್ನು ಬೇರೆ ಕಾಮಗಾರಿಗೆ ಬಳಸಿಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಆದರೆ, 2017ರಲ್ಲಿ ಶಾಸಕ ಸೋಮಶೇಖರರೆಡ್ಡಿ ನೇತೃತ್ವದಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪುನಃ ಬಿಡುಗಡೆಗೊಳಿಸಿದ್ದ 1.58 ಕೋಟಿ ರೂ. ಅನುದಾನವನ್ನೂ ಸಹ ರಸ್ತೆ ನಿರ್ಮಾಣಕ್ಕೆ ಬಳಸಿಲ್ಲ. ಇದು ಸಹ ವಾಪಸ್‌ ಹೋಗಿದೆ ಎನ್ನಲಾಗುತ್ತಿದೆ.

Advertisement

ರಸ್ತೆ ಅಗಲೀಕರಣಕ್ಕೆ ವಿದ್ಯುತ್‌ ಕಂಬಗಳನ್ನು ಸ್ಥಳಾಂತರಿಸಲು ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದಕ್ಕೆ ಪಾಲಿಕೆ ಸದಸ್ಯರಲ್ಲೂ ಇಚ್ಛಾಶಕ್ತಿ ಕೊರತೆ ಕಾಡುತ್ತಿದ್ದು, ವರ್ಷಗಳು ಉರುಳಿದರೂ ರಸ್ತೆಗೆ ಮಾತ್ರ ಅಭಿವೃದ್ಧಿ ಭಾಗ್ಯ ಒದಗಿ ಬರುತ್ತಿಲ್ಲ.

ದಿನೇ ದಿನೇ ವಿಸ್ತಾರಗೊಳ್ಳುತ್ತಿರುವ ಬಳ್ಳಾರಿ ನಗರದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಗೆ ತಕ್ಕಂತೆ ವಾಹನಗಳ ಸಂಖ್ಯೆಯೂ ದುಪ್ಪಟ್ಟಾಗಿದೆ. ನಗರದ ಹೃದಯ ಭಾಗದಲ್ಲಿರುವ ಬೊಮ್ಮನಹಾಳ್‌ ರಸ್ತೆಯಲ್ಲಿ ನಗರ ಸಾರಿಗೆ ಬಸ್‌, ದ್ವಿಚಕ್ರವಾಹನ, ಲಘುವಾಹನ ಸೇರಿದಂತೆ ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು, ಸ್ಥಳೀಯ ನಿವಾಸಗಳಿಗೆ ಧೂಳಿನ ಅಭಿಷೇಕವಾಗುತ್ತದೆ. ಮನೆಯ ಗೋಡೆ, ಕಿಟಕಿಗಳ ಮೇಲೆ ನಿತ್ಯ ಸ್ವತ್ಛಗೊಳಿಸಿದರೂ, ಪ್ರತಿದಿನ ಸಂಜೆಯಾಗುವುದರೊಳಗಾಗಿ ಎರಡೂಮೂರು ಪದರುಧೂಳು ಆವರಿಸಿರುತ್ತದೆ. ಇದು ಸ್ಥಳೀಯ ನಿವಾಸಿಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ. ಮೇಲಾಗಿ ರಸ್ತೆಯಲ್ಲಿ ತಗ್ಗುಗುಂಡಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ವಾಹನ ಸವಾರರೂ ಹರಸಾಹಸ ಪಡಬೇಕಾಗಿದೆ. 

„ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next