Advertisement

ಬೊಮ್ಮಾಯಿ ತಾರತಮ್ಯ ಧೋರಣೆ ಪ್ರದರ್ಶಿಸಿ ಮುಖ್ಯಮಂತ್ರಿ ಹುದ್ದೆಗೆ ಕಳಂಕ: ಬಿ.ಎಂ. ಫಾರೂಕ್

08:23 AM Aug 01, 2022 | Team Udayavani |

ಮಂಗಳೂರು: ಕರಾವಳಿಯಲ್ಲಿ ಕ್ರಿಮಿನಲ್ ಗಳ ಅಟ್ಟಹಾಸ ಮಿತಿ ಮೀರಿದ್ದು ಕೊಲೆಗಳು ಹೆಚ್ಚುತ್ತಿವೆ. ಕರಾವಳಿಯಲ್ಲಿ ನಡೆದ ಮೂರೂ ಕೊಲೆ ಪ್ರಕರಣಗಳ ಕುರಿತು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಹಾಗೂ ಭರವಸೆಯ ಸಮಿತಿ ಅಧ್ಯಕ್ಷ ಬಿ.ಎಂ. ಫಾರೂಕ್ ಆಗ್ರಹಿಸಿದ್ದಾರೆ.

Advertisement

ಧಾರ್ಮಿಕ, ಶೈಕ್ಷಣಿಕ, ಬ್ಯಾಂಕಿಂಗ್ ಮುಂತಾದ ಎಲ್ಲ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮೂಲಕ ಪ್ರಪಂಚದಲ್ಲೇ ಗುರುತಿಸಲ್ಪಡುವ ದಕ್ಷಿಣ ಕನ್ನಡದಲ್ಲಿ ಇತ್ತೀಚಿಗೆ ನಡೆಯುತ್ತಿರುವ ವಿದ್ಯಮಾನಗಳು ಶಾಂತಿಪ್ರಿಯ ನಾಗರಿಕರನ್ನು ಕಂಗೆಡಿಸಿವೆ ಎಂದರು.

10 ದಿನಗಳ ಅಂತರದಲ್ಲಿ ನಡೆದ ಮೂರು ಯುವಕರ ಹತ್ಯೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿರುವುದಕ್ಕೆ ಸಾಕ್ಷಿಯಾಗಿದೆ. ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಕೊಲೆ, ಅದರ ಮೊದಲು ನಡೆದ ಮಸೂದ್ ನ ಹತ್ಯೆ, ಮುಖ್ಯಮಂತ್ರಿ ಜಿಲ್ಲೆಗೆ ಬಂದಿದ್ದಾಗಲೇ ನಡೆದ ಫಾಝಿಲ್ ನ ಭೀಕರ ಹತ್ಯೆ ಜನ ಮಾನಸಕ್ಕೆ ತಲ್ಲಣ ಉಂಟು ಮಾಡಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ ಧರ್ಮ ಪಾಲಿಸದೆ ತಾರತಮ್ಯ ಧೋರಣೆ ಪ್ರದರ್ಶಿಸಿ ಮುಖ್ಯಮಂತ್ರಿಯ ಹುದ್ದೆಗೆ ಕಳಂಕ ತಂದಿದ್ದಾರೆ. ಬೆಳ್ಳಾರೆಯ ಮಸೂದ್ ಮನೆ ಕೆಲವೇ ಕಿ. ಮೀ. ದೂರದಲ್ಲಿ ಇದ್ದರೂ ಸೌಜನ್ಯಕ್ಕೂ ಭೇಟಿ ಕೊಡದೆ ಪರಿಹಾರ ಘೋಷಿಸದೆ ತಾನು ಕೇವಲ ಒಂದು ಸಮುದಾಯಕ್ಕೆ ಸೇರಿದ ಮುಖ್ಯಮಂತ್ರಿ ಎಂಬಂತೆ ವರ್ತಿಸಿ ರಾಜ್ಯಪಾಲರ ಮುಂದೆ ಕೈಗೊಂಡ ಪ್ರಮಾಣ ವಚನಕ್ಕೆ ವಿರೋಧವಾಗಿ ನಡೆದುಕೊಂಡಿದ್ದಾರೆ ಎಂದರು.

ಸುರತ್ಕಲ್ ನ ಫಾಝಿಲ್ ಹತ್ಯೆಯ ತನಿಖೆಗೆ ಅಲ್ಲಿನ ಶಾಸಕ ಡಾ. ಭರತ್‌ ಶೆಟ್ಟಿ, ಹಸ್ತಕ್ಷೇಪ ಮಾಡುತ್ತಿರುವುದು ತೀವ್ರ ಖಂಡನೀಯ ಎಂದು ಫಾರೂಕ್ ವಿಷಾದಿಸಿದ್ದಾರೆ.

Advertisement

ಜಿಲ್ಲೆಯಲ್ಲಿ ಶಾಂತಿ ಮರುಕಳಿಸುವಂತೆ ಮಾಡುವ ಎಲ್ಲಾ ಪುಯತ್ನಕ್ಕೆ ನಾವೆಲ್ಲರೂ ಕೈ ಜೋಡಿಸೋಣ. ಯಾರೂ ಪಕ್ಷ ರಾಜಕೀಯ ಮಾಡಬೇಡಿ, ಸಾರ್ವಜನಿಕರೂ ಗಾಳಿ ಸುದ್ದಿಗಳಿಗೆ ಕಿವಿ ಕೊಡದೆ ಶಾಂತಿ ಕಾಪಾಡಲು ಸಹಕರಿಸಬೇಕು ಎಂದು ಅವರು ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next