ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಆರ್. ಬೊಮ್ಮಾಯಿಯವರು ಸಾಮಾಜಿಕ ಚಳವಳಿ ಜತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿ ಮಾಡಿದ ಧೀಮಂತ ರಾಜಕಾರಣಿ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಬಣ್ಣಿಸಿದರು.
ನಗರದ ಗಾಂಧಿ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎಸ್.ಆರ್.ಬೊಮ್ಮಾಯಿ ಅವರ 94ನೇ ಜನ್ಮ ದಿನಾಚರಣೆ ಮತ್ತು ನಮ್ಮ ನಮಸ್ಕಾರ ವೆಬ್ ಪತ್ರಿಕೆ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಾಮಕೃಷ್ಣ ಹೆಗಡೆ, ರಾಚಯ್ಯ, ಅಜೀಜ್ ಸೇs… ಹಾಗೂ ಎಸ್.ಆರ್.ಬೊಮ್ಮಾಯಿ ಮೊದಲಾದ ಘಟಾನುಘಟಿ ರಾಜಕಾರಣಿಗಳು ರಾಜ್ಯದ ಸಾಂಸ್ಕೃತಿಕ ನಾಯಕರಾಗಿ ಮೌಲ್ಯಯುತ ಜೀವನ ನಡೆಸಿದ್ದರು.
ಎಸ್.ಆರ್.ಬೊಮ್ಮಾಯಿಯವರು ಚಿಕ್ಕ ವಯಸ್ಸಿನಿಂದಲೇ ಜನ ಸೇವೆ ಮಾಡಬೇಕೆಂಬ ಹಂಬಲ ಹೊಂದಿದ್ದರು. ಜನಪರ ಕಾಳಜಿಯನ್ನ ಬಾಲ್ಯದಿಂದಲೇ ಬೆಳೆಸಿಕೊಂಡಿದ್ದ ಅವರು ಗೋವಾ ಚಳವಳಿ, ಕರ್ನಾಟಕ ಚಳುವಳಿ ಸೇರಿದಂತೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲೂ ಭಾಗಹಿಸಿದ್ದರು ಎಂಬುದನ್ನು ನೆನಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನನ್ನಂತಹ ಅನೇಕ ರಾಜಕಾರಣಿಗಳ ಬೆಳವಣಿಗೆಯಲ್ಲಿ ಎಸ್.ಆರ್. ಬೊಮ್ಮಾಯಿ ಅವರ ಮಾರ್ಗದರ್ಶನ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮೊದಲು ಎಸ್.ಆರ್. ಬೊಮ್ಮಾಯಿಯವರ ಸಲಹೆ ಪಡೆಯುತ್ತಿದ್ದರು ಹಾಗೂ ಅವರೊಂದಿಗೆ ಸುಧೀರ್ಘವಾಗಿ ಚರ್ಚಿಸುತ್ತಿದ್ದರು.
ಸಹಕಾರಿ ತತ್ವದ ಮೂಲಕ ವಿತರಣೆ ಹಾಗೂ ಬಂಡವಾಳ ಕ್ರೋಢಿಕರಣದ ಫಲ ಜನ ಸಾಮಾನ್ಯರಿಗೆ ತಲುಪಿಸುವ ಪ್ರಯತ್ನ ಮಾಡಿದ್ದರು. ಬೊಮ್ಮಾಯಿಯವರ ಆಲೋಚನೆಗಳನ್ನು ಪುನರ್ ಸ್ಥಾಪಿಸುವ ಅವಶ್ಯಕತೆ ಇದೆ ಎಂದರು. ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಮಾತನಾಡಿ, ಎಸ್.ಆರ್. ಬೊಮ್ಮಾಯಿ ಅವರು ರಾಜ್ಯಕಂಡ ಬಹಳ ಅಪರೂಪದ ಮುತ್ಸದ್ಧಿ ರಾಜಕಾರಣಿ. ಸವಾಲುಗಳನ್ನು ಮತ್ತು ಸಮಸ್ಯೆಗಳನ್ನು ಎದುರಿಸಿ ಮುಖ್ಯಮಂತ್ರಿಯಾಗಿದ್ದಾರೆ.
ಸರ್ಕಾರ ಚೆನ್ನಾಗಿ ನಡೆಯಬೇಕಾದರೆ ಮುಖ್ಯಮಂತ್ರಿ ಸಮರ್ಥವಾಗಿರಬೇಕು. ನಾಯಕತ್ವ ಹಾಗೂ ಅಭಿವೃದ್ಧಿಶೀಲ ಗುಣ ಹೊಂದಿರುವ ವ್ಯಕ್ತಿಗಳಿಂದ ಮಾತ್ರ ಇದನ್ನು ನಿರೀಕ್ಷೆ ಮಾಡಲು ಸಾಧ್ಯ. ಎಸ್.ಆರ್. ಬೊಮ್ಮಾಯಿಯವರ ದಾರಿ ನಮಗೆಲ್ಲರಿಗೂ ಪ್ರೇರಣೆ ಎಂದರು. ಮಾಜಿ ಸಚಿವರಾದ ಸಿ.ಎಂ.ಉದಾಸಿ, ಬಸವರಾಜ ಬೊಮ್ಮಾಯಿ, ನಿವೃತ್ತ ಐಎಎಸ್ ಅಧಿಕಾರಿ ಡಾ. ಸೋಮಶೇಖರ್, ಹಿರಿಯ ಪತ್ರಕರ್ತ ತಿಮ್ಮಪ್ಪ ಭಟ್ ಮೊದಲಾದವರು ಉಪಸ್ಥಿತರಿದ್ದರು.