Advertisement

ಬೊಮ್ಮಾಯಿ ಸಿಎಂ; ಜಿಲ್ಲೆ ನಿರೀಕ್ಷೆ ಬೆಟ್ಟದಷ್ಟು

06:42 PM Jul 29, 2021 | Team Udayavani |

ಕಲಬುರಗಿ: ರಾಜ್ಯದ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಬುಧವಾರ ಕಾರ್ಯಭಾರ ವಹಿಸಿಕೊಂಡಿದ್ದು, ಕಲ್ಯಾಣ ಕರ್ನಾಟಕ ಅದರಲ್ಲೂ ಜಿಲ್ಲೆಯಲ್ಲಿ ಹೆಚ್ಚಿನ ನಿರೀಕ್ಷೆಗಳು ಗರಿಗೆದರಿವೆ. ಬೊಮ್ಮಾಯಿ ಅವರು ಈ ಹಿಂದೆ 2011-12ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಜತೆಗೆ ಗೃಹ ಸಚಿವರಾಗಿ ಹಲವು ಸಲ ಬಂದು ಹೋಗಿದ್ದರಿಂದ ಜಿಲ್ಲೆಯ ನಿರೀಕ್ಷೆಗಳು ಹೆಚ್ಚಿವೆ.

Advertisement

371ನೇ(ಜೆ)ಕಲಂ ಪರಿಣಾಮಕಾರಿ ಅನುಷ್ಠಾನ: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಅಭಿವೃದ್ಧಿ, ಉದ್ಯೋಗ, ಶೈಕ್ಷಣಿಕ ಅಭಿವೃದ್ಧಿಗೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371ನೇ (ಜೆ) ಕಲಂ ಪರಿಣಾಮಕಾರಿ ಅನುಷ್ಠಾನ ಆಗುತ್ತಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. 371ನೇ (ಜೆ) ವಿಧಿ ಅನುಷ್ಠಾನಕ್ಕೆ ಉಪಸಮಿತಿ ರಚಿಸುವುದು ಮುಖ್ಯವಾಗಿದೆ. ಕಲಂ ಜಾರಿಯಲ್ಲಿನ ಲೋಪದೋಷ ನಿವಾರಿಸಲು, ಸಣ್ಣಪುಟ್ಟ ತಿದ್ದುಪಡಿ ತರುವ ನಿಟ್ಟಿನಲ್ಲಿ ಹಿಂದಿನ ಸರ್ಕಾರದಲ್ಲಿ ಹಿರಿಯ ಸಚಿವರ ನೇತೃತ್ವದಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿತ್ತು.

ಆದರೆ ಹಿಂದಿನ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಸಚಿವ ಸಂಪುಟ ಉಪ ಸಮಿತಿ ರಚನೆಯಾಗಲೇ ಇಲ್ಲ. ಹೀಗಾಗಿ ಈಗ ತುರ್ತಾಗಿ ಸಚಿವ ಸಂಪುಟದ ಉಪಸಮಿತಿ ರಚನೆಯಾಗಿ ಇರುವ ಲೋಪದೋಷ ನಿವಾರಿಸಬೇಕಿದೆ. ಮುಖ್ಯವಾಗಿ ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷರಾಗಿ ಈ ಭಾಗದ ಸಚಿವರನ್ನೇ ಅಧ್ಯಕ್ಷರನ್ನಾಗಿ ಮಾಡುವುದು ಹೆಚ್ಚು ಸೂಕ್ತ ಹಾಗೂ ನಿರೀಕ್ಷೆಯಾಗಿದೆ.

ಪ್ರತ್ಯೇಕ ಸಚಿವಾಲಯ ಸ್ಥಾಪನೆ: ಈ ಭಾಗದ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವ ನಿಟ್ಟಿನಲ್ಲಿ ಹಿಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕಲ್ಯಾಣ ಕರ್ನಾಟಕ ನಾಮಾಂಕಿತ ಘೋಷಿಸುವ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವುದಾಗಿ ಹೇಳಿದ್ದರು. ಆದರೆ ಸಾಕಾರಗೊಂಡಿಲ್ಲ. ಇದು ಕಾರ್ಯರೂಪಕ್ಕೆ ಬರಲೇಬೇಕಿದೆ. ನೂತನ ಮುಖ್ಯಮಂತ್ರಿ ನಿರ್ಧಾರ ಕೈಗೊಳ್ಳಲಿದ್ದಾರೆನ್ನುವ ವಿಶ್ವಾಸ ಕಲ್ಯಾಣ ಕರ್ನಾಟಕ ಭಾಗದ ಜನರದ್ದು.

ಖಾಲಿ ಹುದ್ದೆ ಭರ್ತಿ: 371ನೇ (ಜೆ) ವಿಧಿ ತಿದ್ದುಪಡಿಯಾಗಿ ಒಂಭತ್ತು ವರ್ಷಗಳಾಗುತ್ತಿವೆ. ಆ ಸಂದರ್ಭದಲ್ಲಿ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಅಂದಾಜು 50 ಸಾವಿರ ಹುದ್ದೆಗಳನ್ನು ವರ್ಷದೊಳಗೆ ಭರ್ತಿ ಮಾಡುವ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ತದನಂತರ ಕೇವಲ 19 ಸಾವಿರ ಹುದ್ದೆಗಳನ್ನು ಮಾತ್ರ ಭರ್ತಿ ಮಾಡಿಕೊಳ್ಳಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ನೇಮಕಾತಿ ಸ್ಥಗಿತವಾಗಿದ್ದು, ಈಗ ಚಾಲನೆ ನೀಡುವುದು ಅವಶ್ಯವಿದೆ. ಕಳೆದೆರಡು ವರ್ಷಗಳ ಅವಧಿಯಲ್ಲೇ ಈ ಭಾಗದಲ್ಲಿ 20 ಸಾವಿರಕ್ಕೂ ಹೆಚ್ಚು ನೌಕರರು ನಿವೃತ್ತಿಯಾಗಿದ್ದು, ನೂತನ ಸಿಎಂ ಬಸವರಾಜ ಬೊಮ್ಮಾಯಿ ಖಾಲಿ ಹುದ್ದೆಗಳ ಭರ್ತಿಗೆ ದೃಢ ಹೆಜ್ಜೆ ಇಡುವರೆಂಬ ಬಲವಾದ ನಿರೀಕ್ಷೆ ಈ ಭಾಗದ ಜನರಲ್ಲಿದೆ.

Advertisement

ಆರ್‌ಸಿ ಕಚೇರಿ ರದ್ದತಿ ಬೇಡ: ಈಗಿರುವ ಪ್ರಾದೇಶಿಕ ಆಯುಕ್ತರ ಕಚೇರಿ ರದ್ದುಗೊಳಿಸಲು ಮುಂದಾಗಿರುವುದಾಗಿ ಈ ಹಿಂದಿನ ಕಂದಾಯ ಸಚಿವ ಆರ್‌. ಅಶೋಕ ಹೇಳಿದ್ದಾರೆ. ಆದರೆ ಆರ್‌ಸಿ ಕಚೇರಿ ರದ್ದಾದರೆ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗಕ್ಕೆ ತೀವ್ರ ಹೊಡೆತ ಬೀಳುತ್ತದೆ. ಈಗ ಇರುವ ಪ್ರಾದೇಶಿಕ ಆಯುಕ್ತರನ್ನೇ ರದ್ದುಪಡಿಸಿ ರಾಜ್ಯಮಟ್ಟದಲ್ಲಿ ಕಂದಾಯ ಆಯುಕ್ತಾಲಯ ಸ್ಥಾಪಿಸುವುದು ಯಾವ ನಿಟ್ಟಿನಲ್ಲೂ ಔಚಿತ್ಯವಲ್ಲ ಎಂದೇ ಹೇಳಬಹುದು.

ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ಹಿಂದಿನಂತೆ ವಿಭಾಗೀಯ ಅಧಿಕಾರಿಗಳ ಕಚೇರಿಗಳಾಗಿ ಉನ್ನತೀಕರಣ ಮಾಡಬೇಕು. ಜಿಲ್ಲಾಧಿಕಾರಿಗಳ ಮೇಲೆ ಮೇಲುಸ್ತುವಾರಿ ಹಾಗೂ ಜಿಲ್ಲೆ, ತಾಲೂಕುಮಟ್ಟದ ಅ ಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರ, ಜವಾಬ್ದಾರಿ ನೀಡುವ ಮುಖ್ಯ ಕಾರ್ಯವಾಗಬೇಕಿದೆ. ಈ ಹಿಂದೆ ವಿಭಾಗಾಧಿಕಾರಿಗಳು ನ್ಯಾಯಾಲಯ ಕಲಾಪ ನಡೆಸುತ್ತಿದ್ದರು. ಅಂದರೆ ಜಿಲ್ಲಾಧಿಕಾರಿ ಆದೇಶವನ್ನು ವಿಭಾಗಾಧಿಕಾರಿಗಳಲ್ಲಿ ಪ್ರಶ್ನಿಸಲು ಅವಕಾಶವಿತ್ತು. ಈಗ ತೆಗೆದು ಹಾಕಿರುವುದನ್ನು ಮತ್ತೆ ಚಾಲ್ತಿಗೆ ತರಬೇಕು ಎನ್ನಲಾಗುತ್ತಿದೆ. ಆರ್‌ಸಿ ಕಚೇರಿ ಬಲಪಡಿಸುತ್ತಾರೆಂಬ ನಿರೀಕ್ಷೆ ಹೊಂದಲಾಗಿದೆ.

ನೀರಾವರಿ ಯೋಜನೆ ಸದುಪಯೋಗಕ್ಕೆ ಕ್ರಮ: ಬೊಮ್ಮಾಯಿ ಅವರು ಜಲ ಸಂಪನ್ಮೂಲ ಸಚಿವರಾಗಿದ್ದ ವೇಳೆ ಜಿಲ್ಲೆಯ ಗಂಡೋರಿನಾಲಾ, ಭೀಮಾ ಏತ ನೀರಾವರಿ ಸೇರಿದಂತೆ ಇತರೆ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ನಾಡಿಗೆ ಸಮರ್ಪಿಸಿದ್ದು, ಸಮರ್ಪಕ ಬಳಕೆಯಾಗುತ್ತಿಲ್ಲ. ಕೇವಲ ಆಣೆಕಟ್ಟು ನಿರ್ಮಿಸಿದಂತಾಗಿದೆ. ಆಣೆಕಟ್ಟಿಗೆ ತಕ್ಕ ಕಾಲುವೆಗಳು ನಿರ್ಮಾಣವಾಗಿಲ್ಲ. ಹೀಗಾಗಿ ನೀರು ಬಳಕೆಯೇ ಇಲ್ಲ ಎನ್ನುವಂತಾಗಿದೆ. ನೀರಿನ ಸದ್ಬಳಕೆಗೆ ಶಿಗ್ಗಾವಿ ಮಾದರಿಯಲ್ಲಿ ಜಿಲ್ಲೆಯಲ್ಲೂ ಹನಿ ನೀರಾವರಿಗೆ ಕ್ರಮ ಕೈಗೊಳ್ಳುವರೇ? ಎನ್ನುವ ನಿರೀಕ್ಷೆಯನ್ನು ತೊಗರಿ ನಾಡಿನ ಜನ ಹೊಂದಿದ್ದಾರೆ.

ಸಚಿವ ಸಂಪುಟದ ನಿರೀಕ್ಷೆ
ಕಲಬುರಗಿಯಲ್ಲಿ ಈ ಹಿಂದೆ 2008ರ ಸೆಪ್ಟೆಂಬರ್‌ 26ರಂದು, 2009ರ ಆಗಸ್ಟ್‌ 27ರಂದು ಮತ್ತು 2010ರ ಅಕ್ಟೋಬರ್‌ 4ರಂದು ಆಗಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ನಡೆದಿವೆ. ತದನಂತರ ಜಗದೀಶ ಶೆಟ್ಟರ ನೇತೃತ್ವದಲ್ಲೂ ಒಂದು ಸಲ ಸಚಿವ ಸಂಪುಟ ಸಭೆ ನಡೆದಿದೆ. ಆದರೆ ಕಳೆದೆರಡು ವರ್ಷಗಳ ಕಾಲ ಕೊರೊನಾ, ಪ್ರವಾಹ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆ ನಡೆಸಲು ಸೂಕ್ತ ವಾತಾವರಣವೇ ನಿರ್ಮಾಣವಾಗಲಿಲ್ಲ. ಆದರೆ ಈಗ ನೂತನ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಾದರೂ ಸಚಿವ ಸಂಪುಟ ಸಭೆ ನಡೆಯಲೆಂಬುದು ಈ ಭಾಗದ ಆಗ್ರಹ ಹಾಗೂ ನಿರೀಕ್ಷೆಯಾಗಿದೆ.

ಕ‌ಲಬುರಗಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳೆಯಲು ಮೂಲಸೌಕರ್ಯ ಕಲ್ಪಿಸುವ ಮುಖ್ಯ ಕೆಲಸವಾಗಬೇಕಿದೆ. ಈ ಭಾಗದಲ್ಲಿ ದೊಡ್ಡ-ದೊಡ್ಡ ಕಾರ್ಖಾನೆಗಳು ಬರುವಂತಾಗಲು ಭೂ ಬ್ಯಾಂಕ್‌ ಸ್ಥಾಪಿಸುವುದು ಮುಖ್ಯ. ನೀರಾವರಿ ಯೋಜನೆಗಳು ರೈತರಿಗೆ ತಲುಪಬೇಕು. ಕೊರೊನಾ ಸಮಯದಲ್ಲಿ ವ್ಯಾಪಾರಸ್ಥರ ವಿರುದ್ಧ ಹಾಕಲಾದ ಮೊಕದ್ದಮೆಗಳನ್ನು ವಾಪಸ್‌ ಪಡೆಯಬೇಕು.
ಪ್ರಶಾಂತ ಮಾನಕರ, ಅಧ್ಯಕ್ಷ, ಎಚ್‌ಕೆಸಿಸಿಐ

*ಹಣಮಂತರಾವ ಭೈರಾಮಡಗಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next