ಬೆಂಗಳೂರು: ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ರಾಜ್ಯ ಬಜೆಟ್ ಮಂಡಿಸುತ್ತಿರುವ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿದ್ದಾರೆ. ಪ್ರಮುಖವಾಗಿ ಪ್ರತಿಪಕ್ಷ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆದಿದ್ದ ಮೇಕೆದಾಟು ಯೋಜನೆಗೆ ಸಿಎಂ 1000 ಕೋಟಿ ರೂ ಅನುದಾನ ಘೋಷಣೆ ಮಾಡಿದ್ದಾರೆ. ಈ ಮೂಲಕ ವಿಪಕ್ಷಗಳ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದ್ದಾರೆ.
ಕೃಷ್ಣಾ ಮೇಲ್ದಂಡೆ 3ನೇ ಹಂತಕ್ಕೆ 5 ಸಾವಿರ ಕೋಟಿ ರೂಪಾಯಿ, ಕಳಸಾ ಬಂಡೂರಿ ಯೋಜನೆಗೆ 1 ಸಾವಿರ ಕೋಟಿ ರೂಪಾಯಿ, ಎತ್ತಿನಹೊಳೆ ಯೋಜನೆಯ ಎರಡನೇ ಹಂತದ ಕಾಮಗಾರಿಗೆ 3 ಸಾವಿರ ಕೋಟಿ ರೂ ಅನುದಾನವನ್ನು ಸಿಎಂ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ.
750 ಗ್ರಾ.ಪಂ.ಗಳಿಗೆ ತಲಾ 25 ಲಕ್ಷ ರೂಪಾಯಿ, ಪ್ರಸಕ್ತ ವರ್ಷದಲ್ಲಿ ರಾಜ್ಯದ 1000 ಕೆರೆಗಳ ಅಭಿವೃದ್ಧಿ, ತಲಾ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಮಾಡಲಾಗುವುದು. ಎರಡು ವರ್ಷದಲ್ಲಿ 25 ಲಕ್ಷ ಮನೆಗಳಿಗೆ ನಲ್ಲಿಗಳ ಮೂಲಕ ನೀರು ಸಂಪರ್ಕ ಒದಗಿಸಲಾಗುವುದು. ಕುಡಿಯುವ ನೀರು ಸಂಪರ್ಕಕ್ಕೆ 7 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ ಎಂದು ಸಿಎಂ ಘೋಷಣೆ ಮಾಡಿದರು.
ಇತರ ಘೋಷಣೆಗಳು: ಮಳೆಗಾಲದಲ್ಲಿ ಹಾನಿಯಾದ ರಸ್ತೆ ಅಭಿವೃದ್ಧಿಗೆ 300 ಕೋಟಿ, ಅಮೃತ್ ಗ್ರಾಮ ಪಂಚಾಯಿತಿ ಯೋಜನೆಗೆ 188 ಕೋಟಿ, ಗ್ರಾಮೀಣ ಭಾಗದ ರಸ್ತೆಗಳ ಸುಧಾರಣೆಗೆ 1,600 ಕೋಟಿ ರೂ ಮೀಸಲು, ಗ್ರಾಮ ಒನ್ ಯೋಜನೆ ರಾಜ್ಯಾದ್ಯಂತ ವಿಸ್ತರಣೆ ಮಾಡಲು ಯೋಜನೆ ರೂಪಿಸಲಾಗಿದೆ.
ಇದನ್ನೂ ಓದಿ:ಬೊಮ್ಮಾಯಿ ಬಜೆಟ್: ಅಭಿವೃದ್ಧಿಗೆ ಪಂಚಸೂತ್ರ; ಯಾವ ಇಲಾಖೆಗೆ ಎಷ್ಟು ಹಣ?
ಕೃಷಿ ಜಮೀನು ಡ್ರೋನ್ ಸರ್ವೆಗೆ 287 ಕೋಟಿ ರೂ ಅನುದಾನ ಘೋಷಣೆ, ನೋಂದಣಿ ಕಚೇರಿಗಳ ಉನ್ನತೀಕರಣಕ್ಕೆ 406 ಕೋಟಿ ರೂ ಮೀಸಲು, 10 ಮಹಾನಗರ ಪಾಲಿಕೆ ವ್ಯಾಪ್ತಿಯ ದಾಖಲೆ ಸ್ಕ್ಯಾನಿಂಗ್ಗಾಗಿ 15 ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ಸಿಎಂ ಹೇಳಿದರು.