Advertisement

ಪಶ್ಚಿಮಬಂಗಾಳ; ಬಿಜೆಪಿ ಸಂಸದ ಸಿಂಗ್ ನಿವಾಸದ ಸಮೀಪ ಬಾಂಬ್ ದಾಳಿ, ಆಯೋಗಕ್ಕೆ ದೂರು

12:09 PM Mar 18, 2021 | Team Udayavani |

ಕೋಲ್ಕತಾ: ಭಾರತೀಯ ಜನತಾ ಪಕ್ಷದ ಸಂಸದ ಅರ್ಜುನ್ ಸಿಂಗ್ ನಿವಾಸ, ಕಚೇರಿ ಸಮೀಪ 12ಕ್ಕೂ ಅಧಿಕ ಬಾಂಬ್ ಎಸೆದು ದಾಳಿ ನಡೆಸಿರುವ ಘಟನೆ ಪಶ್ಚಿಮಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿದ್ದು, ಇದು ತೃಣಮೂಲ ಕಾಂಗ್ರೆಸ್ ಗೂಂಡಾಗಳ ಕೃತ್ಯ ಎಂದು ಬಿಜೆಪಿ ಆರೋಪಿಸಿದೆ.

Advertisement

ಉತ್ತರ ಪರಗಣದ ಭಾಟ್ಪಾರಾದ ಜಗದ್ದಾಲ್ ಪ್ರದೇಶದಲ್ಲಿ ಕೆಲವು ಮಂದಿ ಏಕಾಏಕಿ ಸುಮಾರು 15 ಕಡೆಗಳಲ್ಲಿ ಬಾಂಬ್ ಎಸೆದು ದಾಳಿ ನಡೆಸಿರುವುದಾಗಿ ಅರ್ಜುನ್ ಸಿಂಗ್ ದೂರಿದ್ದಾರೆ. ನಾವು ಈಗಾಗಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೆಲವು ಕ್ರಿಮಿನಲ್ಸ್ ಗಳು ಶಸ್ತ್ರಾಸ್ತ್ರ ಹಿಡಿದು ತಿರುಗಾಡುತ್ತಿದ್ದಾರೆ. ಆದರೆ ಪೊಲೀಸರು ಮೌನಕ್ಕೆ ಶರಣಾಗಿರುವುದಾಗಿ ಸಿಂಗ್ ಎಎನ್ ಐ ಜತೆ ಮಾತನಾಡುತ್ತ ತಿಳಿಸಿದ್ದಾರೆ.

ಪೊಲೀಸರು ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳನ್ನು ಬಾಂಬ್ ಎಸೆಯುವ ಮುನ್ನ ಧ್ವಂಸಗೊಳಿಸಿದ್ದಾರೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಒಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ನಿಷ್ಕ್ರಿಯರಾಗಿದ್ದು, ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡಿರುವುದಾಗಿ ಸಿಂಗ್ ಹೇಳಿದರು.

“ನನ್ನ ಮಜ್ದೂರ್ ಭವನ್ ನಿವಾಸ/ಕಚೇರಿ ಸಮೀಪ 12ಕ್ಕೂ ಅಧಿಕ ಬಾಂಬ್ ಗಳನ್ನು ಎಸೆದು ದಾಳಿ ನಡೆಸಲಾಗಿದ್ದು, ಈ ದಾಳಿ ನಡೆಸಿದವರು ತೃಣಮೂಲ ಕಾಂಗ್ರೆಸ್ ಗೂಂಡಾಗಳು. ಇದರಿಂದ ಸ್ಥಳೀಯ ಜನರು ಭಯಕ್ಕೊಳಗಾಗಿದ್ದಾರೆ. ಜಿಲ್ಲಾಡಳಿತ ಜನರ ರಕ್ಷಣೆ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ಸಿಂಗ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next