ಮುಂಬಯಿ: ವಿತ್ತ ಸಚಿವ ಅರುಣ್ ಜೇತ್ಲಿ ಅವರಿಂದು ಸಂಸತ್ತಿನಲ್ಲಿ ಮಂಡಿಸಿರುವ ಕೇಂದ್ರ ಬಜೆಟ್ ದೇಶದ ಆರ್ಥಿಕಾಭಿವೃದ್ದಿಗೆ ವಿಶೇಷ ಉತ್ತೇಜನ ನೀಡಲಿದೆ ಎಂಬ ಕಾರಣಕ್ಕೆ ಮುಂಬಯಿ ಶೇರುಪೇಟೆಯ ಸೆನ್ಸೆಕ್ಸ್ ಇಂದು ಬುಧವಾರದ ವಹಿವಾಟನ್ನು 479.23 ಅಂಕಗಳ ಭಾರೀ ಏರಿಕೆಯೊಂದಿಗೆ 28,135.19 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 154.45 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 8,715.75 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
2017-18ರ ಕೇಂದ್ರ ಬಜೆಟ್ ಸಾರ್ವಜನಿಕ ಹೂಡಿಕೆಗೆ ವಿಶೇಷ ಉತ್ತೇಜನ ನೀಡಲಿದ್ದು ಆರ್ಥಿಕ ವ್ಯವಹಾರಗಳಲ್ಲಿ ಪಾರದರ್ಶಕತೆಯನ್ನು ತರಲಿದೆ ಎಂಬ ವಿಶ್ವಾಸವನ್ನು ಉದ್ಯಮ ವಲಯದಲ್ಲಿ ಹುಟ್ಟಿಸಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ವಿತ್ತ ಸಚಿವರು ಬ್ಯಾಂಕ್‌ಗಳ ಪುನಃಶ್ಚೇತನಕ್ಕೆ 10,000 ಕೋಟಿ ರೂ.ಗಳನ್ನು ತೆಗೆದಿರಿಸುವುದು ಗಮನಾರ್ಹವಾಗಿದೆ.
ಇಂದಿನ ವಹಿವಾಟಿನಲ್ಲಿ ಮಹೀಂದ್ರ, ಮಾರುತಿ, ಐಸಿಐಸಿಐ ಬ್ಯಾಂಕ್, ಟಾಟಾ ಮೋಟರ್ ಮತ್ತು ಐಟಿಸಿ ಟಾಪ್ ಗೇನರ್ ಎನಿಸಿಕೊಂಡವು. ಆದರೆ ಇದೇ ವೇಳೆ ಟಿಸಿಎಸ್, ಎನ್‌ಟಿಪಿಸಿ, ಇನ್‌ಫೋಸಿಸ್, ಭಾರ್ತಿ ಏರ್‌ಟೆಲ್ ಮತ್ತು ಡಾ.ರೆಡ್ಡಿ ಟಾಪ್ ಲೂಸರ್ ಎನಿಸಿಕೊಂಡವು.
ಸಮಾಜದ ಪ್ರತಿಯೊಂದು ವರ್ಗದ ಜನರಿಗೆ ಲಾಭದಾಯಕವೆನಿಸುವ ಈ ಬಜೆಟ್ ಭವಿಷ್ಯದೆಡೆಗೆ ಮುಖಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರುವುದನ್ನು ಶೇರು ಮಾರುಕಟ್ಟೆ ಸ್ವಾಗತಿಸಿದೆ.