ಮುಂಬಯಿ : ಭಾರತ ಸರಕಾರ ಕೈಗೊಂಡ ನೋಟ್ ಬ್ಯಾನ್ ಕ್ರಮವನ್ನು ಬಹುವಾಗಿ ಮೆಚ್ಚಿರುವ ವಿಶ್ವ ಬ್ಯಾಂಕ್, ಭಾರತದ ಜಿಡಿಪಿ 2018ರಲ್ಲಿ ಶೇ.7.6ಕ್ಕೆ ಏರಲಿದೆ ಎಂದು ಹೇಳಿರುವ ನಡುವೆಯೇ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟನ್ನು 113.27 ಅಂಕಗಳ ಮುನ್ನಡೆಯೊಂದಿಗೆ 27.253.68 ಅಂಕಗಳ ಮಟ್ಟದಲ್ಲಿ ಆರಂಭಿಸಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 24.05 ಅಂಕಗಳ ಮುನ್ನಡೆಯನ್ನು ಕಂಡು ದಿನದ ವಹಿವಾಟನ್ನು 8,404.70 ಅಂಕಗಳ ಮಟ್ಟದಲ್ಲಿ ಆರಂಭಿಸಿದೆ.
ಬೆಳಗ್ಗೆ 11.30ರ ಸುಮಾರಿಗೆ ಸೆನ್ಸೆಕ್ಸ್ 88.56 ಅಂಕಗಳ ಮುನ್ನಡೆಯೊಂದಿಗೆ 27,228.97 ಅಂಕಗಳ ಮಟ್ಟದಲ್ಲೂ, ನಿಫ್ಟಿ 18.85 ಅಂಕಗಳ ಮುನ್ನಡೆಯೊಂದಿಗೆ 8,399.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿತರವಾಗಿದ್ದವು
ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಮುಂಬಯಿ ಶೇರು 413.86 ಅಂಕಗಳ ಮುನ್ನಡೆಯನ್ನು ಸಾಧಿಸಿ ಹೊಸ ಭರವಸೆಗೆ ನಾಂದಿ ಹಾಡಿತ್ತು. ಇಂದು ಕೈಗಾರಿಕಾ ಉತ್ಪಾದನಾ ಅಂಕಿ ಅಂಶಗಳು ಬಿಡುಗಡೆಗೊಳ್ಳಲಿದ್ದು ಅವು ಆಶಾದಾಯಕವಾಗಿರುವ ಹಿನ್ನೆಲೆಯಲ್ಲಿ ಸೆನ್ಸೆಕ್ಸ್, ನಿಫ್ಟಿ ಏರುಗತಿಯಲ್ಲಿ ಮುಂದುವರಿದಿವೆ. ಇದೇ ವೇಳೆ ಇಂದಿನ ಕರೆನ್ಸಿ ಕ್ಷೇತ್ರದಲ್ಲಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ 20 ಪೈಸೆ ಏರಿರುವುದು ಕೂಡ ಗಮನಾರ್ಹವಾಗಿದೆ.
ಕಂಪೆನಿಗಳ ಮೂರನೇ ತ್ತೈಮಾಸಿಕ ಫಲಿತಾಂಶ ಬರಲು ಆರಂಭಿಸಿದ್ದು ಇಂಡಸ್ ಇಂಡ್ ಬ್ಯಾಂಕ್ ಉತ್ತಮ ಪ್ರಗತಿ ದಾಖಲಿಸಿದೆ. ಇಂದು ಟಿಸಿಎಸ್ ತ್ತೈಮಾಸಿಕ ಫಲಿತಾಂಶ ಬಿಡುಗಡೆ ಯಾಗಲಿದ್ದು ಅದರು ಶೇರುಗಳು ಈಗಲೇ ಶೇ.0.82ರಷ್ಟು ಏರಿವೆ.
ಇಂದಿನ ವಹಿವಾಟಿನಲ್ಲಿ ಐಟಿ, ಟೆಕ್, ಪವರ್, ಆಯಿಲ್ ಆ್ಯಂಡ್ ಗ್ಯಾಸ್, ಪಿಎಸ್‌ಯು ಮತ್ತು ಬ್ಯಾಂಕಿಂಗ್ ಶೇರುಗಳು ಉತ್ತಮ ಮುನ್ನಡೆ ಕಂಡಿವೆ.