ಮುಂಬಯಿ : ಕಳೆದ ಎರಡು ದಿನಗಳಲ್ಲಿ ನಿರಂತರ ನಷ್ಟವನ್ನು ಅನುಭವಿಸಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಗುರುವಾರದ ವಹಿವಾಟನ್ನು 145.71 ಅಂಕಗಳ ಉತ್ತಮ ಗಳಿಕೆಯೊಂದಿಗೆ ಆಶಾದಾಯಕವಾಗಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 53.30 ಅಂಕಗಳ ಮುನ್ನಡೆಯನ್ನು ಸಾಧಿಸಿ ದಿನದ ವಹಿವಾಟನ್ನು 8,778.00 ಅಂಕಗಳ ಮಟ್ಟದಲ್ಲಿ ಸಮಾಪನಗೊಳಿಸಿತು.
ಫಾರ್ಮಾ ಶೇರುಗಳು ಇಂದಿನ ವಹಿವಾಟಿನಲ್ಲಿ ಉತ್ತಮ ಖರೀದಿ ಬೆಂಬಲವನ್ನು ಪಡೆಯುವ ಮೂಲಕ ವಿಜೃಂಭಿಸಿದವು.
ಇಂದಿನ ವಹಿವಾಟಿನಲ್ಲಿ ಮುನ್ನಡೆ ಗಳಿಸಿದ ಶೇರುಗಳೆಂದರೆ ಸನ್ ಫಾರ್ಮಾ, ಇನ್‌ಫೋಸಿಸ್, ಮಾರುತಿ ಸುಜುಕಿ, ಟಾಟಾ ಸ್ಟೀಲ್, ಗೇಲ್, ಅರಬಿಂದೋ ಫಾರ್ಮಾ ಮತ್ತು ಟಾಟಾ ಮೋಟರ್ (ಡಿವಿಆರ್). ಇವು ಶೇ.2ರಿಂದ ಶೇ.4ರ ಪ್ರಮಾಣದಲ್ಲಿ ಏರಿಕೆ ಕಂಡವು.
ಇದಕ್ಕೆ ವ್ಯತಿರಿಕ್ತವಾಗಿ ಐಟಿಸಿ,ಲಾರ್ಸನ್, ಐಸಿಐಸಿಐ ಬ್ಯಾಂಕ್, ಏಶ್ಯನ್ ಪೇಂಟ್ಸ್, ಕೋಲ್ ಇಂಡಿಯಾ, ಭಾರ್ತಿ ಇನ್‌ಫ್ರಾಟೆಲ್, ಬಾಶ್ ಮತ್ತು ಬಿಪಿಸಿಎಲ್ ಶೇರುಗಳು ತೀವ್ರ ಒತ್ತಡಕ್ಕೆ ಗುರಿಯಾದವು.