ಮುಂಬಯಿ : ಮುಂಬಯಿ ಶೇರು ಪೇಟೆಯಲ್ಲಿ ಈಗ ಗೂಳಿ ಸವಾರಿ ನಡೆದಿದೆ. ಪಂಚ ರಾಜ್ಯ ಚುನಾವಣೆಗಳಲ್ಲಿ ಬಿಜೆಪಿ ತೋರಿರುವ ವಿಕ್ರಮವನ್ನು ಅನುಸರಿಸಿ ವಿದೇಶೀ ಬಂಡವಾಳದ ಒಳ ಹರಿವು ಗಮನಾರ್ಹವಾಗಿ ಹೆಚ್ಚುತ್ತಿರುವುದು ಕೂಡ ಇದಕ್ಕೆ ಕಾರಣವಾಗಿದೆ.
ಇಂದು ಗುರುವಾರದ ವಹಿವಾಟನ್ನು ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಹಾಗೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ದಾಖಲೆಯ ಮಟ್ಟದಲ್ಲಿ ಕೊನೆಗೊಳಿಸಿವೆ.
183 ಅಂಕಗಳ ಏರಿಕೆಯನ್ನು ದಾಖಲಿಸಿದ ಸೆನ್ಸೆಕ್ಸ್ ದಿನದ ವಹಿವಾಟನ್ನು 29,581.55 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತಾದರೆ, ನಿಫ್ಟಿ 71.50 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟನ್ನು 9,156.30 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ವಹಿವಾಟಿನಲ್ಲಿ 1,784 ಶೇರುಗಳು ಮುನ್ನಡೆ ಕಂಡರೆ, 1,043 ಶೇರುಗಳು ಹಿನ್ನಡೆಗೆ ಗುರಿಯಾದವು. 185 ಶೇರುಗಳ ಧಾರಣೆಯಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲಿ.
ಎರಡೂ ಸೂಚ್ಯಂಕಗಳಲ್ಲಿ ಇಂದು ಅದಾನಿ ಪೋರ್ಟ್ ಮತ್ತು ಟಾಟಾ ಸ್ಟೀಲ್ ಟಾಪ್ ಗೇನರ್ ಎನಿಸಿಕೊಂಡವು. ಇದೇ ವೇಳೆ ಹೀರೋ ಮೋಟೋ ಕಾರ್ಪ್ ಮತ್ತು ಭಾರ್ತಿ ಏರ್‌ಟೆಲ್ ಟಾಪ್ ಲೂಸರ್ ಎನಿಸಿಕೊಂಡವು.