ಮುಂಬಯಿ: ಭೀಮಾ ಕೋರೆಗಾಂವ್ ಪ್ರಕರಣದ ಪ್ರಮುಖ ಆರೋಪಿ ತೆಲುಗು ಕವಿ ವರವರರಾವ್ ಅವರ ಜಾಮೀನು ಅವಧಿಯನ್ನು ಮುಂಬಯಿ ಹೈಕೋರ್ಟ್ ಶುಕ್ರವಾರ ವಿಸ್ತರಿಸಿದೆ.
2018 ರಲ್ಲಿ ನಡೆದ ಭೀಮಾ ಕೋರೆಗಾವ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ವರವರರಾವ್ ಅವರನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿತ್ತು. ಸುದೀರ್ಘ ಅವಧಿಗೆ ವಿಚಾರಣಾಧೀನ ಕೈದಿಯಾಗಿದ್ದ ರಾವ್ ಕಳೆದ ಕೋವಿಡ್ ಸಂದರ್ಭದಲ್ಲಿ ವೈದಕೀಯ ಬೇಲ್ ಮೇಲೆ ಜೈಲಿನಿಂದ ಹೊರಕ್ಕೆ ಬಂದಿದ್ದರು.
ಜಾಮೀನು ಅವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ವಿಸ್ತರಣೆಕೋರಿ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಆಲಿಸಿದ ಹೈಕೋರ್ಟ್ ಫೆಬ್ರವರಿ ೫ರ ವರೆಗೆ ಜಾಮೀನು ವಿಸ್ತರಣೆ ಮಾಡಿದೆ. ಇದರ ಜತೆಗೆ ಕೋವಿಡ್ ಮೂರನೇ ಅಲೆಯ ಹೊಸ್ತಿಲಲ್ಲಿ ಅನಾರೋಗ್ಯ ಪೀಡಿತ ರಾವ್ ಅವರನ್ನು ಮತ್ತೆ ಜೈಲಿಗೆ ಕಳುಹಿಸಬೇಕೆ ಎಂದು ನ್ಯಾಯಾಲಯ ಪೊಲೀಸರನ್ನು ಪ್ರಶ್ನಿಸಿದೆ.
ವಿಚಾರಣೆ ಸಂದರ್ಭದಲ್ಲಿ ಹಾಜರಿದ್ದ ಪುಣೆ ಪೊಲೀಸರು ಈ ವಿಚಾರ ಸಂಬAಧ ನಾವು ಹೆಚ್ಚುವರಿ ಸಾಲಿಸಿಟ್ ಜನರಲ್ ಅವರಿಗೆ ವರದಿ ನೀಡಬೇಕಿದೆ. ರಾವ್ ಕೇವಲ
6 ತಿಂಗಳು ಅವಧಿಗೆ ಮಾತ್ರ ಜಾಮೀನು ಕೋರಿದ್ದು ಈಗ ವಿಸ್ತರಣೆ ಬಯಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಕೋವಿಡ್ ಎರಡು ಅಲೆಗಿಂತ ಮೂರನೇ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಮುಂಚೂಣಿ ನೌಕರರು ಸೋಂಕಿಗೆ ಒಳಗಾಗುತ್ತಿದ್ದಾರೆ. ೫೦ರಿಂದ ೬೦ ದಿನ ಇದೇ ಪರಿಸ್ಥಿತಿ ಇರಬಹುದು ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ವಿಚಾರಣೆಯನ್ನು ಫೆ.೫ಕ್ಕೆ ಮುಂದೂಡಿದ್ದು, ಅಲ್ಲಿಯವರೆಗೆ ಜಾಮೀನು ವಿಸ್ತರಿಸಿದೆ.