Advertisement

ಬಾಂಬೆ ಬಂಟ್ಸ್‌  ಉನ್ನತ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ  

04:35 PM Jan 10, 2018 | Team Udayavani |

ಮುಂಬಯಿ: ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನದ ಬಗ್ಗೆ ಉತ್ತಮ ಕನಸನ್ನು ಕಾಣಬೇಕು. ಆ ಮೂಲಕ ತಮ್ಮ ಗುರಿಯನ್ನು ಕಾರ್ಯಗತಗೊಳಿಸುವಲ್ಲಿ ಸತತ ಪ್ರಯತ್ನಗಳನ್ನು ಮಾಡಬೇಕು. ಯಾವುದೇ ಸಂದರ್ಭದಲ್ಲಿ ನಿರುತ್ಸಾಹಿತರಾಗಬಾರದು. ಜೀವನದಲ್ಲಿ ಸಾಧನೆಗಳನ್ನು ಮಾಡಿದ ಮಹಾನೀಯರನ್ನು ನಾವು ಮಾರ್ಗದರ್ಶರಾಗಿ ಕಾಣಬೇಕು ಎಂದು ಎಸ್‌. ಎಂ. ಶೆಟ್ಟಿ ಕಾಲೇಜಿನ ಪ್ರಾಂಶುಪಾಲ ಡಾ| ಶ್ರೀಧರ ಶೆಟ್ಟಿ ಅವರು ನುಡಿದರು.

Advertisement

ಅವರು ಜ.6ರಂದು ನವಿಮುಂಬಯಿ ಜುಯಿ ನಗರದ ಬಂಟ್ಸ್‌ ಸೆಂಟರ್‌ ಸಭಾಗೃಹದಲ್ಲಿ ಜರಗಿದ ಬಾಂಬೆ ಬಂಟ್ಸ್‌ ಅಸೋಸಿಯೇಶನ್‌ನ ಬಂಟ್ಸ್‌ ಇನ್ಸ್‌ಟಿಟ್ಯೂಟ್‌ ಫಾರ್‌ ಹೈಯರ್‌ ಎಜುಕೇಶನ್‌ ಇದರ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡುತ್ತಿದ್ದರು.

ನಾವು ವಿದ್ಯೆಯೊಂದಿಗೆ ಮಾನಸಿಕವಾಗಿಯೂ ಗಟ್ಟಿಯಾಗಿರಬೇಕು, ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು, ಆಗ ನಮಗೆ ಯಶಸ್ಸು ದೊರೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಬಾಂಬೆ ಬಂಟ್ಸ್‌ ಅಸೋಸಿಯೇಶನ್‌ ವಿದ್ಯೆಗೆ ಸಹಾಯ ಮಾಡುವ ದೃಷ್ಟಿಯಿಂದ ಉನ್ನತ ಶೈಕ್ಷಣಿಕ ಸಂಸ್ಥೆಗಳನ್ನು ತೆರೆದಿದ್ದು, ಆರ್ಥಿಕವಾಗಿ ಹಿಂದುಳಿದ ಮಕ್ಕಳು ಇದರ ಸದುಪಯೋಗವನ್ನು ಪಡೆದುಕೊಂಡು ಜೀವನದಲ್ಲಿ ಯಶಸ್ವಿಯನ್ನು ಕಾಣಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಉನ್ನತ ಶಿಕ್ಷಣ ಸಮಿತಿಯ ಸಲಹಾ ಮಂಡಳಿಯ ಕಾರ್ಯಾಧ್ಯಕ್ಷ ನ್ಯಾಯವಾದಿ ಅಶೋಕ್‌ ಡಿ. ಶೆಟ್ಟಿ ಅವರು ಮಾತನಾಡಿ, ವಿದ್ಯೆಗೆ ಎಲ್ಲಾ ರೀತಿಯ ಸಹಾಯವನ್ನು ನಾವು ನೀಡುತ್ತಿದ್ದು, ಮಕ್ಕಳಿಗೆ ಉತ್ತಮವಾಗಿ ಉನ್ನಯ ಶಿಕ್ಷಣವನ್ನು ನೀಡಬೇಕೆಂಬುದೇ ಬಾಂಬೆ ಬಂಟ್ಸ್‌ ಅಸೋಸಿಯೇಶನ್‌ನ ಗುರಿ ಆಗಿದೆ. ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಕಲಿತು ಈ ಸಂಸ್ಥೆಗೆ ಒಳ್ಳೆಯ ಹೆಸರನ್ನು ತರಬೇಕು ಎಂದರು.

ಉನ್ನತ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ನ್ಯಾಯವಾದಿ ರತ್ನಾಕರ ವಿ.ಶೆಟ್ಟಿ ಅವರು ಮಾತನಾಡಿ, ಉತ್ತಮ ಶಿಕ್ಷಕರು ಹಾಗೂ ಪ್ರಾಂಶುಪಾಲರನ್ನು ಹೊಂದಿರುವ ಈ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಆಡಳಿತ ಸಮಿತಿಯು ಸತತ ಪ್ರಯತ್ನಪಡುತ್ತಿದ್ದು, ಮಕ್ಕಳಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡಲು ನಾವು ಸಿದ್ಧರಿದ್ದೇವೆ. ಇಲ್ಲಿಯ ಶಿಕ್ಷಣದ ಗುಣಮಟ್ಟವು ಉತ್ತಮವಾಗಿದ್ದು, ಉತ್ತಮ ಫಲಿತಾಂಶವೂ ದೊರೆಯುತ್ತಿದೆ. ಇದಕ್ಕಾಗಿ ನಾನು ವಿದ್ಯಾರ್ಥಿಗಳನ್ನು ಅಭಿನಂದಿಸುತ್ತೇನೆ ಎಂದು ನುಡಿದರು.

Advertisement

ಬಾಂಬೆ ಬಂಟ್ಸ್‌ ಅಸೋಸಿಯೇಶನ್‌ನ ಕಾರ್ಯಾಧ್ಯಕ್ಷ ಸಿಎ ಸುರೇಂದ್ರ ಶೆಟ್ಟಿ ಅವರು ಮಾತನಾಡಿ, ವಿದ್ಯಾರ್ಥಿಗಳು ಸದಾ ಕ್ರಿಯಾಶೀಲರಾಗಿದ್ದು, ತಮ್ಮ ಪ್ರತಿಭೆಗಳನ್ನು ಸದಾ ಪ್ರದರ್ಶಿಸುವ ಮೂಲಕ ಅದನ್ನು  ಬೆಳೆಸಬೇಕು ಎಂದರು.

ಉಪಾಧ್ಯಕ್ಷ ಮುರಳಿ ಕೆ. ಶೆಟ್ಟಿ ಅವರು ಮಾತನಾಡಿ, ಮಕ್ಕಳ ಇಂದಿನ ಕಾರ್ಯಕ್ರಮವು ಉತ್ತಮವಾಗಿ ಶಿಸ್ತು ಬದ್ಧವಾಗಿದೆ. ಇದಕ್ಕಾಗಿ ನಾನು ವಿದ್ಯಾರ್ಥಿಗಳನ್ನು ಅಭನಂದಿಸುತ್ತೇನೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಬಾಂಬೆ ಬಂಟ್ಸ್‌ ಅಸೋಸಿಯೇಶನ್‌ನ ಅಧ್ಯಕ್ಷ ನ್ಯಾಯವಾದಿ ಸುಭಾಷ್‌ ಬಿ. ಶೆಟ್ಟಿ ಅವರು ಮಾತನಾಡಿ, ನಮ್ಮ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಮಕ್ಕಳಿಗೆ ಉತ್ತಮ ವಿದ್ಯೆಯನ್ನು ನೀಡುವುದು ನಮ್ಮ ಉದ್ದೇಶವಾಗಿದೆ. ಇದಕ್ಕಾಗಿ ನಾವು ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತೇವೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದು ವಿದ್ಯೆಯನ್ನು ಕಲಿತು ಜೀವನದಲ್ಲಿ ಉತ್ತಮ ನಾಗರಿಕರಾಗಬೇಕೆಂಬುದು ನಮ್ಮ ಬಯಕೆ. ಸಂಸ್ಥೆಯು ನಡೆಸುತ್ತಿರುವ ರಾತ್ರಿ ಕಾಲೇಜಿಗೂ ಉತ್ತಮ ಫಲಿತಾಂಶ ದೊರೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇಲ್ಲಿ ವಿದ್ಯೆಯನ್ನು ಪಡೆಯುತ್ತಿರುವುದು ನಮಗೆ ಸಂತೋಷವನ್ನು ಉಂಟುಮಾಡುತ್ತಿದೆ ಎಂದರು.

ವೇದಿಕೆಯಲ್ಲಿ ಬಾಂಬೆ ಬಂಟ್ಸ್‌ ಅಸೋಸಿಯೇಶನ್‌ ಕೋಶಾಧಿಕಾರಿ ಸಿಎ ವಿಶ್ವನಾಥ ಎಸ್‌. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾರದಾ ಎಸ್‌. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರಣ್‌ ಆರ್‌. ಶೆಟ್ಟಿ, ಕಾಲೇಜಿನ ಪ್ರಾಂಶುಪಾಲೆ ಡಾ| ರಶ್ಮಿ ಡಿ. ಚಿತ್ಲಾಂಗೆ ಹಾಗೂ ಕಾಲೇಜಿನ ವಿದ್ಯಾರ್ಥಿ ಕಾರ್ಯದರ್ಶಿ ಕಾಂಚನಾ ಚವಾಣ್‌ ಅವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಹಾಗೂ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರಗಿದವು. ತೀರ್ಪುಗಾರರಾಗಿ ಶೈಲಜಾ ಅಶೋಕ್‌ ಶೆಟ್ಟಿ ಹಾಗೂ ಆಶಾ ಶಿವರಾಮ್‌ ಶೆಟ್ಟಿ ಅವರು ಸಹಕರಿಸಿದರು.

ಚಿತ್ರ,ವರದಿ: ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next