ಮುಂಬಯಿ: ಮುಂಬಯಿಯ ಪ್ರತಿಷ್ಠಿತ ಜಾತೀಯ ಸಂಸ್ಥೆಗಳಲ್ಲಿ ಒಂದಾದ ಬೋಂಬೆ ಬಂಟ್ಸ್ ಅಸೋಸಿಯೇಶನ್ ಇದರ ಮಹಿಳಾ ವಿಭಾಗದ ವತಿಯಿಂದ ನಡೆದ ಭಜನ ಸ್ಪರ್ಧೆಯ ಸಮಾರೋಪ ಸಮಾರಂಭವು ಸೆ. 23ರಂದು ಜೂಹಿ ನಗರದ ಬಂಟ್ಸ್ ಸೆಂಟರ್‌ನಲ್ಲಿ ನಡೆಯಿತು.
ಬೋಂಬೆ ಬಂಟ್ಸ್ ಅಸೋಸಿ ಯೇಶನ್‌ನ ಮಾಜಿ ಅಧ್ಯಕ್ಷ ಅತ್ತೂರು ಬಾಬು ಎನ್. ಶೆಟ್ಟಿ ಅವರ ಉಪಸ್ಥಿತಿಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ನೆರೂಲ್ ಶ್ರೀ ಶನೀಶ್ವರ ಮಂದಿರದ ಅಧ್ಯಕ್ಷ ಧರ್ಮದರ್ಶಿ ರಮೇಶ್ ಎಂ. ಪೂಜಾರಿ ಅವರು ಪಾಲ್ಗೊಂಡು ಮಾತನಾಡಿ, ಭಜನ ಎಂಬುವುದು ಮನುಷ್ಯನನ್ನು ಒಂದುಗೂಡಿಸುವುದರೊಂದಿಗೆ ನಮಗೆ ಧರ್ಮದ ಹಾದಿಯಲ್ಲಿ ನಡೆಯಲು ಪ್ರೇರಣೆ ನೀಡುತ್ತದೆ. ಭಜನೆಯಿಂದ ಮಾನಸಿಕ ನೆಮ್ಮದಿಯು ದೊರೆಯುತ್ತದೆ. ದೇವರ ಆರಾಧನೆಯಲ್ಲಿ ಭಜನೆಯು ಮಹತ್ವದ್ದಾಗಿದೆ ಎಂದು ನುಡಿದು ವಿಜೇತ ಸ್ಪರ್ಧಿಗಳನ್ನು ಅಭಿನಂದಿಸಿದರು.
ಇನ್ನೋರ್ವ ಮುಖ್ಯ ಅತಿಥಿ ನವಿಮುಂಬಯಿ ಹೊಟೇಲ್ ಓನರ್ ಅಸೋಸಿಯೇಶನ್ ಅಧ್ಯಕ್ಷ ದಯಾನಂದ ಶೆಟ್ಟಿ ಅವರು ಮಾತನಾಡಿ, ನವರಾತ್ರಿಯ ಸಮಯದಲ್ಲಿ ಸಂಘ-ಸಂಸ್ಥೆಗಳು ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಉತ್ತಮ ಕಾರ್ಯವಾಗಿದೆ. ಇಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯವಾಗಿದೆ. ಮಕ್ಕಳನ್ನು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು ಎಂದರು.
ಭಜನ ಸ್ಪರ್ಧೆಯಲ್ಲಿ ವಿಟuಲ ಭಜನ ಮಂಡಳಿ ಮೀರಾರೋಡ್ ಪ್ರಥಮ ಸ್ಥಾನ, ಶ್ರೀ ದುರ್ಗಾ ಭಜನ ಮಂಡಳಿ ಡೊಂಬಿವಲಿ ದ್ವಿತೀಯ, ಪನ್ವೇಲ್ ಕಲ್ಚರಲ್ ಅಸೋಸಿಯೇಶನ್ ತೃತೀಯ ಬಹುಮಾನವನ್ನು ಪಡೆಯಿತು. ಗಣ್ಯರು ವಿಜೇತ ಸ್ಪರ್ಧಿಗಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.
ಸಮಾಧಾನಕರ ಬಹುಮಾನವನ್ನು ವಿಕ್ರೋಲಿ ಬಂಟ್ಸ್, ವರದ ಭಜನ ಮಂಡಳಿ, ಗಣಪತಿ ಅಯ್ಯಪ್ಪ ದುರ್ಗಾದೇವಿ ಭಜನ ಮಂಡಳಿಗಳು ತಮ್ಮದಾಗಿಸಿಕೊಂಡಿತು. ವೇದಿಕೆಯಲ್ಲಿ ಬೋಂಬೆ ಬಂಟ್ಸ್ ಅಸೋಸಿಯೇಶನ್ ಉಪಾಧ್ಯಕ್ಷ ನ್ಯಾಯವಾದಿ ಸುಭಾಷ್ ಬಿ. ಶೆಟ್ಟಿ, ಗೌರವ ಕಾರ್ಯದರ್ಶಿ ಸಿಎ ಚಂದ್ರಶೇಖರ ಶೆಟ್ಟಿ, ಸದಸ್ಯ ನೋಂದಾವಣೆ ಸಮಿತಿಯ ಕಾರ್ಯಾಧ್ಯಕ್ಷ ಜಯ ಸಿ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದಾ ಜೆ. ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಶಾರದಾ ಶೆಟ್ಟಿ, ಕಾರ್ಯದರ್ಶಿ ಲತಾ ಶೆಟ್ಟಿ, ಕೋಶಾಧಿಕಾರಿ ಪ್ರಭಾ ಶೆಟ್ಟಿ, ಜತೆ ಕಾರ್ಯದರ್ಶಿ ಶಾಂತಾ ಶೆಟ್ಟಿ, ಜತೆ ಕೋಶಾಧಿಕಾರಿ ಕೃಷ್ಣ ಕುಮಾರಿ ಶೆಟ್ಟಿ, ಯುವ ವಿಭಾಗದ ಕಾರ್ಯದರ್ಶಿ ವೈಷ್ಣವಿ ಶೆಟ್ಟಿ ಅವರು ಉಪಸ್ಥಿತರಿದ್ದರು.
ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಸರಳಾ ಬಿ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.