ಬೆಂಗಳೂರು: ಕೇಂದ್ರ ವಿಭಾಗದ ಮೂರು ವಸ್ತು ಸಂಗ್ರಹಾಲಯಕ್ಕೆ ಬಂದಿದ್ದ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಸಂಬಂಧ ಕಬ್ಬನ್ ಪಾರ್ಕ್, ವಿಧಾನಸೌಧ ಮತ್ತು ಹೈಗ್ರೌಂಡ್ಸ್ ಠಾಣೆ ಗಳಲ್ಲಿ ಪ್ರತ್ಯೇಕ ಮೂರು ಎಫ್ಐಆರ್ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡಗಳ ರಚಿಸಲಾಗಿದೆ. ಹಾಗೆಯೇ ತಾಂತ್ರಿಕ ತನಿಖೆ ನಡೆಸಲಾಗುತ್ತಿದೆ.
ಈ ಕುರಿತು ಶನಿವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ವಿಭಾಗದ ಡಿಸಿಪಿ ಎಚ್ .ಟಿ.ಶೇಖರ್, ಶುಕ್ರವಾರ ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯ ಕಸ್ತೂರಬಾ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಆ್ಯಂಡ್ ಟೆಕ್ನಾಲಜಿಕಲ್ ಮ್ಯೂಸಿಯಂ, ವಿಧಾನಸೌಧ ಠಾಣಾ ವ್ಯಾಪ್ತಿಯ ರಾಜ ಭವನ ರಸ್ತೆಯಲ್ಲಿರುವ ನೆಹರು ತಾರಾಲಯ, ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯ ವಸಂತನಗರದಲ್ಲಿರುವ ನ್ಯಾಷನಲ್ ಗ್ಯಾಲರಿ ಫಾರ್ ಮಾಡರ್ನ್ ಆರ್ಟ್‌ಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇ-ಮೇಲ್ ಸಂದೇಶಗಳು ಬಂದಿವೆ.
ಕೂಡಲೇ ಆಯಾ ಠಾಣಾ ವ್ಯಾಪ್ತಿಯ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದ ಸಹಾಯದಿಂದ ತಪಾಸಣೆ ನಡೆಸಿದಾಗ ಇದೊಂದು ಹುಸಿ ಬೆದರಿಕೆ ಸಂದೇಶಗಳು ಎಂಬುದು ಬೆಳಕಿಗೆ ಬಂದಿದೆ ಎಂದರು.
ಐಪಿ ವಿಳಾಸ ಪತ್ತೆಗೆ ಕೋರಿಕೆ: ಬೆದರಿಕೆ ಸಂದೇಶ ಬಂದ ಇ-ಮೇಲ್ ವಿಳಾಸಗಳ ಐಪಿ ವಿಳಾಸ ಪತ್ತೆಗೆ ತಾಂತ್ರಿಕ ತನಿಖೆ ನಡೆಸಲಾಗುತ್ತಿದ್ದು, ಜತೆಗೆ ಸಂಬಂಧಿತ ಸಂಸ್ಥೆಗೆ ಐಪಿ ವಿಳಾಸ ನೀಡುವಂತೆ ಕೋರಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ವಿಪಿಎನ್ ಬಳಸಿ ಬೆದರಿಕೆ ಸಂದೇಶ ಕಳುಹಿಸಿರುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೊರರಾಜ್ಯದಿಂದ ಕರೆ: ಮತ್ತೂಂದೆಡೆ ವಿಧಾನಸೌಧ ಪೊಲೀಸ್ ಠಾಣೆಗೆ ಕೆಲ ದಿನಗಳ ಹಿಂದೆ ಮುಂಬೈನ ಎನ್‌ಎಸ್‌ಇ ಕಚೇರಿಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಆ ಕಚೇರಿಯ ಸಿಬ್ಬಂದಿ ವಿಧಾನಸೌಧ ಪೊಲೀಸ್ ಠಾಣೆಗೆ ಕರೆ ಮಾಡಿ ಕನ್ನಿಂಗ್ಯಾಮ್ ರಸ್ತೆಯಲ್ಲಿರುವ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ ಬಾಂಬ್ ಇಟ್ಟಿರುವ ಸಂದೇಶ ಬಂದಿದೆ. ಈ ಬಗ್ಗೆ ಕ್ರಮಕೈಗೊಳ್ಳಲು ಕೋರಿದ್ದರು. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ನೆರೆ ರಾಜ್ಯದಿಂದ ಕರೆ ಬಂದಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.