ಕಲಬುರಗಿ: ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಹಾಕಲಾಗಿದೆ. ಏರ್ ಪೋರ್ಟ್ ನ ಟರ್ಮಿನಲ್ ಕಟ್ಟಡದಲ್ಲಿ ಬಾಂಬ್ ಇರಿಸಿರುವ ಬಗ್ಗೆ ಇ ಮೇಲ್ ಸಂದೇಶ ಕಳುಹಿಸಲಾಗಿದೆ.
ವಿಮಾನ ನಿಲ್ದಾಣಕ್ಕೆ ಬಾಂಬ್ ನಿಷ್ಕ್ರಿಯ ದಳ ಆಗಮಿಸಿದ್ದು, ವ್ಯಾಪಕ ಶೋಧನಾ ಕಾರ್ಯ ನಡೆಸುತ್ತಿದೆ. ಬಾಂಬ್ ನಿಷ್ಕ್ರಿಯ ದಳವಲ್ಲದೇ ಹಾಗೂ ಭದ್ರತಾ ಪಡೆಯಿಂದಲೂ ಶೋಧನೆ, ತಪಾಸಣೆ ನಡೆಸಲಾಗಿದೆ.
ಈಗ ಬೆಳಿಗ್ಗೆ ಬೆಂಗಳೂರಿನಿಂದ ಆಗಮಿಸಿದ ಸ್ಟಾರ್ ಏರ್ ವಿಮಾನದಲ್ಲೂ ಶೋಧ ತಪಾಸಣೆ ನಡೆದಿದೆ. ಬೆಂಗಳೂರಿನಿಂದ ಆಗಮಿಸಿದ ಸ್ಟಾರ್ ಏರ್ ವಿಮಾನವನ್ನು ಟರ್ಮಿನಲ್ ದಿಂದ ದೂರ ನಿಲ್ಲಿಸಲಾಗಿದೆ.
ಬಾಂಬ್ ಬೆದರಿಕೆ ನಡುವೆ ಬೆಂಗಳೂರಿನಿಂದ ವಿಮಾನದಲ್ಲೇ ಕಲಬುರಗಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಆಗಮಿಸಿದ್ದಾರೆ.
ವಾಪಸ್ಸು ಬೆಂಗಳೂರಿಗೆ ಹೋಗುವ ವಿಮಾನಯಾನ ರದ್ದು ಮಾಡಲಾಗಿದೆ. ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಪ್ರಯಾಣಿಕರೆಲ್ಲರನ್ನು ವಿಮಾನ ನಿಲ್ದಾಣದಿಂದ ಹೊರಕ್ಕೆ ಕಳುಹಿಸಲಾಗಿದೆ. ಇದರಿಂದ ಪ್ರಯಾಣಿಕರು, ವಿಮಾನ ನಿಲ್ದಾಣ ಸಿಬ್ಬಂದಿಯಲ್ಲಿ ಆತಂಕದ ವಾತಾವರಣ ಉಂಟಾಗಿದೆ.
ಬೆಂಗಳೂರಿಗೆ ತೆರಳಬೇಕಿದ್ದ ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ ಸೇರಿ ಹಲವರು ನಿಲ್ದಾಣದಿಂದ ಹೊರ ಬಂದು ಕಲಬುರಗಿ ನಗರದತ್ತ ಹೆಜ್ಜೆ ಹಾಕಿದರು.