ಮಂಗಳೂರು: ಬಾಂಬ್ ಪ್ರಕರಣದಲ್ಲಿ ಬಂಧಿತನಾಗಿ ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿ ಆದಿತ್ಯ ರಾವ್‌ನನ್ನು ರವಿವಾರ ಪೊಲೀಸರು ಸ್ಥಳ ಮಹಜರಿಗಾಗಿ ಎಲ್ಲಿಗೂ ಕರೆದೊಯ್ದಿಲ್ಲ; ಆದರೆ ಹುಸಿ ಬಾಂಬ್ ಬೆದರಿಕೆ ಕರೆ ಕೃತ್ಯದ ಬಗ್ಗೆ ಮಂಗಳೂರು ಸೈಬರ್ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಮಂಗಳೂರಿನ ಬಲ್ಮಠದ ಹೊಟೇಲ್‌ನಲ್ಲಿ ಕೆಲಸಕ್ಕೆ ಇದ್ದ ವೇಳೆ ಆದಿತ್ಯ ರಾವ್ ಆನ್‌ಲೈನ್‌ನಲ್ಲಿ ಬಾಂಬ್ ತಯಾರಿಕೆ ಬಗ್ಗೆ ಜಾಲಾಡಿ ಆನ್‌ಲೈನ್ ಮೂಲಕ ಸ್ಫೋಟಕ ಸಾಮಗ್ರಿಗಳನ್ನು ಬಿಡಿಬಿಡಿಯಾಗಿ ಚೆನ್ನೈಯಿಂದ ಖರೀಸಿದ್ದ. ಇದಕ್ಕಾಗಿ ಕಳುಹಿಸಿದ ಇ-ಮೇಲ್‌ಗಳ ಕುರಿತು ಸೈಬರ್ ಪೊಲೀಸರು ವಿಸ್ತೃತ ತನಿಖೆ ಆರಂಭಿಸಿದ್ದಾರೆ.
ರವಿವಾರ ಆತ ಪಣಂಬೂರಿನಲ್ಲಿರುವ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಕಚೇರಿಯ ಪೊಲೀಸ್ ಕಸ್ಟಡಿಯಲ್ಲಿಯೇ ಇದ್ದ.
ವಿಶೇಷ ತನಿಖಾ ತಂಡ ಆದಿತ್ಯನ ಸಮಕ್ಷಮದಲ್ಲಿ ಆತ ಮಾಡಿದ ಇ-ಮೇಲ್ ಮತ್ತು ಆನ್‌ಲೈನ್ ವಹಿವಾಟುಗಳ ಬಗ್ಗೆ ವಿವರ ಸಂಗ್ರಹಿಸಿ ವಿಶ್ಲೇಷಣೆ ನಡೆಸಿತು ಎಂದು ಮೂಲಗಳು ತಿಳಿಸಿವೆ.
ಆದಿತ್ಯ ರಾವ್ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿ ಪರಾರಿಯಾದ ಬಳಿಕ ಮಲ್ಪೆಯಿಂದ ಇಂಡಿಗೊ ವಿಮಾನಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದ. ಬಳಿಕ ಬೆದರಿಕೆ ಹಾಕಲು ಬಳಸಿದ ಮೊಬೈಲ್ ಸಿಮ್‌ನ್ನು ಎಸೆದಿದ್ದನು. ಈ ಬೆದರಿಕೆ ಕರೆಯ ಕುರಿತಾಗಿಯೂ ಸೈಬರ್ ಪೊಲೀಸರು ಆತನಿಂದ ಮಾಹಿತಿ ಕಲೆ ಹಾಕಿದ್ದಾರೆ. ಆತನ ಇಂಟರ್‌ನೆಟ್ ವ್ಯವಹಾರದ ಬಗ್ಗೆ ವಿಸ್ತೃತ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.