ಪ್ರಯಾಗ್ ರಾಜ್ : ಕಳೆದ ಶನಿವಾರ ಗುಂಡೇಟಿನಿಂದ ಹತ್ಯೆಯಾದ ದರೋಡೆಕೋರ ಅತೀಕ್ ಅಹ್ಮದ್ ಅವರ ವಕೀಲರ ನಿವಾಸದ ಬಳಿ ಕಚ್ಚಾ ಬಾಂಬ್ ಎಸೆದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಕತ್ರದ ಗೋಬರ್ ಗಲಿ ಪ್ರದೇಶದಲ್ಲಿ ಬಾಂಬ್ ಎಸೆಯಲಾಗಿದ್ದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಅಲ್ಲದೆ ಇದು ವಕೀಲರನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲ ಬದಲಾಗಿ ಬೇರೆ ಎರಡು ಗುಂಪುಗಳ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ನಡೆದಿರುವ ದಾಳಿಯಾಗಿದೆ ಎಂದು ಹೇಳಿದ್ದಾರೆ.
ಘಟನೆ ನಡೆದ ಕೂಡಲೇ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಇದೊಂದು ಕಚ್ಚಾ ಬಾಂಬ್ ಎಂಬುದು ಗೊತ್ತಾಗಿದೆ, ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರ ವಶದಲ್ಲಿದ್ದ ಅತಿಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅವರನ್ನು ಕಳೆದ ಶನಿವಾರ ತಪಾಸಣೆಗಾಗಿ ಇಲ್ಲಿನ ವೈದ್ಯಕೀಯ ಕಾಲೇಜಿಗೆ ಪೊಲೀಸ್ ಸಿಬ್ಬಂದಿ ಕರೆದೊಯ್ಯುತ್ತಿದ್ದ ವೇಳೆ ಮಾಧ್ಯಮದವರ ಸೋಗಿನಲ್ಲಿ ಬಂದ ಮೂವರು ಯುವಕರು ಅತಿಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದರು.
ಅತೀಕ್ ಅಹ್ಮದ್ ಈ ಮೊದಲು ತನ್ನ ಜೀವಕ್ಕೆ ಬೆದರಿಕೆ ಇದೆ ಹಾಗಾಗಿ ಒಂದು ವೇಳೆ ತನಗೆ ಏನಾದರು ಅನಾಹುತ ಸಂಭವಿಸಿ ಹತ್ಯೆಯಾದಲ್ಲಿ ಪತ್ರವೊಂದನ್ನು ಯುಪಿ ಸಿಎಂ ಹಾಗೂ ಸಿಜೆಐ ಗೆ ತಲುಪಿಸಲು ಸೂಚಿಸಿದ್ದ ಆ ಪತ್ರ ಈಗ ಸಿಎಂ ಹಾಗೂ ಸಿಜೆಐ ಗೆ ತಲುಪಲಿದೆ ಎಂದು ಅತೀಕ್ ಅಹ್ಮದ್ ನ ವಕೀಲರಾದ ವಿಜಯ್ ಮಿಶ್ರಾ ಹೇಳಿದ್ದರು. ಈ ಹೇಳಿಕೆ ನೀಡಿದ ಬೆನ್ನಲ್ಲೇ ಅವರ ನಿವಾಸದ ಬಳಿ ಕಚ್ಚಾ ಬಾಂಬ್ ದಾಳಿ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿತ್ತು.
ಇದನ್ನೂ ಓದಿ: Airport; ಶಬರಿಮಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೇಂದ್ರ ಸರಕಾರ ಹಸಿರು ನಿಶಾನೆ