ಧನಂಜಯ್ ನಟನೆಯ “ಉತ್ತರಕಾಂಡ’ ಸಿನಿಮಾದ ಹೆಸರು ಕೇಳಿಬರಲು ಆರಂಭವಾಗಿ ಸುಮಾರು ಒಂದೂವರೆ ವರ್ಷ ದಾಟಿದೆ. ಚಿತ್ರದ ಮುಹೂರ್ತ ಕೂಡಾ ಆಗಿ ವರ್ಷ ಕಳೆದಿದೆ. ಆದರೆ, ಚಿತ್ರೀಕರಣ ಮಾತ್ರ ಇನ್ನೂ ಆರಂಭವಾಗಿಲ್ಲ. ಒಂದು ಕೂಡಿಬಂದರೆ ಮತ್ತೂಂದು ಕೂಡಿ ಬರುತ್ತಿಲ್ಲ. ಇನ್ನೇನು ಎಲ್ಲವೂ ಫೈನಲ್ ಆಯಿತು ಎಂದು ಚಿತ್ರತಂಡ ಚಿತ್ರೀಕರಣಕ್ಕೆ ಹೊರಡಲು ಅಣಿಯಾಗುವಷ್ಟರಲ್ಲಿ ನಾಯಕಿ ರಮ್ಯಾ ಚಿತ್ರತಂಡದಿಂದ ಹೊರಬಂದಿದ್ದಾರೆ. ಈಗ ಮತ್ತೆ ಹೊಸ ನಾಯಕಿಯ ಹುಡುಕಾಟದಲ್ಲಿ ಚಿತ್ರತಂಡ ತೊಡಗಿದೆ. ಈ ನಡುವೆಯೇ ಚಿತ್ರತಂಡದಿಂದ ಮತ್ತೂಂದು ಅಪ್‌ಡೇಟ್ ಬಂದಿದೆ. ಅದು ಚಿತ್ರದ ಸಂಗೀತ ನಿರ್ದೇಶಕರ ಕುರಿತು.
ಖ್ಯಾತ ಹಿಂದಿ ಗಾಯಕ, ಸಂಗೀತ ನಿರ್ದೇ ಶಕ ಅಮಿತ್ ತ್ರಿವೇದಿ ಉತ್ತರಕಾಂಡ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಅಮಿತ್ ತ್ರಿವೇದಿ ಕೇವಲ ಹಿಂದಿ ಚಿತ್ರಗಳಷ್ಟೇ ಅಲ್ಲದೆ, ತೆಲುಗು, ಮಲಯಾಳಂ ಚಿತ್ರಗಳಲ್ಲಿ ತಮ್ಮ ವಿಭಿನ್ನ ಸಂಗೀತ ಸಂಯೋಜನೆ ಶೈಲಿಯ ಮೂಲಕ ಛಾಪನ್ನು ಮೂಡಿಸಿದ್ದಾರೆ. ದೇವ್ ಡಿ, ಕ್ವೀನ್, ವೇಕ್ ಅಪ್ ಸಿಡ್, ಇಂಗ್ಲಿಷ್ ವಿಂಗ್ಲಿಷ್, ಕೈ ಪೋ ಚೆ, ಲೂಟೇರಾ, ಉಡ್ತಾ ಪಂಜಾಬ್, ಡಿಯರ್ ಜಿಂದಗಿ… ಹೀಗೆ ಅನೇಕ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಈಗ ಕನ್ನಡಕ್ಕೆ ಬಂದಿದ್ದಾರೆ.
ಅಂದಹಾಗೆ, ಉತ್ತರಕಾಂಡದ ಪ್ರೋಮೋಗೆ ಸ್ಯಾಂಡಲ್‌ವುಡ್ ನ ಖ್ಯಾತ ಸಂಗೀತ ನಿರ್ದೇಶಕ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದು, ಸಂಪೂರ್ಣ ಚಿತ್ರಕ್ಕೆ ಅಮಿತ್ ತ್ರಿವೇದಿ ಸಂಗೀತ ಸಂಯೋಜನೆ ಮಾಡಲಿದ್ದಾರೆ.
ಈ ಕುರಿತು ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕ ರೋಹಿತ್ ಪದಕಿ ಮಾತನಾಡಿ, “ಉತ್ತರ ಕಾಂಡ ಚಿತ್ರದ ಮೂಲಕ ನಾವು ಉತ್ತರಕರ್ನಾಟಕದ ನಾಟಿ ಮತ್ತು ಹಳ್ಳಿಗಾಡಿನ ಕಥೆಯನ್ನು ಹೇಳಬಯಸುತ್ತೇವೆ. ಇಂತಹ ಸ್ಥಳೀಯ ಭಾವನೆಯನ್ನು ಉಂಟು ಮಾಡುವ ಕಥೆಗೆ ಅಮಿತ್ ತ್ರಿವೇದಿ ಅವರ ಸಂಗೀತ ಸಾಥ್ ನೀಡಲಿದೆ’ ಎನ್ನುತ್ತಾರೆ.
“ಉತ್ತರಕಾಂಡ’ ಆ್ಯಕ್ಷನ್ ಡ್ರಾಮಾ ಚಿತ್ರವಾಗಿದ್ದು, ಚಿತ್ರದಲ್ಲಿ ಶಿವರಾಜ್ ಕುಮಾರ್ ಮತ್ತು ಧನಂಜಯ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಏಪ್ರಿಲ್ 15ರಿಂದ ಚಿತ್ರೀಕರಣ ಆರಂಭಿ ಸಲಿದೆ.