Advertisement

ಅತ್ಯಾಚಾರ,ಡ್ರಗ್ಸ್‌, ಡಾನ್‌ ಜತೆ ಸಂಬಂಧ..ವಿವಾದದಿಂದ ಬಣ್ಣದ ಲೋಕದಿಂದ ಜಾರಿದ ಸೆಲೆಬ್ರಿಟಿಗಳು

05:56 PM Jul 27, 2024 | ಸುಹಾನ್ ಶೇಕ್ |

ಬಣ್ಣದ ಲೋಕದಲ್ಲಿ ಯಶಸ್ಸು ಸಿಗುವುದು ಅಷ್ಟು ಸುಲಭವಲ್ಲ. ಒಂದು ವೇಳೆ ಯಶಸ್ಸು ಸಿಕ್ಕರೂ ಅದನ್ನು ಸತತವಾಗಿ ಕಾಪಾಡಿಕೊಂಡು ಪ್ರೇಕ್ಷಕರ ಮನಗೆಲ್ಲುವುದು ಕೂಡ ಅಷ್ಟು ಸುಲಭದ ಮಾತಲ್ಲ. ಬಾಲಿವುಡ್‌ ನಲ್ಲಿ ಮೊದಲಿನಿಂದಲೂ ಕಾಸ್ಟಿಂಗ್‌ ಕೌಚ್‌ ಹಾಗೂ ಇತ್ತೀಚೆಗಿನ ವರ್ಷದಲ್ಲಿ ಕೇಳಿ ಬಂದ “ಮಿಟೂʼ ಆರೋಪಗಳು ಬಹುತೇಕರ ಕೆರಿಯರ್‌ ಗೆ ದೊಡ್ಡ ಹೊಡೆತ ನೀಡಿದ್ದು ಮಾತ್ರವಲ್ಲದೆ, ಅವರನ್ನು ಪ್ರೇಕ್ಷಕರು ಧಿಕ್ಕರಿಸಿಯೇ ಬಿಟ್ಟಿದ್ದಾರೆ.

Advertisement

ಬಣ್ಣದ ಲೋಕದಲ್ಲಿ ಸಿಕ್ಕ ಯಶಸ್ಸನ್ನು ಬಳಸಿಕೊಂಡು ಅದನ್ನು ಇಲ್ಲ ಸಲ್ಲದ ಮಾರ್ಗದಲ್ಲಿ ಅಳವಡಿಸಿ ತನ್ನ ವೃತ್ತಿ ಬದುಕನ್ನೇ ಹಾಳು ಮಾಡಕೊಂಡವರ ಪಟ್ಟಿ ಇಲ್ಲಿದೆ.

ನಟ ಶೈನಿ ಅಹುಜಾ:- ಅತ್ಯಾಚಾರ ಆರೋಪ; ಶೈನಿ ಅಹುಜಾ (Shiney Ahuja) ಬಾಲಿವುಡ್‌ಗೆ ಬಂದ ಆರಂಭಿಕ ದಿನಗಳಲ್ಲಿ ತನ್ನ ನಟನಾ ಕೌಶಲ್ಯದಿಂದ ಅಪಾರ ಮಂದಿಯನ್ನು ರಂಜಿಸಿದ ನಟ. ʼಗ್ಯಾಂಗ್‌ ಸ್ಟರ್‌ʼ ನಲ್ಲಿನ ಅವರ ಅಭಿನಯ ಅಂದು ಅನೇಕರ ಗಮನ ಸೆಳೆದಿತ್ತು. ‘ವೋ ಲಮ್ಹೆʼ ಚಿತ್ರದಲ್ಲೂ ಅವರು ಗಮನ ಸೆಳೆದಿದ್ದರು.

ಆದರೆ ಅವರ ಖ್ಯಾತಿಗೆ ಬ್ರೇಕ್‌ ಬಿದ್ದದ್ದು 2009ರಲ್ಲಿ. ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಕೆಯ ಮೇಲೆ ಆತ್ಯಾಚಾರವೆಸಗಿದ ಆರೋಪ ಅವರ ಮೇಲೆ ಕೇಳಿ ಬಂದಿತ್ತು. ಈ ಪ್ರಕರಣ ವ್ಯಾಪಕವಾಗಿ ಎಲ್ಲೆಡೆ ಚರ್ಚೆಯಾದಾಗ, ನಟ ಶೈನಿ ಅವರನ್ನು ಪೊಲೀಸರು ಬಂಧಿಸಿದ್ದರು. ಇದರಲ್ಲಿ ಅವರು ದೋಷಿ ಎಂದು ಸಾಬೀತಾಗಿತ್ತು.

Advertisement

ಇದಾದ ನಂತರ ಅವರು ಜಾಮೀನು ಪಡೆದು ಜೈಲಿನಿಂದ ಹೊರಬಂದು ಬಣ್ಣದ ಲೋಕದಲ್ಲಿ ಮತ್ತೆ ಕಂಬ್ಯಾಕ್‌ ಮಾಡಲು ಪ್ರಯತ್ನಿಸಿದರೂ ಅದು ಈ ಹಿಂದೆ ಕೇಳಿಬಂದ ಆರೋಪಗಳಿಂದ ಸಾಧ್ಯವಾಗಲಿಲ್ಲ.

ಶಕ್ತಿ ಕಪೂರ್:‌- ಕಾಸ್ಟಿಂಗ್‌ ಕೌಚ್‌ ಸ್ಟಿಂಗ್‌ ಆಪರೇಷನ್; ಬಾಲಿವುಡ್‌ನ ಹಿರಿಯ ನಟ ಶಕ್ತಿ ಕಪೂರ್‌ (Shakti Kapoor) ಬಣ್ಣದ ಲೋಕದಲ್ಲಿ ದೊಡ್ಡ ಹೆಸರು ಮಾಡಿದವರು. ಆದರೆ ಅದೊಂದು ದಿನ ಖಾಸಗಿ ಸುದ್ದಿ ವಾಹಿನಿಯೊಂದು ಅವರ ಮೇಲೆ ಸ್ಟಿಂಗ್‌ ಆಪರೇಷನ್‌ ಮಾಡಿದಾಗ ಅವರ ಅಸಲಿ ಬಣ್ಣ ಹೊರ ಜಗತ್ತಿಗೆ ಗೊತ್ತಾಗಿತ್ತು.

ನಟಿಯಾಗುವ ನಿಟ್ಟಿನಲ್ಲಿ ವರದಿಗಾರ್ತಿಯೊಬ್ಬರು ಅವರ ಬಳಿ ಹೋದಾಗ ನಟ ಶಕ್ತಿ ಕಪೂರ್‌  ಕಾಸ್ಟಿಂಗ್ ಕೌಚ್ ಮಾಡಿದ್ದರು. ಈ ದೃಶ್ಯ ಸುದ್ದಿ ವಾಹಿನಿಯಲ್ಲಿ ಪ್ರಸಾರವಾದಾಗ ಅವರ ಮೇಲೆ ಆಕ್ರೋಶ ವ್ಯಕ್ತವಾಗಿತ್ತು. ಅವರ ಖ್ಯಾತಿಗೆ ಇದರಿಂದ ಕೆಲ ಸಮಯ ಏಟು ಬಿದ್ದಿತ್ತು. ಆದರೆ ಇದಾದ ಕೆಲ ತಿಂಗಳ ನಂತರ ಏನು ಆಗೇ ಇಲ್ಲವೆನ್ನುವಂತೆ ಶಕ್ತಿ ಕಪೂರ್‌ ಮತ್ತೆ ಬಣ್ಣದ ಲೋಕದಲ್ಲಿ ಮಿಂಚಲು ಶುರು ಮಾಡಿದರು.

ಫರ್ದೀನ್ ಖಾನ್: ಮಾದಕ ದ್ರವ್ಯ ಹೊಂದಿದ್ದ ಆರೋಪ; ಬಾಲಿವುಡ್‌ ನಲ್ಲಿ ಆರಂಭಿಕ ದಿನಗಳಲ್ಲಿ  ಶಾರುಖ್, ಸಲ್ಮಾನ್‌ ರಂತೆಯೇ ಸಿನಿಮಾಗಳಲ್ಲಿ ಕಾಣಿಸಿಕೊಂಡ ನಟ ಇವರು. ‘ಪ್ರೇಮ್ ಅಗ್ಗನ್’ ಮತ್ತು ‘ಜಂಗಲ್ʼ ನಂತಹ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆಯನ್ನು ಗಳಿಸಿದ ಫರ್ದೀನ್‌ ಖಾನ್‌ (Fardeen Khan) ಅವರನ್ನು 2001ರಲ್ಲಿ ಪೊಲೀಸರು ಬಂಧಿಸಿದ್ದರು. ಅವರು ಕೊಕೇನ್ ಹೊಂದಿದ್ದಕ್ಕಾಗಿ ಅವರನ್ನು ಬಂಧಿಸಲಾಗಿತ್ತು. ಇದು ಮಾಧ್ಯಮಗಳಲ್ಲಿ ಪ್ರಸಾರವಾಗಿ ಅವರ ವೃತ್ತಿ ಬದುಕಿನ ಮೇಲೆ ಕಟ್ಟ ಪರಿಣಾಮ ಬೀರಿತ್ತು. ಇದಾದ ನಂತರ ಅವರು ವ್ಯಸನಮುಕ್ತ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾದಕ ವ್ಯಸನದ ಚಟದಿಂದ ಹೊರಬಂದು ಬಣ್ಣದ ಲೋಕಕ್ಕೆ ಕಂಬ್ಯಾಕ್‌ ಮಾಡಲು ಯತ್ನಿಸಿದರು. ಆದರೆ ಮೊದಲಿನ ಆಗಿನ ಖ್ಯಾತಿ ಅವರಿಗೆ ಮತ್ತೆ ಲಭಿಸಿಲ್ಲ. ಇದರಿಂದ ಅವರು ಬಣ್ಣದ ಲೋಕದಿಂದ ಒಂದಷ್ಟು ಕಾಲ ದೂರ ಉಳಿಯುವಂತಾಯಿತು.

ಆದರೆ ಅನೇಕ ವರ್ಷದ ಫರ್ದೀನ್‌ ಇದೀಗ ಬಾಲಿವುಡ್‌ ಗೆ ಕಂಬ್ಯಾಕ್‌ ಮಾಡಿದ್ದಾರೆ. ಅಕ್ಷಯ್‌ ಕುಮಾರ್‌ʼಖೇಲ್ ಖೇಲ್ ಮೇʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಮನ್ ವರ್ಮಾ:- ಕಾಸ್ಟಿಂಗ್ ಕೌಚ್ ; ಒಂದಷ್ಟು ಟಿವಿ ಕಾರ್ಯಕ್ರಮ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದ ಅಮನ್‌ ವರ್ಮಾ (Aman Verma) ಕಾಸ್ಟಿಂಗ್‌ ಕೌಚ್‌ ಆರೋಪದಿಂದ ಬಣ್ಣದ ಲೋಕದಲ್ಲಿ ಮತ್ತೆ ಮಿಂಚಲು ಸಾಧ್ಯವಾಗಲಿಲ್ಲ.

2005ರಲ್ಲಿ ಸಿನಿಮಾದಲ್ಲಿ ನಟಿಸುವ ಅವಕಾಶ ನೀಡುತ್ತೇನೆಂದು ಉದಯನ್ಮೊಖ ನಟಿಯರನ್ನು ಪುಸಲಾಯಿಸಿ ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದು ಅವರ ವೃತ್ತಿ ಬದುಕಿನ ಮೇಲೆ ತೀವ್ರ ಪರಿಣಾಮ ಬೀರಿತು. ಇದರಿಂದ ಅವರಿಗೆ ಬರುತ್ತಿದ್ದ ಆಫರ್‌ ಗಳು ಕೂಡ ಕಡಿಮೆ ಆಗಲು ಶುರುವಾಯಿತು. ನಿಧಾನವಾಗಿ ಅಮನ್‌ ವರ್ಮಾ ಬಣ್ಣದ ಲೋಕದಿಂದ ಮರೆಯಾದರು.

ಮಮತಾ ಕುಲಕರ್ಣಿ:- ಡ್ರಗ್ಸ್‌ ಸಾಗಾಟ; 90ರ ದಶಕದಲ್ಲಿ ತನ್ನ ಬೋಲ್ಡ್‌ & ಗ್ಲಾಮರಸ್‌ ಲುಕ್‌ ನಿಂದ ಬಿಟೌನ್‌ ನಲ್ಲಿ ಮಿಂಚಿದ್ದ ಮಮತಾ ಕುಲಕರ್ಣಿ(Mamta Kulkarni) ಬೃಹತ್ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಸಿಲುಕಿದ ನಂತರ ವೃತ್ತಿಜೀವನ ಹಳಿತಪ್ಪಿತು.

2016 ರಲ್ಲಿ ಮಮತಾ ಮತ್ತು ಅವರ ಪತಿಯನ್ನು ಕೀನ್ಯಾದಲ್ಲಿ $20 ಮಿಲಿಯನ್ ಡ್ರಗ್ಸ್‌ ಸಾಗಾಟದ ಕೇಸ್‌ ನಲ್ಲಿ ಶಂಕಿತರೆಂದು ಬಂಧಿಸಲಾಗಿತ್ತು. ಇಂತಹ ಗಂಭೀರ ಆರೋಪದಲ್ಲಿ ಬಂಧನವಾದ ಬಳಿಕ ಮಮತಾ ಅವರ ವೃತ್ತಿ ಜೀವನ ಬಹುತೇಕ ಇದರಲ್ಲೇ ಕೊನೆಯಾಗಿತ್ತು.

ಸೂರಜ್ ಪಾಂಚೋಲಿ:- ಜಿಯಾ ಖಾನ್ ಪ್ರಕರಣ; ನಟ ಆದಿತ್ಯ ಪಾಂಚೋಲಿ ಮತ್ತು ನಟಿ ಜರೀನಾ ವಹಾಬ್ ಅವರ ಪುತ್ರ ಸೂರಜ್ ಪಾಂಚೋಲಿ (Sooraj Pancholi) ಅವರ ವೃತ್ತಿ ಬದುಕು ಆರಂಭದಲ್ಲೇ ಕಪ್ಪುಚುಕ್ಕೆಯಿಂದಲೇ ಶುರುವಾಯಿತು.

‘ನಿಶಬ್ದ್’ ಮತ್ತು ‘ಗಜಿನಿʼ ಚಿತ್ರದಲ್ಲಿ ನಟಿಸಿದ್ದ ಜಿಯಾ ಖಾನ್‌ 2013ರಲ್ಲಿ ತಮ್ಮ ಅಪಾರ್ಟ್‌ ಮೆಂಟ್‌ ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಪ್ರಕರಣದಲ್ಲಿ ನಟ ಸೂರಜ್‌ ಪಾಂಚೋಲಿ ಅವರ ಹೆಸರು ಕೇಳಿಬಂದಿತ್ತು. ಜಿಯಾ ಖಾನ್‌ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಸೂರಜ್‌ ರನ್ನು ಬಂಧಿಸಲಾಗಿತ್ತು. 22ದಿನಗಳ ಅವರು ಜೈಲಿನಲ್ಲಿದ್ದರು. ಕಾನೂನು ಹೋರಾಟಗಳನ್ನು ಮಾಡಿ ಜಾಮೀನು ಪಡೆದು ಸೂರಜ್‌ ಹೊರಬಂದಿದ್ದರು. ಇದರಿಂದ ಅವರ ವೃತ್ತಿ ಬದುಕಿನ ಮೇಲೆ ನೆಗೆಟಿವ್ ಪರಿಣಾಮ ಬೀರಿತ್ತು.

ಮೋನಿಕಾ ಬೇಡಿ:- ಭೂಗತ ಜಗತ್ತಿನ ಡಾನ್ ಅಬು ಸಲೇಂ ಜೊತೆ ನಂಟು; 90 ದಶಕದಲ್ಲಿ ಬಣ್ಣದ ಲೋಕದಲ್ಲಿ ಮಿಂಚಿದ ನಟಿ ಮೋನಿಕಾ ಬೇಡಿ  (Monica Bedi) ಅವರ ವೃತ್ತಿ ಬದುಕಿನ ಮೇಲೆ ಆ ನಂಟು ನೆಗೆಟಿವ್‌ ಪರಿಣಾಮವನ್ನು ಬೀರಿತ್ತು.

ನಟಿ ಕುಖ್ಯಾತ ಭೂಗತ ಡಾನ್ ಅಬು ಸಲೇಂ ಅವರೊಂದಿಗಿನ ಒಡನಾಟದಿಂದಾಗಿ ವೃತ್ತಿ ಬದುಕನ್ನೇ ಹಾಳು ಮಾಡಿಕೊಂಡರು. ಮೋನಿಕಾ 2002 ರಲ್ಲಿ ಪೋರ್ಚುಗಲ್‌ನಲ್ಲಿ ನಕಲಿ ದಾಖಲೆಗಳ ಮೂಲಕ ದೇಶವನ್ನು ಪ್ರವೇಶಿಸಿದ್ದಕ್ಕಾಗಿ ಅಬು ಸಲೇಂ ಅವರೊಂದಿಗೆ ಸಿಕ್ಕಿಬಿದ್ದಿದ್ದರು ಈ ಸಂಬಂಧ ಇಬ್ಬರನ್ನು ಬಂಧಿಸಿದಾಗ, ನಟಿ ಡಾನ್‌ ಜೊತೆ ಸಂಬಂಧ ಹೊಂದಿರುವುದು ಬೆಳಕಿಗೆ ಬಂದಿತ್ತು.

ಇದಾದ ನಂತರ ಅವರು ರಿಯಾಟಲಿ ಶೋ ರಿಯಾಲಿಟಿ ಟಿವಿ ಕಾರ್ಯಕ್ರಮಗಳ ಮೂಲಕ ಕಂಬ್ಯಾಕ್‌ ಮಾಡಲು ಪ್ರಯತ್ನಿಸಿದರೂ, ಅದಕ್ಕೆ ಮೊದಲಿನಂತೆ ಯಶಸ್ಸು ಸಿಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next