ಸಾಮಾನ್ಯವಾಗಿ ಒಂದು ಮಾತಿದೆ, ಅದೇನೆಂದರೆ ದಕ್ಷಿಣ ಭಾರತದಿಂದ ಬಾಲಿವುಡ್‌ಗೆ ಯಾರೇ ಹೋದರೂ, ಬಾಲಿವುಡ್ ಮಂದಿ ಅವರನ್ನು ಬೇಗನೇ ಒಳಸೇರಿಸಿಕೊಳ್ಳುವುದಿಲ್ಲ ಎಂದು. ಅದಕ್ಕೆ ಉದಾಹರಣೆಯಾಗಿ ಒಂದಷ್ಟು ಮಂದಿ ಬಾಲಿವುಡ್‌ಗೆ ಹೋಗಿ, ಅಲ್ಲಿ ಏನೂ ಸಾಧನೆ ಮಾಡಲಾಗದೇ ವಾಪಸ್ ಬಂದಿರೋದು.
ಆದರೆ, ಎಸ್‌ಪಿಬಿ ವಿಷಯದಲ್ಲಿ ಇದು ಸುಳ್ಳಾಗಿದೆ. ಎಸ್‌ಪಿಬಿ ಬಾಲಿವುಡ್‌ನಲ್ಲೂ ತಮ್ಮದೇ ಹಾದಿಯನ್ನು ಮಾಡುತ್ತಾ ಬೇಡಿಕೆಯ ಗಾಯಕರಾದವರು. ಬಾಲಿವುಡ್‌ನ ಮಹಮ್ಮದ್ ರಫಿ, ಕಿಶೋರ್ ಕುಮಾರ್‌ರಂತಹ ದಿಗ್ಗಜ ಗಾಯಕರನ್ನೇ ನೆಚ್ಚಿಕೊಂಡಿದ್ದ ಬಾಲಿವುಡ್ ಸಿನೆಮಾ ಮಂದಿಗೆ ಎಸ್‌ಪಿಬಿ ತಮ್ಮ ಕಂಠಸಿರಿಯ ಮೂಲಕ ರಫಿ, ಕಿಶೋರ್ ಅವರು ಇಲ್ಲ ಎಂಬ ಕೊರಗನ್ನು ನೀಗಿಸಿದರು. ಬಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕರಾದ ಲಕ್ಷ್ಮೀಕಾಂತ್ ಪ್ಯಾರೇ ಲಾಲ್ ಅವರ ಸಂಗೀತ ನಿರ್ದೇಶನದ “ಏಕ್ ದೂಜೇ ಕೇಲಿಯೇ’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ 2014ರವರೆಗೂ ಬೇಡಿಕೆಯ ಗಾಯಕರಾಗಿಯೇ ಇದ್ದರು.
1981ರಿಂದ ಹಿಂದಿಯಲ್ಲಿ ಬಂದ ಬಹುತೇಕ ಚಿತ್ರಗಳಲ್ಲಿ ಎಸ್‌ಪಿಬಿ ಅವರ ಧ್ವನಿ ಇದೆ. ಆರಂಭದಲ್ಲಿ ಎಸ್‌ಪಿಬಿ ಹಾಡಲು ಹೋಗಿದ್ದಾಗ ಸಂಗೀತ ನಿರ್ದೇಶಕ ಲಕ್ಷ್ಮೀಕಾಂತ್, “ಈ ಮದ್ರಾಸಿ ನನ್ನ ಹಾಡುಗಳಿಗೆ ನ್ಯಾಯ ಕೊಡಬಲ್ಲನೇ’ ಎಂದು ಕೇಳಿದರಂತೆ. ಆಗ ಆ ಚಿತ್ರದ ನಿರ್ದೇಶಕ ಕೆ. ಬಾಲಚಂದರ್, ಚಿತ್ರದ ಕೊನೆಯವರೆಗೂ ಪ್ರಮುಖ ಪಾತ್ರವು ಉತ್ತಮ ಹಿಂದಿ ಮಾತನಾಡಲು ಸಾಧ್ಯವಿಲ್ಲ, ಹಾಡಿನಲ್ಲಿ ಸ್ವಲ್ಪ ದಕ್ಷಿಣದ ಶೈಲಿ ಕಂಡು ಬಂದರೂ ಸಮಸ್ಯೆ ಇಲ್ಲ ಎಂದು ಹೇಳಿ ಹಾಡಿಸಿದರಂತೆ. ಆ ಚಿತ್ರದ “ತೇರೇ ಮೇರೆ ಬೀಚ್’, “ಹಮ್ ತುಮ್ ದೋನೋ ಜಬ್ ಮೀಲಿಂಗೆ’, “ಮೇರೆ ಜೀವನ್ ಸಾಥಿ’, “ಹಮ್ ಬನೇ ತುಮ್ ಬನೇ’ ಹಾಡುಗಳನ್ನು ಹಾಡಿದ್ದಾರೆ.
ಅಲ್ಲಿಂದ ಆರಂಭವಾದ ಅವರ ಬಾಲಿವುಡ್ ಜರ್ನಿ ಯಶಸ್ವಿಯಾಗಿ ಮುಂದುವರಿದುಕೊಂಡು ಬಂತು. “ಝರಾ ಸೇ ಜಿಂದಾಗಿ’, “ಮೈ ನೇ ಪ್ಯಾರ್ ಕೀಯಾ’, “ಸಾಜನ್’, “ರೋಜಾ’, “ಹಮ್ ಆಪ್ಕೆ ಹೈ ಕೌನ್’, “ಹಿಂದೂಸ್ತಾನಿ’, “ಲವ್ ಬರ್ಡ್ಸ್’, “ಮಿಸ್ಟರ್ ರೋಮಿಯೋ’, “ಕಭಿ ನಾ ಕಭಿ’: “ತುಹಿ ಮೇರಾ ದಿಲ್’ ಸೇರಿದಂತೆ ಹಲವು ಹಿಂದಿ ಸಿನೆಮಾಗಳಿಗೆ ಎಸ್‌ಪಿಬಿ ಹಾಡಿದ್ದಾರೆ.
ಎಸ್‌ಪಿಬಿ ಬಾಲಿವುಡ್‌ನಲ್ಲಿ ಎಷ್ಟು ಬಿಝಿಯಾಗಿದ್ದರೆಂದರೆ ದಿನದಲ್ಲಿ 15 ಅಥವಾ 16 ಹಿಂದಿ ಹಾಡುಗಳನ್ನು ರೆಕಾರ್ಡ್ ಮಾಡುವ ಮಟ್ಟಕ್ಕೆ ಬಿಝಿಯಾದರು.