Advertisement

ಕನ್ನಡ ಚಿತ್ರರಂಗಕ್ಕೆ ಬಾಲಿವುಡ್‌ ಕ್ರೇಜ್‌

06:00 AM Jun 15, 2018 | |

“ಕನ್ನಡದ ನಟಿಯರಿಗೆ ಅವಕಾಶ ಕೊಡುತ್ತಿಲ್ಲ. ಬಾಲಿವುಡ್‌ನಿಂದ ಕರೆಸುತ್ತಿದ್ದಾರೆ. ಯಾಕೆ ನಮ್ಮಲ್ಲಿ ಪ್ರತಿಭೆ ಇಲ್ವಾ?’
– ಕೆಲವು ವರ್ಷಗಳ ಹಿಂದಿನವರೆಗೂ ಕನ್ನಡದ ಅದೆಷ್ಟು ನಟಿಯರು ಈ ತರಹ ತಮ್ಮ ಬೇಸರ ಹೊರಹಾಕುತ್ತಿದ್ದಾರೋ ಲೆಕ್ಕವಿಲ್ಲ. ಏಕೆಂದರೆ ಒಂದು ಸಮಯದಲ್ಲಿ ಗಾಂಧಿನಗರದ ಮಂದಿಗೆ ನಟಿಯರ ವಿಷಯದಲ್ಲಿ ಬಾಲಿವುಡ್‌ ಕ್ರೇಜ್‌ ಹೆಚ್ಚಿತ್ತು. ಯಾವುದಾದರೂ ಒಂದು ಹಿಂದಿ ಸಿನಿಮಾದಲ್ಲಿ ನಟಿಸಿದ ನಟಿಯನ್ನು ತಮ್ಮ ಸಿನಿಮಾಕ್ಕೆ ಕರೆಸಿ, ತಮ್ಮ ಚಿತ್ರಕ್ಕೆ ಬಾಲಿವುಡ್‌ ನಾಯಕಿ ಎಂದು ಬೀಗುತ್ತಿದ್ದರು. ಆದರೆ, ನಂತರದ ದಿನಗಳಲ್ಲಿ ನಾಯಕಿಯರ ವಿಷಯದಲ್ಲಿ ಬಾಲಿವುಡ್‌ ಕ್ರೇಜ್‌ ಕಡಿಮೆಯಾಗಿದ್ದು ಸುಳ್ಳಲ್ಲ. ಕನ್ನಡದ ನಟಿಯರಿಗೆ ಅವಕಾಶ ನೀಡುತ್ತಿದ್ದಾರೆ. ಆದರೆ, ಈಗ ಹೊಸ ಕ್ರೇಜ್‌ ಶುರುವಾಗಿದೆ. ಅದು ಕೂಡಾ ಬಾಲಿವುಡ್‌ಗೆ ಸಂಬಂಧಪಟ್ಟಿದ್ದು. ಬಾಲಿವುಡ್‌ ನಟರನ್ನು ಕನ್ನಡ ಸಿನಿಮಾಕ್ಕೆ ಕರೆತರುವ ಮೂಲಕ ತಮ್ಮ ಸಿನಿಮಾದ ಸ್ಟಾರ್‌ವ್ಯಾಲ್ಯೂ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಹಲವು ವರ್ಷಗಳಿಂದಲೂ ಬಾಲಿವುಡ್‌ನಿಂದ ಕನ್ನಡಕ್ಕೆ ನಟ-ನಟಿಯರು ಬರುತ್ತಲೇ ಇದ್ದಾರೆ. ಆದರೆ, ಇತ್ತೀಚಿನ ಮೂರ್‍ನಾಲ್ಕು ವರ್ಷಗಳಲ್ಲಂತೂ ಬಾಲಿವುಡ್‌ನ‌ ನಟರನ್ನು ಸ್ಟಾರ್‌ ಸಿನಿಮಾಗಳಿಗೆ ಕರೆಸುವ ಟ್ರೆಂಡ್‌ ಹೆಚ್ಚಾಗಿದೆ. ಅದರಲ್ಲೂ ಬಾಲಿವುಡ್‌ ವಿಲನ್‌ಗಳನ್ನು ಕರೆಸಿ, ಕನ್ನಡದ ಸ್ಟಾರ್‌ ನಟನ ಎದುರು ನಿಲ್ಲಿಸುತ್ತಿದ್ದಾರೆ. ಅದೇ ಕಾರಣದಿಂದ ಈಗ ಸ್ಟಾರ್‌ ನಟನ ಸಿನಿಮಾ ಸೆಟ್ಟೇರಿದೆ ಎಂದರೆ ಅಲ್ಲೊಬ್ಬ ಮುಂಬೈ ವಿಲನ್‌ ಇದ್ದೇ ಇರುತ್ತಾನೆ ಎನ್ನುವಂತಾಗಿದೆ. 

Advertisement

ಕನ್ನಡಕ್ಕೆ ಬಂದ, ಬರುತ್ತಿರುವ ಬಾಲಿವುಡ್‌ ನಟರತ್ತ ಒಮ್ಮೆ ಕಣ್ಣಾಯಿಸಿದರೆ ದೊಡ್ಡ ಪಟ್ಟಿಯೇ ಸಿಗುತ್ತದೆ. ಮಿಥುನ್‌ ಚಕ್ರವರ್ತಿ, ನಾನಾ ಪಾಟೇಕರ್‌, ಸುನೀಲ್‌ ಶೆಟ್ಟಿ, ಅಫ್ತಾಬ್‌ ಶಿವದಾಸನಿ, ಜಾನಿ ಲಿವರ್‌, ಸುಶಾಂತ್‌ ಸಿಂಗ್‌, ಕಬೀರ್‌ ಸಿಂಗ್‌ ದುಹಾನ್‌, ರವಿಕಿಶನ್‌,  ಅಖೀಲೇಂದ್ರ ಮಿಶ್ರ, ಸೋನು ಸೂದ್‌, ಮುಕೇಶ್‌ ತಿವಾರಿ, ಜಾಕಿ ಶ್ರಾಫ್, ಶಬಾಜ್‌ ಖಾನ್‌, ರಜತ್‌ ಬೇಡಿ, ಅಮಿತ್‌ ತಿವಾರಿ, ಕೆಲ್ಲಿ ಡಾರ್ಜಿ, ಆಶೀಶ್‌ ವಿದ್ಯಾರ್ಥಿ, ರವಿ ಕಾಳೆ, ಪ್ರದೀಪ್‌ ಸಿಂಗ್‌ ರಾವತ್‌, ಸಯ್ನಾಜಿ ಶಿಂಧೆ, ಶಾವರ್‌ ಆಲಿ, ಮಕರಂದ್‌ ದೇಶಪಾಂಡೆ, ವಿಕ್ರಮ್‌ ಸಿಂಗ್‌ … ಹೀಗೆ ಸಾಕಷ್ಟು ಹಿಂದಿ ನಟರು ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಹೆಚ್ಚಾದ ಟ್ರೆಂಡ್‌: ಬಾಲಿವುಡ್‌ ನಟರಿಗೆ ಕನ್ನಡ ಚಿತ್ರರಂಗಕ್ಕೂ ಇರುವ ನಂಟು ಇವತ್ತು ನಿನ್ನೆಯದ್ದಲ್ಲ. ಹಿಂದಿನಿಂದಲೂ ಅಲ್ಲೊಂದು, ಇಲ್ಲೊಂದು ಸಿನಿಮಾದಲ್ಲಿ ಬಾಲಿವುಡ್‌ ನಟರು ನಟಿಸುತ್ತಲೇ ಬಂದಿದ್ದಾರೆ. ಆದರೆ, ಈ ಮಟ್ಟಿಗೆ ಬಾಲಿವುಡ್‌ ನಟರನ್ನು ಕರೆಸುತ್ತಿರಲಿಲ್ಲ ಎಂಬುದು ಬೇರೆ ಮಾತು. ಕೆಲ ವರ್ಷಗಳ ಹಿಂದೆ ಕನ್ನಡ ಸಿನಿಮಾದಲ್ಲಿ ಕಾಣಸಿಗುತ್ತಿದ್ದ ಬಾಲಿವುಡ್‌ ಮೂಲದ ನಟರೆಂದರೆ ಆಶೀಶ್‌ ವಿದ್ಯಾರ್ಥಿ, ರವಿ ಕಾಳೆ, ಪ್ರದೀಪ್‌ ಸಿಂಗ್‌ ರಾವತ್‌, ಮುಕೇಶ್‌ ರಿಷಿ, ಶಯ್ನಾಜಿ ಶಿಂಧೆ … ಹೀಗೆ ಕೆಲವೇ ಕೆಲವು ನಟರು ಕನ್ನಡ ಸಿನಿಮಾಗಳಲ್ಲಿ ಕಾಣಸಿಗುತ್ತಿದ್ದರು. ಅದರಲ್ಲೂ ಶಿವರಾಜಕುಮಾರ್‌ ಅವರ “ಎ.ಕೆ. 47′ ಚಿತ್ರದಲ್ಲಿ ನಟಿಸಿದ ನಂತರವಂತೂ ಆಶೀಶ್‌ ವಿದ್ಯಾರ್ಥಿ ಯಾವ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದುಕೊಂಡರೆಂದರೆ, ಒಂದು ಹಂತದಲ್ಲಿ ಇವರು ಕನ್ನಡದವರೇನಾ ಎಂದು ಸಂದೇಹ ಬರುವ ಮಟ್ಟಿಗೆ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಾ ಹೋದರು. ಇನ್ನು, ಪ್ರದೀಪ್‌ ರಾವತ್‌, ಮುಕೇಶ್‌ ರಿಷಿ, ಸಯ್ನಾಜಿ ಶಿಂಧೆ, ರವಿ ಕಾಳೆ ಕೂಡಾ ಹಲವು ವರ್ಷಗಳಿಂದ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಾ ಕನ್ನಡ ಪ್ರೇಕ್ಷಕರಿಗೆ ಪರಿಚಿತ ಮುಖವಾಗಿಬಿಟ್ಟಿದ್ದಾರೆ. ಆದರೆ, ಈಗ ಕನ್ನಡದಲ್ಲಿ ಈ ನಟರು ಹೆಚ್ಚು ಕಾಣಸಿಗುತ್ತಿಲ್ಲ. ನೀವು ಇದನ್ನು ಅವಕಾಶದ ಕೊರತೆ ಎಂದಾದರೂ ಹೇಳಬಹುದು ಅಥವಾ ಹೊಸ ಮುಖಗಳಿಗೆ ಸಿಗುತ್ತಿರುವ ಅವಕಾಶ ಎಂದಾದರೂ ಪರಿಗಣಿಸಬಹುದು. ಬಾಲಿವುಡ್‌ನ‌ಲ್ಲಿ ಬಿಝಿಯಾಗಿರುವ ಅನೇಕ ನಟರನ್ನು ಕನ್ನಡಕ್ಕೆ ಕರೆತರಲಾಗುತ್ತಿದೆ. ಈ ಮೂಲಕ ಸಿನಿಮಾದ ವ್ಯಾಪ್ತಿ ಹಾಗೂ ವಿಸ್ತಾರವನ್ನು ಹೆಚ್ಚಿಸಲಾಗುತ್ತಿದೆ.

ವಿಲನ್‌ಗಳಿಗೆ ಬೇಡಿಕೆ: ಈ ಹಿಂದೆ ಬಾಲಿವುಡ್‌ನಿಂದ ನಟಿಯೊಬ್ಬಳು ಗಾಂಧಿನಗರಕ್ಕೆ ಎಂಟ್ರಿಕೊಟ್ಟಳೆಂದರೆ ಆಕೆ ನಾಯಕಿ ಪಾತ್ರಕ್ಕೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿರಲಿಲ್ಲ. ಈಗ ಹಿಂದಿಯಿಂದ ಒಬ್ಬ ನಟನ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾನೆ ಎಂದರೆ ಆತ ಆ ಸಿನಿಮಾದಲ್ಲಿ ವಿಲನ್‌ ಪಾತ್ರ ಮಾಡುತ್ತಿದ್ದಾನೆ ಎಂಬುದನ್ನು ಸುಲಭವಾಗಿ ಊಹಿಸಿಕೊಳ್ಳುವ ಮಟ್ಟಕ್ಕೆ ಬಾಲಿವುಡ್‌ನಿಂದ ಖಳನಟರನ್ನು ಕರೆಸಲಾಗುತ್ತಿದೆ. ಆ ತರಹ ಇತ್ತೀಚಿನ ವರ್ಷಗಳಲ್ಲಿ ಹಿಂದಿಯಿಂದ ಬಂದ ವಿಲನ್‌ಗಳೆಂದರೆ ಮುಕೇಶ್‌ ತಿವಾರಿ, ಕಬೀರ್‌ ಸಿಂಗ್‌ ದುಹಾØನ್‌, ರವಿಕಿಶನ್‌, ಜಾಕಿ ಶ್ರಾಫ್, ಕೆಲ್ಲಿ ಡಾರ್ಜಿ, ಅಖೀಲೇಂದ್ರ ಮಿಶ್ರ, ಸೋನು ಸೂದ್‌, ಶಬಾಜ್‌ ಖಾನ್‌, ರಜತ್‌ ಬೇಡಿ, ಅಮಿತ್‌ ತಿವಾರಿ, ಮಕರಂದ್‌ ದೇಶಪಾಂಡೆ … ಹೀಗೆ ಅನೇಕ ನಟರು ಕನ್ನಡ ಸಿನಿಮಾಗಳಲ್ಲಿ ವಿಲನ್‌ ಪಾತ್ರ ಮಾಡಿದ್ದಾರೆ. 

 ಈ ನಟರೆಲ್ಲರೂ ಬಾಲಿವುಡ್‌ ಸೇರಿದಂತೆ ಮಲಯಾಳಂ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಆದ ಇಮೇಜ್‌ ಸೃಷ್ಟಿಸಿಕೊಂಡವರು. ಈ ನಟರನ್ನು ಕರೆತರುವುದು ಕೂಡಾ ಅಷ್ಟು ಸುಲಭದ ಕೆಲಸವಲ್ಲ. ಆದರೆ, ಈಗ ಕನ್ನಡ ಚಿತ್ರ ನಿರ್ಮಾಪಕ, ನಿರ್ದೇಶಕರು ಬಾಲಿವುಡ್‌ನ‌ ಬಿಝಿ ನಟರನ್ನು ಕರೆತರುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

Advertisement

ಸ್ಟಾರ್‌ ಸಿನಿಮಾಗಳಲ್ಲಿ ಬಿಝಿ: ಬಾಲಿವುಡ್‌ನಿಂದ ಒಬ್ಬ ಖಳನಟ ಬರುತ್ತಾನೆಂದರೆ ಆತ ಸ್ಟಾರ್‌ ಸಿನಿಮಾಕ್ಕೆ ಬರುತ್ತಾನೆಂಬುದನ್ನು ಸುಲಭವಾಗಿ ಹೇಳಿಬಿಡಬಹುದು. ಏಕೆಂದರೆ, ಕನ್ನಡ ಚಿತ್ರರಂಗದ ಸ್ಟಾರ್‌ಗಳ ಸಿನಿಮಾದಲ್ಲಿ ಸದ್ಯ ಬಾಲಿವುಡ್‌ನ‌ ಒಬ್ಬ ಖಳನಟ ಇದ್ದೇ ಇರುತ್ತಾನೆ. ಮುಖ್ಯವಾಗಿ ಕನ್ನಡದಲ್ಲಿ ದರ್ಶನ್‌, ಸುದೀಪ್‌, ಪುನೀತ್‌, ಯಶ್‌ ಸಿನಿಮಾಗಳಲ್ಲಿ ಬಾಲಿವುಡ್‌ ಖಳನಟರ ಆಗಮನವಾಗುತ್ತದೆ. ಇದಕ್ಕೆ ಕಾರಣ, ಈ ನಟರ ಸಿನಿಮಾಗಳಲ್ಲಿ ಹೈವೋಲ್ಟೆàಜ್‌ ಆ್ಯಕ್ಷನ್‌ ಇರುತ್ತದೆ. ಆ ಕಾರಣದಿಂದ ಖಡಕ್‌ ವಿಲನ್‌ ಬೇಕೆಂಬ ಕಾರಣಕ್ಕೆ ಬಾಲಿವುಡ್‌ನಿಂದ ಕರೆಸಲಾಗುತ್ತದೆ. ಈಗಾಗಲೇ ಸುದೀಪ್‌ ಅವರ “ವಿಷ್ಣುವರ್ಧನ’ ಸಿನಿಮಾದಲ್ಲಿ ಸೋನು ಸೂದ್‌, “ಕೋಟಿಗೊಬ್ಬ-2’ನಲ್ಲಿ ಮುಕೇಶ್‌ ತಿವಾರಿ, “ಹೆಬ್ಬುಲಿ’ಯಲ್ಲಿ ರವಿಕಿಶನ್‌, ಕಬೀರ್‌ ಸಿಂಗ್‌ ದುಹಾØನ್‌ ನಟಿಸಿದ್ದಾರೆ. ದರ್ಶನ್‌ ಅವರ “ಚಕ್ರವರ್ತಿ’, “ಜಗ್ಗುದಾದ’, “ಅಂಬರೀಶ’, “ಅಭಯ್‌’ ಚಿತ್ರಗಳಲ್ಲೂ ಅನೇಕ ಬಾಲಿವುಡ್‌ ನಟರು ನಟಿಸಿದ್ದಾರೆ. ಪುನೀತ್‌ ಅವರ “ಅಣ್ಣಾ ಬಾಂಡ್‌’, “ಪವರ್‌’, “ರಣವಿಕ್ರಮ’, “ಅಂಜನಿಪುತ್ರ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಮುಂಬೈ ಖಳರು ನಟಿಸಿದ್ದಾರೆ. ಯಶ್‌ ಅವರ “ಗಜಕೇಸರಿ’ ಸಿನಿಮಾದಲ್ಲಿ ಬಾಲಿವುಡ್‌ ನಟ ಶಾಬಾಜ್‌ ಖಾನ್‌ ನಟಿಸಿದ್ದಾರೆ.

ಮುಂದೆ ನಿಮಗೆ ಸಿಗಲಿರುವ ಬಾಲಿವುಡ್‌ ನಟರು: ಈಗಾಗಲೇ ಅನೇಕ ಬಾಲಿವುಡ್‌ ನಟರು ಕನ್ನಡದಲ್ಲಿ ನಟಿಸಿದ್ದಾರೆ. ಈಗ ಇನ್ನೊಂದಿಷ್ಟು ಮಂದಿಯ ಆಗಮನವಾಗಿದೆ. ಅದರಲ್ಲಿ ಮುಖ್ಯವಾಗಿ ಮಿಥುನ್‌ ಚಕ್ರವರ್ತಿ ಹಾಗೂ ಸುನೀಲ್‌ ಶೆಟ್ಟಿ. ಪ್ರೇಮ್‌ ನಿರ್ದೇಶನದ “ದಿ ವಿಲನ್‌’ ಚಿತ್ರದಲ್ಲಿ ಮಿಥುನ್‌ ಚಕ್ರವರ್ತಿಯವರು ನಟಿಸಿದ್ದು, ಸುದೀಪ್‌ ಹಾಗೂ ಅವರ ನಡುವಿನ ದೃಶ್ಯಗಳನ್ನು ಪ್ರೇಮ್‌ ಚಿತ್ರೀಕರಿಸಿದ್ದಾರೆ. ಇದಲ್ಲದೇ, ಸುದೀಪ್‌ ಅವರ “ಪೈಲ್ವಾನ್‌’ ಚಿತ್ರದಲ್ಲಿ ಸುನೀಲ್‌ ಶೆಟ್ಟಿ ಆಗಿ ನಟಿಸುತ್ತಿದ್ದಾರೆ. ಈ ಮೂಲಕ ಅನೇಕ ದಿನಗಳಿಂದ ಸುನೀಲ್‌ ಶೆಟ್ಟಿ ಕನ್ನಡಕ್ಕೆ ಬರುತ್ತಾರಂತೆ ಎಂದು ಕೇಳಿಬರುತ್ತಿದ್ದ ಸುದ್ದಿ ನಿಜವಾಗಿದೆ. ಇದಲ್ಲದೇ, ಈ ಚಿತ್ರದಲ್ಲಿ ಕಬೀರ್‌ ಸಿಂಗ್‌ ದುಹಾನ್‌, ಸುಶಾಂತ್‌ ಸಿಂಗ್‌ ಕೂಡಾ ನಟಿಸುತ್ತಿದ್ದಾರೆ. ಇನ್ನು, ಸುದೀಪ್‌ ಅವರ ಮತ್ತೂಂದು ಚಿತ್ರ “ಕೋಟಿಗೊಬ್ಬ-3’ನಲ್ಲಿ ಹಿಂದಿ ನಟ ಅಫ್ತಾಬ್‌ ಶಿವದಾಸನಿ ಕೂಡಾ ನಟಿಸುತ್ತಿದ್ದಾರೆ. ಇದಲ್ಲದೇ, ರವಿಚಂದ್ರನ್‌ ಪುತ್ರ ಮನೋರಂಜನ್‌ ಅವರ “ಚಿಲಮ್‌’ನಲ್ಲಿ ನಾನಾ ಪಾಟೇಕರ್‌ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಹಿಂದೆ ನಾನಾ ಪಾಟೇಕರ್‌ ಯೋಗಿ ನಟನೆಯ “ಯಕ್ಷ’ದಲ್ಲಿ ನಟಿಸಿದ್ದರು. 

ಒಟ್ಟಿನಲ್ಲಿ ಹಿಂದೆಂದೂ ಬರದಷ್ಟು ಬಾಲಿವುಡ್‌ನ‌ ಜನಪ್ರಿಯ ಕಲಾವಿದರು ಕನ್ನಡಕ್ಕೆ ಬರುತ್ತಿದ್ದಾರೆ. ಇವರೆಲ್ಲರಿಂದ ಕನ್ನಡದ ಕಲಾವಿದರು ಅವಕಾಶ ವಂಚಿತರಾಗುತ್ತಿರುವುದು ನಿಜ. ಆದರೆ, ಸದ್ಯದ ಟ್ರೆಂಡ್‌ ಇರುವುದೇ ಹಾಗೇ. ಕನ್ನಡವಷ್ಟೇ ಅಲ್ಲ, ತೆಲುಗು, ತಮಿಳು ಚಿತ್ರಗಳಲ್ಲೂ ಬಾಲಿವುಡ್‌ ನಟರ ಹವಾ ಜೋರಾಗಿದೆ.

ಸ್ಟಾರ್‌ವ್ಯಾಲ್ಯು – ಬಿಝಿನೆಸ್‌ ಲೆಕ್ಕಾಚಾರ
ಎಲ್ಲಾ ಓಕೆ, ಬಾಲಿವುಡ್‌ನಿಂದ ವಿಲನ್‌ಗಳನ್ನು ಕರೆಸುವ ಉದ್ದೇಶವೇನು, ನಮ್ಮಲ್ಲೇ ಸಾಕಷ್ಟು ಮಂದಿ ವಿಲನ್‌ ಪಾತ್ರಧಾರಿಗಳಿದ್ದಾರಲ್ಲ ಎಂದು ನೀವು ಕೇಳಬಹುದು. ಚಿತ್ರರಂಗದಲ್ಲಿ ಎಲ್ಲವೂ ಲೆಕ್ಕಾಚಾರದ ಮೇಲೆ ನಡೆಯುತ್ತದೆ. ಯಾವ ನಟನನ್ನು ಹಾಕಿಕೊಂಡರೆ ಎಷ್ಟು ಬಿಝಿನೆಸ್‌ ಆಗಬಹುದು ಎಂಬ ಲೆಕ್ಕಾಚಾರದ ಮೂಲಕ ತಾರಾಗಣದ ಆಯ್ಕೆ ನಡೆಯುತ್ತದೆ. ಸ್ಟಾರ್‌ ನಟನ ಎದುರು ಖಡಕ್‌ ಆಗಿ ನಿಲ್ಲಲು ಅಷ್ಟೇ ಖಡಕ್‌ ಆಗಿರುವಂತಹ ಪಾತ್ರಧಾರಿ ಬೇಕಾಗುತ್ತದೆ. ತೆರೆಮೇಲೆ ಇಬ್ಬರು ಮುಖಾಮುಖೀಯಾಗುತ್ತಿದ್ದರೆ ಪ್ರೇಕ್ಷಕ ಸೀಟಿನಂಚಿಗೆ ಬರಬೇಕು ಎಂಬುದು ಚಿತ್ರತಂಡದ ಆಸೆಯಾಗಿರುತ್ತದೆ. ಅದೇ ಕಾರಣದಿಂದ ಹಿಂದಿಯಲ್ಲಿ ಮಿಂಚಿದ ಖಡಕ್‌ ವಿಲನ್‌ಗಳನ್ನು ಕರೆಸಲಾಗುತ್ತದೆ. ಈ ಮೂಲಕ ಸಿನಿಮಾದ ಸ್ಟಾರ್‌ವ್ಯಾಲ್ಯೂ ಹೆಚ್ಚಿಸಲಾಗುತ್ತದೆ. 

ಇದೆಲ್ಲಾ ನೋಡುತ್ತಿದ್ದರೆ, ಸಹಜವಾಗಿಯೇ ಒಂದು ಪ್ರಶ್ನೆ ಬರಬಹುದು. ಕನ್ನಡದಲ್ಲಿ ವಿಲನ್‌ಗಳ ಕೊರತೆ ಇದೆಯಾ ಎಂದು. ನಿರ್ಮಾಪಕರೊಬ್ಬರ ಪ್ರಕಾರ, ಕನ್ನಡದಲ್ಲಿ ಈಗ ಖಡಕ್‌ ಖಳನಟರ ಕೊರತೆ ಇರುವುದು ನಿಜ. ಹಿಂದೆಯಾದರೆ ವಜ್ರಮುನಿ, ಸುಧೀರ್‌, ಸುಂದರ್‌ ಕೃಷ್ಣ ಅರಸ್‌, ಶ್ರೀನಿವಾಸ್‌ ತೂಗುದೀಪ್‌ ಸೇರಿದಂತೆ ಸಾಕಷ್ಟು ಮಂದಿ ಖಳನಟರು ಇದ್ದರು. ಆದರೆ ಈಗ ಖಳನಟರ ಕೊರತೆ ಇದೆ. ಇರುವ ಕೆಲವೇ ಕೆಲವು ನಟರು ಬಹುತೇಕ ಸಿನಿಮಾಗಳಲ್ಲಿ ರಿಪೀಟ್‌ ಆಗುತ್ತಿದ್ದಾರೆ. ನೋಡಿದ ಮುಖವನ್ನೇ ಮತ್ತೆ ತೋರಿಸುವ ಬದಲು ಹೊಸ ಮುಖವನ್ನು ಸ್ಟಾರ್‌ ನಟನ ಎದುರು ನಿಲ್ಲಿಸಿದರೆ ಆಗ ಸಿನಿಮಾದ ಖದರ್‌ ಹೆಚ್ಚುತ್ತದೆ ಎಂಬ ಲೆಕ್ಕಾಚಾರವೂ ನಡೆಯುತ್ತದೆ ಎನ್ನುತ್ತಾರೆ. 

ಅಷ್ಟೇ ಅಲ್ಲ, ಸ್ಟಾರ್‌ವ್ಯಾಲ್ಯು ಜೊತೆಗೆ ಬಿಝಿನೆಸ್‌ ಕೂಡಾ ಪರಿಗಣನೆಯಾಗುತ್ತದೆ. ಈಗ ನಿರ್ಮಾಪಕರಿಗೆ ಬರುವ ಮೊದಲ ಆದಾಯವೆಂದರೆ ಡಬ್ಬಿಂಗ್‌ ರೈಟ್ಸ್‌. ಸ್ಟಾರ್‌ ನಟರ ಡಬ್ಬಿಂಗ್‌ ರೈಟ್ಸ್‌ ಹಿಂದಿಗೆ ಕೋಟಿ ಬೆಲೆಗೆ ಮಾರಾಟವಾಗುತ್ತದೆ. ಹೀಗಿರುವಾಗ ಹಿಂದಿಯಲ್ಲಿ ಪರಿಚಿತರಿರುವ ಕಲಾವಿದರು ಕಲಾವಿದ ಇದ್ದರೆ ಬಿಝಿನೆಸ್‌ಗೆ ಪ್ಲಸ್‌ ಆಗುತ್ತದೆ ಎಂಬ ಲೆಕ್ಕಾಚಾರವೂ ನಿರ್ಮಾಪಕರದು. ಅದೇ ಕಾರಣದಿಂದ ಬಾಲಿವುಡ್‌ ನಟರು ಸ್ವಲ್ಪ ದುಬಾರಿಯಾದರೂ ಅವರನ್ನು ಕರೆತರುತ್ತಾರೆ.

 ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next