Advertisement

Bollywood: ರಿಮೇಕ್‌ ಆಗಿ ಮತ್ತೆ ತೆರೆಗೆ ಬರಲಿದೆ 70ರ ದಶಕದ ಮೂರು ಹಿಟ್‌ ಸಿನಿಮಾಗಳು

01:18 PM Jul 13, 2023 | Team Udayavani |

ಮುಂಬಯಿ: ಚಿತ್ರರಂಗದಲ್ಲಿ ರಿಮೇಕ್‌ ಪ್ರಯೋಗ ಹೊಸತೇನಲ್ಲ. ಒಂದು ಭಾಷೆಯ ಸಿನಿಮಾ ಮತ್ತೊಂದು ಭಾಷೆಯಲ್ಲಿ ರಿಮೇಕ್‌ ಆಗಿ ಬರುವುದು ಇತ್ತೀಚಿನ ಜನರೇಷನ್ ಗೆ ಹಳೆಯ ವಿಚಾರವೇ ಸರಿ. ಆದರೆ 70 ರ ದಶಕದ ಸಿನಿಮಾ ಈಗಿನ ಕಾಲಕ್ಕೆ ರಿಮೇಕ್‌ ಆಗಿ ಬಂದರೆ ಹೇಗೆ?

Advertisement

70 ದಶಕದಲ್ಲಿ ಬಾಲಿವುಡ್‌ ನಲ್ಲಿ ಸೂಪರ್‌ ಹಿಟ್‌ ಆದ ಮೂರು ಸಿನಿಮಾಗಳು ರಿಮೇಕ್‌ ಆಗಿ ಹೊಸ ರೂಪದಲ್ಲಿ ಬರಲಿದೆ.

ಜಾದುಗರ್ ಫಿಲಂಸ್‌ನ ಅನುಶ್ರೀ ಮೆಹ್ತಾ ಮತ್ತು ಅಬೀರ್ ಸೇನ್‌ಗುಪ್ತಾ ಮತ್ತು ದಿವಂಗತ ನಿರ್ಮಾಪಕ ಎನ್‌ಸಿ ಸಿಪ್ಪಿ ಅವರ ಮೊಮ್ಮಗ ಸಮೀರ್ ರಾಜ್ ಸಿಪ್ಪಿ ಅವರು ಜೊತೆಗೂಡಿ 70 ದಶಕದಲ್ಲಿ ತೆರೆಕಂಡು ಸಂಚಲನ ಸೃಷ್ಟಿಸಿದ್ದ “’ಮಿಲಿ’, ‘ಬಾವರ್ಚಿ’ ಮತ್ತು ‘ಕೋಶಿಶ್’ ಸಿನಿಮಾಗಳನ್ನು ರಿಮೇಕ್‌ ಮಾಡಿ ತೆರೆಗೆ ತರುವ ಸಾಹಸಕ್ಕೆ ಕೈಹಾಕಿಲಿದ್ದಾರೆ.

ಹೃಷಿಕೇಶ್ ಮುಖರ್ಜಿ ಅವರು ನಿರ್ದೇಶನ ಮಾಡಿದ್ದ 1972 ರ “ಬಾವರ್ಚಿ”, 1975 ರಲ್ಲಿ ಬಂದ “’ಮಿಲಿ’ʼ ಹಾಗೂ 1972 ರಲ್ಲಿ ಬಂದ ಗೀತರಚನೆಕಾರ-ನಿರ್ದೇಶಕ ಗುಲ್ಜಾರ್ ಅವರ ‘ಕೋಶಿಶ್’ ಸಿನಿಮಾ ರಿಮೇಕ್‌ ಆಗಿ ತರುವುದಾಗಿ ಮಾಧ್ಯಮದ ಮುಂದೆ ಅನುಶ್ರೀ ಮೆಹ್ತಾ ಮತ್ತು ಸೇನ್‌ಗುಪ್ತಾ ಹೇಳಿದ್ದಾರೆ.

“ಅಂದು ಮುಂದಿನ ಪೀಳಿಗೆಗೆ ಸಿನಿಮಾರಂಗದ ಮಾನದಂಡವನ್ನು ನಿಗದಿಪಡಿಸಿದ ದಂತಕಥೆ ಗುಲ್ಜಾರ್ ಸಾಬ್ ಮತ್ತು ಹೃಷಿ ದಾ ಅವರ ‘ಕೋಶಿಶ್’, ‘ಬಾವರ್ಚಿ’ ಮತ್ತು ‘ಮಿಲಿ’ ಚಿತ್ರವನ್ನು ಜನ ಸಂಭ್ರಮಿಸಿದ್ದರು. ಇದನ್ನು ರಿಮೇಕ್‌ ಮಾಡುವುದು ದೊಡ್ಡ ಜವಬ್ದಾರಿಯಾಗಿದೆ” ಎಂದರು.

Advertisement

“ಈ ಸಿನಿಮಾಗಳನ್ನು ನೋಡುತ್ತಾ ನಾವು ಬೆಳೆದಿದ್ದೇವೆ. ಈ ಸಿನಿಮಾಗಳಿಗೆ ಈಗಿನ ಪೀಳಿಗೆ ಸಾಕ್ಷಿಯಾಗಬೇಕು ಹಾಗೂ ನಮ್ಮ ಸಿನಿಮಾದ ಪರಂಪರೆಯನ್ನು ತಿಳಿಯಬೇಕು. ಈ ಜವಬ್ದಾರಿಯನ್ನು ಪೂರ್ತಿ ಮಾಡಲು ನಮ್ಮ ಕೈಯಲ್ಲಿ ಆದಷ್ಟು ಪ್ರಯತ್ನ ಮಾಡುತ್ತೇವೆ. ಮುಖ್ಯವಾಗಿ ಸಿನಿಮಾಗಳ ರಿಮೇಕ್‌ ಜನರ ಹೃದಯಕ್ಕೆ ಮುಟ್ಟಬೇಕು” ಎಂದು ಹೇಳಿದ್ದಾರೆ.

ಈ ಸಿನಿಮಾಗಳನ್ನು ರಿಮೇಕ್‌ ಮಾಡುವ ಉದ್ದೇಶದ ಬಗ್ಗೆ ಕೇಳಿದಾಗ “ಸಿನಿಮಾ ಕುಟುಂಬದಿಂದ ಬಂದ ಹಿನ್ನೆಲೆಯವನಾಗಿ, ಕುಟುಂಬದ ಸಿನಿಮಾ ವ್ಯವಹಾರದಿಂದ ಸ್ಪೂರ್ತಿ ಪಡೆದು,ನನ್ನ ಅಜ್ಜ ಎನ್‌ಸಿ ಸಿಪ್ಪಿ, ತಂದೆ ರಾಜ್‌ ಸಿಪ್ಪಿ ಹಾಗೂ ಅಂಕಲ್‌ ರೋಮು ಸಿಪ್ಪಿ ಅವರ ಪರಂಪರೆಯನ್ನು ಮುಂದುವರೆಸುವ ಸಲುವಾಗಿ ಇದನ್ನು ಮಾಡುತ್ತಿದ್ದೇನೆ ಎಂದು ಸಮೀರ್ ರಾಜ್ ಸಿಪ್ಪಿ ಹೇಳಿದರು.

ಕ್ಲಾಸಿಕ್‌ ಕಥೆಗಳಿಗೆ ಆಧುನಿಕ್‌ ಟಚ್‌ ಕೊಟ್ಟು ಅದನ್ನು ಪ್ರೇಕ್ಷಕರ ಮುಂದೆ ಮತ್ತೆ ಇಡುವ ಸಮಯ ಬಂದಿದೆ ಎಂದು ಸಮೀರ್ ರಾಜ್ ಸಿಪ್ಪಿ ಹೇಳಿದರು.

ಸಿನಿಮಾದ ಕಥೆಗಳೇನು:

ಬಾವರ್ಚಿ: ಈ ಸಿನಿಮಾದಲ್ಲಿ ರಾಜೇಶ್ ಖನ್ನಾ ಮತ್ತು ಜಯಾ ಬಚ್ಚನ್ ನಟಿಸಿದ್ದು, ಮಧ್ಯಮ ಕುಟುಂಬವೊಂದು ರಘು ಎಂಬಾತನನ್ನು ಅಡುಗೆ ಕೆಲಸದವನಾಗಿ ನೇಮಿಸಿದ ಕಥೆಯನ್ನು ಇದು ಒಳಗೊಂಡಿದೆ.

ಕೋಶಿಶ್: ಸಂಜೀವ್ ಕುಮಾರ್ ಜೊತೆಗೆ ಜಯಾ ಬಚ್ಚನ್ ಈ ಸಿನಿಮಾದಲ್ಲಿ ನಟಿಸಿದ್ದು,  ಕಿವುಡ ಮತ್ತು ಮೂಕ ದಂಪತಿಗಳು ಸಮಾಜದಲ್ಲಿ ಬದುಕಲು ನಡೆಸುವ ಹೋರಾಟದ ಸುತ್ತ ಈ ಸಿನಿಮಾ ಸಾಗುತ್ತದೆ.

ಮಿಲಿ:  ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ನಟಿಸಿದ್ದು, ಖಿನ್ನತೆಗೆ ಒಳಗಾಗಿರುವ ವ್ಯಕ್ತಿಯೊಬ್ಬ ಯಾವಗಾಲೂ ಸಂತೋಷದಿಂದಿರುವ ನೆರೆಹೊರೆ ಹುಡುಗಿಯೊಂದಿಗೆ ಪ್ರೀತಿಗೆ ಬೀಳುತ್ತಾನೆ. ಆ ಬಳಿಕ ಆಕೆಗಿರುವ ಮಾರಣಾಂತಿಕ ಕಾಯಿಲೆಯ ಬಗ್ಗೆ ತಿಳಿದುಕೊಳ್ಳುವ ಕುರಿತ ಕಥೆಯನ್ನು ಒಳಗೊಂಡಿದೆ.

ಸದ್ಯ ಮೂರು ಚಿತ್ರಗಳನ್ನು ರಿಮೇಕ್‌ ಮಾಡುತ್ತೇವೆ ಎಂದಿರುವ ಸಿನಿಮಾ ತಯಾರಕರು ಮುಂದಿನ ದಿನಗಳಲ್ಲಿ ಕಲಾವಿದರ ಬಗ್ಗೆ ಮಾಹಿತಿಯನ್ನು ನೀಡಲಿದೆ ಎಂದು ವರದಿ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next