ಮುಂಬೈ: ಚಿತ್ರರಂಗದಲ್ಲಿ ಅದರಲ್ಲೂ ಬಾಲಿವುಡ್ ನಲ್ಲಿ ನೆಪೋಟಿಸಂ (ಸ್ವಪಕ್ಷಪಾತ) ಬೇರು ಎಲ್ಲೆಡೆ ಹರಡಿಕೊಂಡಿದೆ. ಹಿರಿಯ ನಟರ ಮಕ್ಕಳಿಗೆ ಮಾತ್ರ ಅವಕಾಶಗಳ ಬಾಗಿಲು ತೆರೆದಿರುತ್ತವೆ ಎನ್ನುವ ಮಾತು ಆಗಾಗ ಕೇಳಿ ಬರುತ್ತಿರುತ್ತದೆ. ಅದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ಗೊತ್ತಿಲ್ಲ. ಆದರೆ, ಬಾಲಿವುಡ್ ನಲ್ಲಿ ಮಿಂಚಿ ದೊಡ್ಡ ಹೆಸರು ಮಾಡಿದ ಸ್ಟಾರ್ ನಟನ ಪುತ್ರಿಯೋರ್ವಳು ತನ್ನ ಸ್ವಂತ ಸಾಮರ್ಥ್ಯದ ಮೇಲೆ ಚಿತ್ರರಂಗದಲ್ಲಿ ನೆಲೆಯೂರಿದ್ದಾರೆ.
ಹೌದು, ಬಿಟೌನ್ ನಲ್ಲಿ ಕಾಮಿಡಿ ಕಿಂಗ್ ಎಂದೇ ಖ್ಯಾತಿ ಪಡೆದ ಗೋವಿಂದ ಅವರ ಪುತ್ರಿ ಟೀನಾ ಅಹುಜಾ ಚಿತ್ರರಂಗದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಅಪ್ಪನ ಸಪೋರ್ಟ್ ಇಲ್ಲದೆ ಬಣ್ಣದ ಲೋಕದಲ್ಲಿ ಭದ್ರ ನೆಲೆ ಕಂಡುಕೊಂಡಿದ್ದಾರೆ. 2015 ರಲ್ಲಿ ತೆರೆಕಂಡ ಸೆಕೆಂಡ್ ಹ್ಯಾಂಡ್ ಹಸ್ಬಂಡ್ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ ಟೀನಾ, ತನ್ನ ಸಿನಿ ಪಯಣದ ಬಗ್ಗೆ ಮಾತಾಡಿದ್ದಾರೆ.
ಟೀನಾ ತನ್ನ ಮಾತುಗಳಲ್ಲಿ ಹೆಚ್ಚಾಗಿ ಹೇಳಿದ್ದು ನೆಪೋಟಿಸಂ ಬಗ್ಗೆ. ನಾನು ಎಂದಿಗೂ ಸ್ಟಾರ್ ನಟನ ಮಗಳು ಎಂದು ಕರೆಯಿಸಿಕೊಳ್ಳಲು ಇಷ್ಟ ಪಡುವುದಿಲ್ಲ. ಇದುವರೆಗೆ ನಾನು ಪಡೆದ ಅವಕಾಶಗಳೆಲ್ಲ ನನ್ನ ಪ್ರತಿಭೆ ಹಾಗೂ ಸಾಮರ್ಥ್ಯದ ಮೇಲೆ. ನನ್ನ ಅಪ್ಪನ ಪ್ರಭಾವ ಬಳಸಿ ಸಿನಿಮಾಗಳಲ್ಲಿ ಅವಕಾಶ ಪಡೆಯುವುದು ನನಗೆ ಇಷ್ಟವಿಲ್ಲ. ಒಂದು ವೇಳೆ ನಾನು ಅಪ್ಪನ ಹೆಸರು ಬಳಸಿಕೊಂಡಿದ್ದರೆ ಇದುವರೆಗೆ 30-40 ಚಿತ್ರಗಳಲ್ಲಿ ಅಭಿನಯಿಸುತ್ತಿದ್ದೆ ಎಂದಿದ್ದಾರೆ.
ಇದನ್ನೂ ಓದಿ :ರೈತರ ಪ್ರತಿಭಟನೆಯನ್ನು ಪಶ್ಚಿಮ ಬಂಗಾಲಕ್ಕೆ ವಿಸ್ತರಿಸುತ್ತೇವೆ : ಟಿಕಾಯತ್
ತಮ್ಮ ಸಿನಿ ಜರ್ನಿಯಲ್ಲಿ ಅಪ್ಪನ ಪಾತ್ರದ ಬಗ್ಗೆ ಹೇಳಿರುವ ಟೀನಾ, ನಾನು ಏನು ಮಾಡುತ್ತಿದ್ದೇನೆ, ಏನು ಮಾಡುತ್ತಿಲ್ಲ ಎಂಬುದರ ಬಗ್ಗೆ ಅವರು ಗಮನ ಹರಿಸುತ್ತಿರುತ್ತಾರೆ. ಆಗಾಗ ಸಲಹೆ ಸೂಚನೆಗಳನ್ನು ನೀಡುತ್ತಿರುತ್ತಾರೆ. ಆದರೆ, ಚಿತ್ರಗಳಲ್ಲಿ ಅವಕಾಶ ಪಡೆದುಕೊಳ್ಳುವಂತಹ ಸಂದರ್ಭದಲ್ಲಿ ಅವರು ತಲೆ ಹಾಕುವುದಿಲ್ಲ ಎಂದಿದ್ದಾರೆ.
ಇನ್ನು ಗೋವಿಂದ ಅವರಿಗೆ ತಮ್ಮ ಮಗಳ ಚಿತ್ರವೊಂದನ್ನು ನಿರ್ಮಿಸುವ ಕನಸು ಇದೆ. ಈ ಹಿಂದೆ ಸಾಕಷ್ಟು ಸಾರಿ ಈ ಬಗ್ಗೆ ಅವರು ಮಾತಾಡಿದ್ದಾರೆ. ಇದುವರೆಗೆ ಅವರ ಬಯಕೆ ಈಡೇರಿಲ್ಲ. ಮುಂದಿನ ದಿನಗಳಲ್ಲಿ ಅಪ್ಪನ ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಟೀನಾ ಹೇಳಿದ್ದಾರೆ.