ಮುಂಬಯಿ: ದುಬೈನಲ್ಲಿ ಹೃದಯಾಘಾತದಿಂದ ಶನಿವಾರ ತಡರಾತ್ರಿ ನಿಧನಹೊಂದಿರುವ ಪ್ರಖ್ಯಾತ ಅಭಿನೇತ್ರಿ ಶ್ರೀದೇವಿ ಅವರ ಪಾರ್ಥೀವ ಶರೀರ ಇಂದು ರಾತ್ರಿ 11 ಗಂಟೆಯ ಬಳಿಕ ಮುಂಬಯಿಗೆ ತರಲಾಗುತ್ತಿದೆ.
ಮರಣೋತ್ತರ ಪರೀಕ್ಷೆ ವಿಳಂಬವಾಗಿದ್ದು ಪಾರ್ಥೀವ ಶರೀರ ತರಲು ವಿಳಂಬವಾಗುತ್ತಿದೆ ಎಂದು ಶ್ರೀದೇವಿ ಪತಿ ಬೋನಿ ಕಪೂರ್ ತಿಳಿಸಿದ್ದಾರೆ.
ಅನಿಲ್ ಅಂಬಾನಿ ಮಾಲೀಕತ್ವದ ವಿಶೇಷ ಜೆಟ್ ವಿಮಾನದ ಮೂಲಕ ಶ್ರೀದೇವಿ ಅವರ ಪಾರ್ಥೀವ ಶರೀರವನ್ನು ತರಲಾಗುತ್ತಿದ್ದು, ಪತಿ ಬೋನಿ ಕಪೂರ್ ಮತ್ತು ಪುತ್ರಿ ಖುಷಿ ಮತ್ತು ಕೆಲ ಬಂಧುಗಳು ವಿಮಾನದಲ್ಲಿ ಬರಲಿದ್ದಾರೆ ಎಂದು ತಿಳಿದು ಬಂದಿದೆ.
ಅಂತಿಮ ಸಂಸ್ಕಾರ ನಾಳೆ ವಿಲೆ ಪಾರ್ಲೆಯ ಪವನ್ ಹಂಸ್‌ನಲ್ಲಿ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಆದರೆ ಅಂತಿಮ ದರ್ಶನಕ್ಕೆ ಎಲ್ಲಿ ವ್ಯವಸ್ಥೆ ಮಾಡುತ್ತಾರೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.
ಶ್ರೀದೇವಿ ಅವರ ಅಂಧೇರಿ ನಿವಾಸದ ಬಳಿ ಈಗಾಗಲೆ ಅಭಿಮಾನಿಗಳು ಜಮಾವಣೆಗೊಳ್ಳುತ್ತಿದ್ದು, ಭಾರೀ ಭದ್ರತೆಯನ್ನು ಕೈಗೊಳ್ಳಲಾಗಿದೆ.