ವಾರಣಾಸಿ: ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಮಂದಿ ಹೆಚ್ಚೆಚ್ಚು ಫಿಟ್ನೆಸ್ ಸೂತ್ರದ ಮೊರೆ ಹೋಗುತ್ತಿದ್ದಾರೆ. ತಾರೆಯರಾದ ಶಿಲ್ಪಾ ಶೆಟ್ಟಿ, ಅಕ್ಷಯ್ ಕುಮಾರ್, ಕಂಗನಾ ರಾಣಾವತ್, ಹೃತಿಕ್ ರೋಶನ್ ಸೇರಿದಂತೆ ಇನ್ನೂ ಹಲವಾರು ತಾರೆಯರು ಫಿಟ್ನೆಸ್ ಸೂತ್ರವನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರುತ್ತಿದ್ದಾರೆ.
ಬಾಲಿವುಡ್ ನ ಎವರ್ ಗ್ರೀನ್ ಚೆಲುವೆ ಜೂಹಿ ಚಾವ್ಲಾ ಅವರು ತಮ್ಮ ಚುರುಕು ನಟನೆ ಮತ್ತು ನೃತ್ಯದ ಮೂಲಕ ಕೋಟ್ಯಂತರ ಚಿತ್ರರಸಿಕರ ಹೃದಯ ಗೆದ್ದ ನಟಿ. 51ರ ಪ್ರಾಯದಲ್ಲೂ ಜೂಹಿ ಅವರು ತರುಣಿಯಂತೆ ಕಾಣಿಸುತ್ತಿರುವುದಕ್ಕೆ ಅವರು ಅನುಸರಿಸುತ್ತಿರುವ ನಿಯಮಿತ ಫಿಟ್ನೆಸ್ ತಂತ್ರಗಳೇ ಸಾಕ್ಷಿ.
ಇದಕ್ಕೆ ಪೂರಕ ಎಂಬಂತೆ ಜೂಹಿ ಚಾವ್ಲಾ ಅವರು ವಾರಣಾಸಿಯ ಗಂಗಾ ತೀರದಲ್ಲಿ ಯೋಗಾಭ್ಯಾಸದಲ್ಲಿ ನಿರತರಾಗಿರುವ ಫೊಟೋ ಒಂದನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೊಟೋದಲ್ಲಿ ಜೂಹಿ ಅವರು ವೃಕ್ಷಾಸನ ಭಂಗಿಯಲ್ಲಿ ನಿಂತಿದ್ದಾರೆ. ಜೂಹಿ ಅವರು ಇತ್ತೀಚಿನ ದಿನಗಳಲ್ಲಿ ತಮ್ಮನ್ನು ಹೆಚ್ಚೆಚ್ಚು ಆಧ್ಯಾತ್ಮಿಕ ಮತ್ತು ಧ್ಯಾನದ ವಿಚಾರಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
‘ಮನಸ್ಸೆಂಬುದು ಹುಚ್ಚುಕುದುರೆ ಇದ್ದಂತೆ, ನೀವು ಮನಸ್ಸನ್ನು ಮೀರಿ ನಿಂತಾಗ ಮಾತ್ರವೇ ಧ್ಯಾನ ಸ್ಥಿತಿಯ ಸಾಧನೆಯಾಗುತ್ತದೆ’ ಎಂಬ ಸದ್ಗುರು ಅವರ ವಾಕ್ಯವೊಂದನ್ನು ತಮ್ಮ ಈ ಪೋಸ್ಟ್ ನಲ್ಲಿ ಜೂಹಿ ಬರೆದುಕೊಂಡಿದ್ದಾರೆ.
Related Articles
ಜೂಹಿ ಚಾವ್ಲಾ ಅವರು ದೀರ್ಘಸಮಯದಿಂದ ಆದ್ಯಾತ್ಮ ಗುರು ಜಗ್ಗಿ ವಾಸುದೇವ ಅವರ ಅನುಯಾಯಿ ಆಗಿದ್ದಾರೆ. ಈ ಹಿಂದೆ ಸದ್ಗುರು ಮತ್ತು ನಟಿ ಕಂಗನಾ ಜೊತೆಯಲ್ಲಿ ತಾನು ವಾರಣಾಸಿಯಲ್ಲಿ ತೆಗೆಸಿಕೊಂಡಿದ್ದ ಫೊಟೋ ಒಂದನ್ನು ಸಹ ಜೂಹಿ ಅವರು ತಮ್ಮ ಇನ್ ಸ್ಟ್ರಾ ಖಾತೆಯಲ್ಲಿ ಹಂಚಿಕೊಂಡಿದ್ದರು.
ನಟನೆಯ ವಿಚಾರಕ್ಕೆ ಬರುವುದಾದರೆ ಜೂಹಿ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಏಕ್ ಲಡ್ಕೀ ಕೋ ದೇಖಾ ತೋ ಐಸಾ ಲಗಾ’ ಎಂಬ ಚಿತ್ರದಲ್ಲಿ ಅಭಿನಯಿಸಿದ್ದರು. ಇನ್ನು ಶಾರುಖ್ ಖಾನ್ ಅಭಿನಯದ ‘ಝೀರೋ’ ಚಿತ್ರದಲ್ಲಿ ಜೂಹಿ ಅವರದ್ದು ಗೆಸ್ಟ್ ಅಪೀಯರೆನ್ಸ್ ಆಗಿತ್ತು. ಇನ್ನು ಚಿತ್ರ ನಟನೆ ಹೊರತುಪಡಿಸಿದರೆ ಜೂಹಿ ಚಾವ್ಲಾ ಅವರು ತಮ್ಮ ಪತಿ ಜಯ್ ಮೆಹ್ತಾ ಅವರ ವ್ಯವಹಾರದಲ್ಲಿ ಪಾಲುದಾರರಾಗಿದ್ದಾರೆ ಮಾತ್ರವಲ್ಲದೇ ಐಪಿಎಲ್ ತಂಡ ಕೊಲ್ಕೊತ್ತಾ ನೈಟ್ ರೈಡರ್ಸ್ ನ ಸಹ ಮಾಲಕಿಯೂ ಆಗಿ ಜೂಹಿ ಗುರುತಿಸಿಕೊಂಡಿದ್ದಾರೆ.