ಬಾಲಿವುಡ್ ನಾಯಕ ನಟರು, ನಾಯಕಿಯರು ಬೇರೆ ಬೇರೆ ಖಾಸಗಿ ಕಂಪೆನಿಗಳಿಗೆ, ಸಂಘ ಸಂಸ್ಥೆಗಳಿಗೆ, ವಾಣಿಜ್ಯ ಉದ್ದೇಶದ ಚಟುವಟಿಕೆಗಳಿಗೆ ಪ್ರಚಾರ ರಾಯಭಾರಿಗಳಾಗುವುದು ಹೊಸದೇನಲ್ಲ. ಆದರೆ, ಸದುದ್ದೇಶದ ಕಾರ್ಯಗಳಿಗೆ ತಮ್ಮ ಸಮಯ ನೀಡುವುದು, ಅದರಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರಚಾರ ರಾಯಭಾರಿ ಆಗುವುದು, ಆ ಕಾರ್ಯಗಳನ್ನು ಪ್ರಚಾರಪಡಿಸುವುದಕ್ಕೆ ಅನೇಕ ಸ್ಟಾರ್ ಹಿಂದೇಟು ಹಾಕುತ್ತಾರೆ.
ಈಗ ಯಾಕೆ ಸ್ಟಾರ್‌ಗಳ ರಾಯಭಾರದ ಬಗ್ಗೆ ಮಾತು ಅಂತೀರಾ? ಅದಕ್ಕೂ ಒಂದು ಕಾರಣವಿದೆ. ಅಂದ ಹಾಗೆ, ಆ ಕಾರಣ ಬಾಲಿವುಡ್ ನಟಿ ದಿಯಾ ಮಿರ್ಜಾ. ವಿಷಯ ಏನಪ್ಪ ಅಂದ್ರೆ, ವಿಶ್ವಸಂಸ್ಥೆಯ ಬಹು ಮಹತ್ವಾಕಾಂಕ್ಷೆಯ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆ ಅಭಿಯಾನಕ್ಕೆ ಬಾಲಿವುಡ್ ನಟಿ ದಿಯಾ ಮಿರ್ಜಾ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.
ಜಾಗತಿಕ ಹವಾಮಾನ ಬದಲಾವಣೆ ನಿಯಂತ್ರಣ ಕುರಿತು ಪ್ಯಾರಿಸ್ ಒಪ್ಪಂದದಲ್ಲಿ ಉಲ್ಲೇಖವಾಗಿರುವ ಸುಸ್ಥಿರ ಅಭಿವೃದ್ಧಿಗೆ (ಎಸ್‌ಡಿಜಿ) ನಿಗದಿಪಡಿಸಿರುವ ಗುರಿಗಳ ಸಾಧನೆಗೆ ರಾಷ್ಟ್ರಗಳನ್ನು ಪ್ರೇರೇಪಿಸುವುದು ಅಭಿಯಾನದ ಉದ್ದೇಶವಾಗಿದೆ. ಯುರೋಪಿಯನ್, ಏಷ್ಯಾನ್ ಖಂಡಗಳ ಪ್ರಮುಖ ಜನಪ್ರಿಯ ತಾರೆಯರನ್ನು ಈ ಅಭಿಯಾನದಲ್ಲಿ ರಾಯಭಾರಿಯನ್ನಾಗಿ ನೇಮಿಸಲಾಗುತ್ತಿದ್ದು, ಇನ್ನುಳಿದಂತೆ ಇ ಕಾಮರ್ಸ್ ಕ್ಷೇತ್ರದ ಅಲಿಬಾಬಾ ಸಂಸ್ಥೆಯ ಮುಖ್ಯಸ್ಥ ಜಾಕ್ ಮಾ ಪೆಂಗ್ ಲೀ, ಬ್ರಿಟಿಷ್ ನಟ ರಿಚರ್ಡ್ ಕರ್ಟಿಸ್ ಸೇರಿದಂತೆ 17 ಖ್ಯಾತನಾಮರನ್ನು ವಿಶ್ವಸಂಸ್ಥೆಯ ಈ ಅಭಿಯಾನಕ್ಕೆ ರಾಯಭಾರಿಗಳನ್ನಾಗಿ ನೇಮಿಸಲಾಗಿದೆ. ಇಂಥಾದ್ದೊಂದು ಅಪರೂಪದ ಅವಕಾಶ ಈ ಬಾರಿ ದಿಯಾ ಮಿರ್ಜಾ ಅವರನ್ನು ಹುಡುಕಿಕೊಂಡು ಬಂದಿದೆ.
ಇನ್ನು ಈ ಬಗ್ಗೆ ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿ ಆಂಟೋನಿಯೋ ಗುಟರೆಸ್ ದಿಯಾ ಮಿರ್ಜಾ ಅವರ ಅಧಿಕೃತ ರಾಯಭಾರಿ ನೇಮಕ ಆದೇಶಕ್ಕೆ ಸಹಿ ಹಾಕಿದ್ದಾರೆ ಎಂದು ವಿಶ್ವಸಂಸ್ಥೆಯ ವಕ್ತಾರ ಕಚೇರಿ ಪ್ರಕಟಣೆ ಹೊರಡಿಸಿದೆ.
ಈ ಬಗ್ಗೆ ಮಾತನಾಡಿರುವ ನಟಿ ದಿಯಾ ಮಿರ್ಜಾ ವಿಶ್ವಸಂಸ್ಥೆಯು ನನಗೆ ನೀಡಿರುವ ಅಭೂತಪೂರ್ವ ಗೌರವಕ್ಕೆ ನಾನು ಆಭಾರಿಯಾಗಿದ್ದೇನೆ. ವಿಶ್ವಸಂಸ್ಥೆಯ ಬಹು ಮಹತ್ವಾಕಾಂಕ್ಷೆಯ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಯ ಈ ಅಭಿಯಾನಕ್ಕೆ (ಎಸ್‌ಡಿಜಿ) ನಾನು ಸೂಕ್ತ ನ್ಯಾಯ ಒದಗಿಸಲಿದ್ದೇನೆ ಎಂದು ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.