ಮುಂಬಯಿ: ಮಾದಕದ್ರವ್ಯಕ್ಕೆ ಸಂಬಂಧಿಸಿದ ವಾಟ್ಸ್‌ಆ್ಯಪ್ ಚಾಟ್ ಗ್ರೂಪ್‌ಗೆ ನಟಿ ದೀಪಿಕಾ ಪಡುಕೋಣೆ ಅಡ್ಮಿನ್ ಆಗಿದ್ದರು ಎಂಬ ಮಾಹಿತಿ ಬಹಿರಂಗವಾಗಿದ್ದು, ಬಾಲಿವುಡ್ ಮಾದಕದ್ರವ್ಯ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ದೊರೆತಿದೆ.
ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್‌ಸಿಬಿ) ನಡೆಸಿದ ವಿಚಾರಣೆ ವೇಳೆ ದೀಪಿಕಾ ಅವರ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಈ ಮಾಹಿತಿ ಹೊರಹಾಕಿದ್ದಾರೆ. ಈ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ತಾವು ಮತ್ತು ಜಯ ಸಹಾ ಅವರೂ ಇದ್ದರು ಎಂದೂ ಎನ್‌ಸಿಬಿ ಅಧಿಕಾರಿಗಳಿಗೆ ಹೇಳಿದ್ದಾರೆ. ಇದೇ ವೇಳೆ ಶನಿವಾರ ದೀಪಿಕಾ ಪಡುಕೋಣೆ ಅವರು ಎನ್‌ಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.
ತಾನು ರಿಯಾ ಚಕ್ರವರ್ತಿ ಜತೆ ಡ್ರಗ್ಸ್ ಬಗ್ಗೆ ಚರ್ಚೆ ನಡೆಸಿರುವುದಾಗಿ ಎನ್‌ಸಿಬಿ ಅಧಿಕಾರಿಗಳ ಮುಂದೆ ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ತಪ್ಪೊಪ್ಪಿಕೊಂಡಿದ್ದಾರೆ.
ಕರಣ್ ಜೋಹರ್ ಪಾರ್ಟಿ ಮೇಲೆ ಕಣ್ಣು
2019ರಲ್ಲಿ ಬಾಲಿವುಡ್ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ಆಯೋಜಿಸಿದ್ದ ಪಾರ್ಟಿಯೊಂದರ ಮೇಲೆ ಎನ್‌ಸಿಬಿ ಕಣ್ಣು ಬಿದ್ದಿದೆ. ಈ ಪಾರ್ಟಿಯಲ್ಲಿ ವಿಕಿ ಕೌಶಲ್, ರಣಬೀರ್ ಕಪೂರ್, ದೀಪಿಕಾ ಪಡುಕೋಣೆ, ಶಾಹಿದ್ ಕಪೂರ್ ಮತ್ತು ಮಲ್ಲಿಕಾ ಅರೋರಾ ಭಾಗವಹಿಸಿದ್ದರು.
ಮೂಲಗಳ ಪ್ರಕಾರ ಇವರಿಗೂ ಸದ್ಯದಲ್ಲೇ ಎನ್‌ಸಿಬಿ ನೋಟಿಸ್ ಜಾರಿಯಾಗುವ ಸಾಧ್ಯತೆ ಇದೆ. ಈ ಮಧ್ಯೆ ಕರಣ್ ಜೋಹರ್‌ನ ಕಂಪೆನಿ ಧರ್ಮ ಪ್ರೊಡಕ್ಷನ್ ಸಿಬಂದಿ ಕ್ಷಿತಿಜ್ ಪ್ರಸಾದ್‌ಗೆ ಎನ್‌ಸಿಬಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ. ಗುರುವಾರ ಇವರ ನಿವಾಸದ ಮೇಲೆ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಧರ್ಮ ಪ್ರೊಡಕ್ಷನ್‌ನ ಮಾಜಿ ಉದ್ಯೋಗಿ ಅನುಭವ್ ಚೋಪ್ರಾಗೂ ನೋಟಿಸ್ ನೀಡಲಾಗಿದೆ.