ಮುಂಬಯಿ: ಬಾಲಿವುಡ್ ನ ಮಿ. ಪರ್ಫೆಕ್ಟ್ ಆಮಿರ್ ಖಾನ್ ಅವರ ಮುಂಬರುವ ಚಿತ್ರ ‘ಲಾಲ್ ಸಿಂಗ್ ಛಡ್ಡಾ’ ಚಿತ್ರೀಕರಣ ತಯಾರಿ ಭರದಿಂದ ಸಾಗುತ್ತಿದೆ. ನಟ ಆಮೀರ್ ಖಾನ್ ಅವರು ಈ ಚಿತ್ರದ ಚಿತ್ರೀಕರಣಕ್ಕಾಗಿ ಪರ್ಫೆಕ್ಟ್ ಲೊಕೇಶನ್ ಗಳ ಹುಡುಕಾಟದಲ್ಲಿದ್ದಾರೆ.
ವರದಿಗಳ ಪ್ರಕಾರ ಈ ಚಿತ್ರವನ್ನು ದೇಶದ ವಿವಿಧ ಭಾಗಗಳಲ್ಲಿ ಸುಮಾರು 100 ಕಡೆ ಶೂಟಿಂಗ್ ಮಾಡುವ ಇರಾದೆ ಚಿತ್ರತಂಡದ್ದಾಗಿದೆ. ಈ ಚಿತ್ರದ ನಾಯಕನ ಪಾತ್ರದ ಜೀವನ ಯಾತ್ರೆ ಹೀಗೆ ಬೇರೆ ಬೇರೆ ಕಡೆಗಳಲ್ಲಿ ಸಾಗುವುದರಿಂದ ಈ ಚಿತ್ರಕ್ಕೆ ವಿಭಿನ್ನ ಸ್ಥಳಗಳಲ್ಲಿ ಚಿತ್ರೀಕರಣ ಮಾಡುವುದು ಅನಿವಾರ್ಯವಾಗಲಿದೆ. ಹಾಗಾಗಿ ತನ್ನ ಚಿತ್ರಗಳಲ್ಲಿ ಯಾವತ್ತೂ ಸ್ವಾಭಾವಿಕತೆಗೆ ಹೆಚ್ಚಿನ ಒತ್ತು ನೀಡುವ ಆಮಿರ್ ಖಾನ್ ಈ ಚಿತ್ರಕ್ಕಾಗಿಯೂ ಸಹ ದೇಶಾದ್ಯಂತ ಇರುವ ಉತ್ತಮ ಚಿತ್ರೀಕರಣ ಸ್ಥಳಗಳನ್ನು ಹುಡುಕುವಂತೆ ತನ್ನ ತಂಡಕ್ಕೆ ಸೂಚಿಸಿದ್ದಾರೆ.
ನಾಯಕನ ಜೀವನವನ್ನು ವಿವಿಧ ಕಾಲಘಟ್ಟಗಳಲ್ಲಿ ತೆರೆ ಮೇಲೆ ಕಾಣಿಸಲು ಈ ವಿಭಿನ್ನ ಲೊಕೇಷನ್ ಗಳು ಸಹಕಾರಿಯಾಗಲಿವೆ ಹಾಗಾಗಿ ‘ಲಾಲ್ ಸಿಂಗ್ ಛಡ್ಡಾ’ ಚಿತ್ರವು ದೆಹಲಿ, ಮುಂಬಯಿ, ಗುಜರಾತ್, ಹೈದ್ರಾಬಾದ್, ಬೆಂಗಳೂರು ಮತ್ತು ಕೊಲ್ಕೊತ್ತಾಗಳಲ್ಲಿ ಚಿತ್ರೀಕರಣಗೊಳ್ಳಲಿದೆ ಎಂದು ತಿಳಿದುಬಂದಿದೆ. ಹೀಗಾದಲ್ಲಿ ದೇಶದ ವಿವಿಧ ಕಡೆ ನೂರಕ್ಕೂ ಹೆಚ್ಚು ಸ್ಥಳಗಲ್ಲಿ ಚಿತ್ರೀಕರಣಗೊಂಡ ಮೊದಲ ಬಾಲಿವುಡ್ ಚಿತ್ರ ಇದಾಗಲಿದೆ ಎನ್ನಲಾಗುತ್ತಿದೆ.
ಲಾಲ್ ಸಿಂಗ್ ಛಡ್ಡಾ ಚಿತ್ರದ ಚಿತ್ರೀಕರಣವು ಇದೇ ನವಂಬರ್ 01ರಿಂದ ಪ್ರಾರಂಭವಾಗಲಿದ್ದು, ‘ಸೀಕ್ರೇಟ್ ಸೂಪರ್ ಸ್ಟಾರ್’ ಚಿತ್ರದ ನಿರ್ದೇಶಕ ಅದ್ವೈತ್ ಚಂದನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
‘ಲಾಲ್ ಸಿಂಗ್ ಛಡ್ಡಾ’ ಚಿತ್ರವು 1994ರಲ್ಲಿ ಹಾಲಿವುಡ್ ನಲ್ಲಿ ತೆರೆಕಂಡ ಟಾಮ್ ಹಾಂಕ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ ‘ಫಾರೆಸ್ಟ್ ಗಂಪ್’ ಎಂಬ ಜನಪ್ರಿಯ ಚಿತ್ರದ ಹಿಂದಿ ಅವತರಣಿಕೆಯಾಗಿದೆ. ಅಮೆರಿಕಾದ್ಯಂತ ವಿವಿಧ ಘಟನಾವಳಿಗಳಿಗೆ ಸಾಕ್ಷಿಯಾಗುವ ಮತ್ತು ತನಗೆ ಗೊತ್ತಿಲ್ಲದಂತೆಯೇ ಇನ್ನೊಂದಷ್ಟು ಘಟನೆಗಳನ್ನು ಪ್ರಭಾವಿಸುವ ಕಡಿಮೆ ಬುದ್ದಿಮತ್ತೆ (ಐ.ಕ್ಯು.) ಹೊಂದಿರುವ ಆದರೆ ಕರುಣಾಮಯಿ ಹೃದಯವಿರುವ ವ್ಯಕ್ತಿಯೊಬ್ಬನ ಸುತ್ತ ಸುತ್ತುವ ಕಥೆ ಇದಾಗಿದೆ.