ಟೂರ್ನಮೆಂಟ್ ಗೆಲ್ಲಲು ಅವರು ನಡೆಸುವ ತಯಾರಿ, ತೋರಿಸುವ ಕೆಚ್ಚು, ಕೌಶಲಗಳೆಲ್ಲ ತಮ್ಮ ಜೀವನದ ಸಮಸ್ಯೆಗಳನ್ನು ಉತ್ತರಿಸಲು ನಡೆಸುವ ಪ್ರಯತ್ನಗಳಾಗಿ ನಮ್ಮ ಮನಸ್ಸಿಗೆ ಮುಟ್ಟುವುದು ನಾಟಕದ ಶಕ್ತಿ. ಕೊನೆಯಲ್ಲಿ ಅವರು ಗೆಲ್ಲುವುದು ಮ್ಯಾಚನ್ನು ಮಾತ್ರವಲ್ಲ, ತಮ್ಮ ಸಮಸ್ಯೆಗಳನ್ನು
ಕುಂದಾಪುರದ ರಂಗ ಅಧ್ಯಯನ ಕೇಂದ್ರ ಹಮ್ಮಿಕೊಂಡಿದ್ದ ಐದು ದಿನಗಳ ಭಾರತೀಯ ರಂಗ ಮಹೋತ್ಸವದ ಕೊನೆಯ ದಿನದ ನಾಟಕ, ಬೊಲಿವಿಯನ್ ಸ್ಟಾರ್ಸ್.ಕೇರಳದ ಮಲಪುರಂನ ಲಿಟ್ಲ ಅರ್ಥ್ ಸ್ಕೂಲ್ ಆಫ್ ಥಿಯೇಟರ್ ತಂಡ ಮಲಯಾಳಂ ಭಾಷೆಯಲ್ಲಿ ಪ್ರಸ್ತುತ ಪಡಿಸಿದ ಒಂದೂಕಾಲು ಗಂಟೆಯ ಅವಧಿಯ ಈ ನಾಟಕ ತನ್ನ ವಿಭಿನ್ನ ರಂಗ ತಂತ್ರ ಹಾಗೂ ಕಲಾವಿದರ ಸತ್ವಪೂರ್ಣ ಅಭಿನಯದಿಂದ ಮೆಚ್ಚುಗೆ ಗಳಿಸಿತು. ಕೇರಳದ ಹಳ್ಳಿಗಳ ಜನಪ್ರಿಯ ಫುಟ್ಬಾಲ್ ಪ್ರಕಾರ “ಸೆವೆನ್ಸ್’ ಅನ್ನು ಕ್ರೀಡಾಂಗಣದೊಳಗೆ ಕೂತು ನೋಡಿದ ಅನುಭವ ನೀಡಿತು. ವಿಶಿಷ್ಟ ರಂಗ ವಿನ್ಯಾಸ ಮತ್ತು ಬೆಳಕಿನ ಸಂಯೋಜನೆ ಈ ನಾಟಕದ ವಿಶೇಷ.
ವಿಭಿನ್ನ ಸಮಸ್ಯಾತ್ಮಕ ಹಿನ್ನೆಲೆಯಿಂದ ಬಂದ ಬೊಲಿವಿಯನ್ ಸ್ಟಾರ್ಸ್ ಎಂಬ ಫುಟ್ಬಾಲ… ತಂಡವೊಂದರ ಆಟಗಾರರಿಗೆ ತಮ್ಮನ್ನು ಸುತ್ತಿರುವ ಸರಪಳಿಗಳನ್ನು ತೊಡೆದು ಹಾಕಲು ಫುಟ್ಬಾಲ್ ಆಟ ಒಂದು ಮಾಧ್ಯಮ. ಈ ಆಟ ಅವರಿಗೊಂದು ಹೊಸ ಐಡೆಂಟಿಟಿ ನೀಡುತ್ತದೆ ಹಾಗೂ ಒಗ್ಗಟ್ಟಾಗಿ ಸಮಸ್ಯೆಗಳನ್ನು ಎದುರಿಸಲು ಶಕ್ತಿ, ಚೈತನ್ಯ ತುಂಬುತ್ತದೆ. ಟೂರ್ನಮೆಂಟ್ ಗೆಲ್ಲಲು ಅವರು ನಡೆಸುವ ತಯಾರಿ, ತೋರಿಸುವ ಕೆಚ್ಚು, ಕೌಶಲಗಳೆಲ್ಲ ತಮ್ಮ ಜೀವನದ ಸಮಸ್ಯೆಗಳನ್ನು ಉತ್ತರಿಸಲು ನಡೆಸುವ ಪ್ರಯತ್ನಗಳಾಗಿ ನಮ್ಮ ಮನಸ್ಸಿಗೆ ಮುಟುÌವುದು ನಾಟಕದ ಶಕ್ತಿ. ಕೊನೆಯಲ್ಲಿ ಅವರು ಗೆಲ್ಲುವುದು ಮ್ಯಾಚನ್ನು ಮಾತ್ರವಲ್ಲ, ತಮ್ಮ ಸಮಸ್ಯೆಗಳನ್ನು ಕೂಡ. ಫುಟ್ಬಾಲ್ ಕೇರಳದಲ್ಲಿ ಜನಪ್ರಿಯ ಕ್ರೀಡೆ. ಈ ಆಟವನ್ನೇ ನಾಟಕಕ್ಕೆ ಅಳವಡಿಸಿದ ರೀತಿ ಅನನ್ಯ.ನಿರ್ದೇಶಕನ ಜಾಣ್ಮೆಗೆ ಸವಾಲೊಡ್ಡುವ ನಾಟಕವಿದು.
ಉದ್ದುದ್ದ ಸಂಭಾಷಣೆಗಳ ಭಾರವಿಲ್ಲದೆ, ಸೂಕ್ಷ್ಮ ವಿಷಯಗಳನ್ನು ಕೂಡ ಯಾವುದೇ ಉದ್ವೇಗವಿಲ್ಲದೆ ನಿರ್ವಹಿಸಿದ್ದು ನಿರ್ದೇಶಕ ಅರುಣಲಾಲ್ ಅವರ ಕ್ರಿಯಾಶೀಲತೆಗೆ ಸಾಕ್ಷಿ. ತನ್ನ ಜತೆಗೇ ಇಷ್ಟು ದಿನ ಆಡಿಕೊಂಡಿದ್ದ ಆಟಗಾರ ಹೆಣ್ಣೆಂದು ಸಹ ಆಟಗಾರನೊಬ್ಬನಿಗೆ ಗೊತ್ತಾಗುವುದು ಅವಳು ಮುಟ್ಟಾಗುವ ಮೂಲಕ. “ಹ್ಯಾಪಿ ಬ್ಲೀಡಿಂಗ್’ನ ಈ ಸನ್ನಿವೇಶವನ್ನು ಕಲಾವಿದರ ಪ್ರಬುದ್ಧ ಅಭಿನಯ ಸಹಜವಾಗಿ ಕಟ್ಟಿಕೊಟ್ಟಿತು. ಟ್ರಾನ್ಸ್‌ಜಂಡರ್ ಆಟಗಾರನ ಸಮಸ್ಯೆಯನ್ನು ಕೂಡ ಪ್ರೇಕ್ಷಕರ ಸಂವೇದನೆಗೆ ದಕ್ಕುವಂತೆ ನಿರ್ವಹಿಸಿದ್ದು ಕಲಾವಿದರ ಅಭಿನಯ ಪ್ರೌಢಿಮೆ.
ಭಾಷೆ ಸ್ಪಷ್ಟವಾಗಿ ಅರ್ಥವಾಗದಿದ್ದರೂ ನಾಟಕದುದ್ದಕ್ಕೂ ಎಲ್ಲೂ ಆ ಮಿತಿಯ ಅರಿವು ನಮಗಾಗದಿದ್ದಕ್ಕೆ ಕಾರಣಕಲಾವಿದರ ಅಭಿನಯದಲ್ಲಿದ್ದ ಎನರ್ಜಿ. ಮುಖ್ಯವಾಗಿ ತಂಡದ ಕ್ಯಾಪ್ಟನ್ ಪಾತ್ರ ನಿರ್ವಹಿಸಿದ ಸುರೇಶ್ ಕುಮಾರ್ ಅಭಿನಯ ಹಾಗೂ ಕಾಲಿನ ಊನತೆ ಇರುವ ಆಟಗಾರನ ಪಾತ್ರ ನಿರ್ವಹಿಸಿದ ಸಂಜಯ್ ಶಂಕರ್ ಹಾಡುವ ಕೇರಳದ ಜನಪದ ಸೊಗಡಿನ ಹಾಡು ನೆನಪಿನಲ್ಲಿ ಉಳಿಯುತ್ತದೆ.
ಸತ್ಯನಾರಾಯಣ ತೆಕ್ಕಟ್ಟೆ