ಬೊಲಿವಿಯಾ: ಇಲ್ಲಿನ ಸರಕಾರ ಕಡಿಮೆ ಸೋಂಕು ಪ್ರಕರಣಗಳಿರುವ ಪ್ರದೇಶಗಳಲ್ಲಿ ಲಾಕ್‌ಡೌನ್ ನಿಯಮಗಳನ್ನು ಸಡಿಲಗೊಸಿದ್ದು, ಭಾನುವಾರದಿಂದಲೇ ಸಡಿಲಿಕೆಯ ಹೊಸ ನಿಯಮಗಳು ಜಾರಿಯಾಗಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ಫಾರಿನ್ ಬ್ರಿಫ್ ವರದಿ ಮಾಡಿದೆ.
ಆದರೆ ಈ ವಿಷಯವಾಗಿ ಹೆಚ್ಚಿನ ಮಾಹಿತಿಯನ್ನು ಸರಕಾರ ಹಂಚಿಕೊಂಡಿಲ್ಲ. ಜುಲೈ ಅಥವಾ ಆಗಸ್ಟ್ ಮಧ್ಯಾಂತರದಲ್ಲಿ ನಡೆಯಲಿರುವ ಚುನಾವಣೆಗಾಗಿ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ ಎನ್ನಲಾಗುತ್ತಿದೆ.
ದೇಶದೆಲ್ಲೆಡೆ ಲಾಕ್‌ಡೌನ್ ಇದ್ದ ಕಾರಣ ಮೇ 3ರಂದು ನಡೆಯಬೇಕಿದ್ದ ಚುನಾವಣೆಯನ್ನು ಮುಂದುಡಲಾಗಿತ್ತು. ಜುಲೈ ಮತ್ತು ಆಗಸ್ಟ್ ತಿಂಗಳ ನಡುವೆ ಮತದಾನ ನಡೆಸುವುದಾಗಿ ಸರಕಾರ ಘೋಷಿಸಿದೆ. ಅಲ್ಲಿಯವರೆಗೂ ಜೀನೈನ್ ಅನೆಜ್ ಅವರ ನೇತೃತ್ವದಲ್ಲಿ ಆಡಳಿತ ನಡೆಯಲಿದ್ದು, ಬಿಕ್ಕಟ್ಟಿನ ಸಮಯದಲ್ಲಿ ಅನೆಜ್ ತೆಗೆದುಕೊಳ್ಳುತ್ತಿರುವ ನಿರ್ಧಾರಗಳ ಕುರಿತು ದೇಶದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
ಚುನಾವಣೆಯಲ್ಲಿ ಅನೆಜ್ ಸ್ಪರ್ಧಿಸಲಿದ್ದಾರೆ; ಸೋಂಕಿನ ವಿರುದ್ಧ ಹೋರಾಡಲು ಅವರು ರೂಪಿಸಿರುವ ಯೋಜನೆಯನ್ನು ಬೊಲಿವಿಯಾದ ಜನರು ಒಪ್ಪಿಕೊಂಡಿ ದ್ದಾರೆ. ಆದರೆ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಇವೊ ಮೊರೇಲ್ಸ್ ಅವರನ್ನು ಸೋಲಿಸಿದ್ದ ಮೂಮೆಂಟ್ ಫಾರ್ ಸೋಷಿಯಲಿಸಂ ಪಕ್ಷದ ಲೂಯಿಸ್ ಆರ್ಸ್ ವಿರುದ್ಧ ಜಯ ಸಾಧಿಸಲು ಅನೆಜ್ ಅವರಿಗೆ ಸಾರ್ವಜನಿಕವಾಗಿ ಸಾಕಷ್ಟು ಬೆಂಬಲವಿಲ್ಲ ಎಂದು ಹೇಳಲಾಗುತ್ತಿದೆ. ಮಾಜಿ ಅಧ್ಯಕ್ಷ ಕಾರ್ಲೋಸ್ ಮೆಸಾ ಅವರ ವಿರುದ್ಧ ಮೊದಲ ಸುತ್ತಿನ ಚುನಾವಣೆಯಲ್ಲಿಯೇ ಸೋಲನ್ನು ಅನುಭವಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.