ದಾಂಡೇಲಿ: ಕ್ರೂಸರ್ ವಾಹನ ಹಾಗೂ ಬೊಲೆರೋ ವಾಹನ ಮುಖಾಮುಖಿ ಢಿಕ್ಕಿಯಾಗಿ ಎರಡು ವಾಹನದಲ್ಲಿದ್ದ ಒಟ್ಟು 15 ಜನರು ಗಾಯಗೊಂಡ ಘಟನೆ ದಾಂಡೇಲಿ ಸಮೀಪ ಅಂಬಿಕಾನಗರ-ಕುಳಗಿ ರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ದಾಂಡೇಲಿಯಿಂದ ಅಂಕೋಲಾ ಕಡೆಗೆ ಮದುವೆಗೆಂದು ಹೋಗುತ್ತಿದ್ದ ಕ್ರೂಸರ್ ವಾಹನ ಹಾಗೂ ಅಂಬಿಕಾನಗರದಿಂದ ದಾಂಡೇಲಿ ಕಡೆಗೆ ಬರುತ್ತಿದ್ದ ಕೆಪಿಸಿಗೆ ಸೇರಿದ್ದೆನ್ನಲಾದ ಬೊಲೆರೋ ವಾಹನ ಮುಖಾಮುಖಿ ಢಿಕ್ಕಿಯಾಗಿದೆ.
ಢಿಕ್ಕಿಯ ರಭಸಕ್ಕೆ ಕ್ರೂಸರ್ ಮೂರು ಪಲ್ಟಿಯಾಗಿ ಬಿದ್ದಿದೆ. ಬೊಲೆರೋದಲ್ಲಿದ್ದ ಅಂಬಿಕಾನಗರದ 4 ವರ್ಷದ ಸುಮೀತ್ ಜ್ಯೋತಿಬಾ ಪಾವಣೆ ಎಂಬ ಪಟ್ಟ ಬಾಲಕನಿಗೆ ಕಣ್ಣಿನ ಮೇಲೆ ಮತ್ತು ಕ್ರೂಸರಿನಲ್ಲಿದ್ದ ನಗರದ ಅಂಬೇವಾಡಿ ನಿವಾಸಿ ಸಂದೀಪ ಕೃಷ್ಣ ನಾಯ್ಕ ಇವರ ಕಾಲಿಗೆ ಗಂಭಿರ ಗಾಯವಾಗಿದ್ದು, ದಾಂಡೇಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ಕಳುಹಿಸಿಕೊಡಲಾಗಿದೆ.
ಗಾಯಗೊಂಡಿರುವ 13 ಜನರನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತಕ್ಕೀಡಾದ ಎರಡು ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿದೆ.
ಘಟನೆಗೆ ಅತಿಯಾದ ವೇಗದ ಚಾಲನೆಯೆ ಕಾರಣವೆಂದು ತಿಳಿದು ಹೇಳಲಾಗಿದೆ. ದಾಂಡೇಲಿ ಗ್ರಾಮೀಣ ಮತ್ತು ನಗರ ಠಾಣೆಯ ಪೊಲೀಸರು ಹಾಗೂ 112 ತುರ್ತು ವಾಹನದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.