Advertisement

ಧೈರ್ಯದಿಂದ ಪರೀಕ್ಷೆ ಎದುರಿಸಲು ಸಲಹೆ

08:06 AM Feb 12, 2019 | Team Udayavani |

ಕಲಬುರಗಿ: ಹತ್ತನೇ ಹಾಗೂ 12ನೇ ತರಗತಿ ವಿದ್ಯಾರ್ಥಿಗಳು ಮಾನಸಿಕ ಒತ್ತಡದಿಂದ ಬಳಲದೇ ಧೈರ್ಯವಾಗಿ ಪರೀಕ್ಷೆ ಎದುರಿಸಬೇಕು ಎಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

Advertisement

ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಡಾ| ಅಂಬೇಡ್ಕರ ಭವನದಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ವಸತಿ ಶಾಲಾ ನೌಕರರ ಸಂಘ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯದ ಡಾ| ಬಿ.ಆರ್‌. ಅಂಬೇಡ್ಕರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಜಿಲ್ಲೆಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ವಸತಿ ಶಾಲೆಗಳಲ್ಲಿ 10ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆ ಹಾಗೂ ಪರೀಕ್ಷಾ ಭಯ ನಿವಾರಣೆಗಾಗಿ ಹಮ್ಮಿಕೊಂಡಿದ್ದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು 8, 9ನೇ ತರಗತಿ ವಾರ್ಷಿಕ ಪರೀಕ್ಷೆಗಳನ್ನು ಎದುರಿಸಿದ ಹಾಗೆ ಭಯವಿಲ್ಲದೇ 10ನೇ ತರಗತಿ ಪರೀಕ್ಷೆಗಳನ್ನು ಸಹ ಎದುರಿಸಬೇಕು. ಮಾನಸಿಕ ಒತ್ತಡವೇ ಕಡಿಮೆ ಅಂಕ ಪಡೆಯಲು ಹಾಗೂ ಅನುತ್ತೀರ್ಣರಾಗಲು ಕಾರಣವಾಗಿದೆ ಎಂದು ಹೇಳಿದರು.

ವರ್ಷವಿಡೀ ಓದಿರುವ ವಿಷಯವನ್ನು ಪರೀಕ್ಷೆಯಲ್ಲಿ ಅಚ್ಚುಕಟ್ಟಾಗಿ ಬರೆಯಬೇಕು. ಪರೀಕ್ಷಾ ಸಮಯದಲ್ಲಿ ಗಲಿಬಿಲಿಗೊಳ್ಳದೇ ಮನಸ್ಸನ್ನು ಕೇಂದ್ರೀಕರಿಸಿ ಬರುವ ಉತ್ತರಗಳನ್ನು ಮೊದಲು ಬರೆದು ಬಾರದಂತಹ ಪ್ರಶ್ನೆಗಳಿಗೆ ನಿಧಾನವಾಗಿ ಆಲೋಚಿಸಿ ಬರೆದಲ್ಲಿ ಹೆಚ್ಚಿನ ಅಂಕ ಗಳಿಸಲು ಸಾಧ್ಯ ಎಂದು ಹೇಳಿದರು.

ಪರೀಕ್ಷೆಗಳು ವಿವಿಧ ವಿಧವಾದ ರೀತಿಯಲ್ಲಿರುತ್ತವೆ. ಇವುಗಳಿಗೆ ಸಿದ್ಧವಾಗಬೇಕಾದರೆ ಧನಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. 10ನೇ ತರಗತಿ ಅಂಕಗಳ ಮೇಲೆ ಜೀವನ ಅವಲಂಬಿತವಾಗಿರುವುದಿಲ್ಲ. ಜೀವನದಲ್ಲಿ ಉನ್ನತ ಸ್ಥಾನಕ್ಕೆ ಬೆಳೆಯಬೇಕಾದರೆ ಧನಾತ್ಮಕ ಮನೋಭಾವ ಅಗತ್ಯವಾಗಿದೆ. ವಿದ್ಯಾರ್ಥಿಗಳು ಪ್ರತಿದಿನ ದಿನಪತ್ರಿಕೆ ಓದುವ ರೂಢಿ ಬೆಳೆಸಿಕೊಳ್ಳಬೇಕು. ದಿನಪತ್ರಿಕೆ ಓದುವುದರಿಂದ ಸಾಮಾನ್ಯ ಜ್ಞಾನ ಹಾಗೂ ದಿನನಿತ್ಯದ ಆಗುಹೋಗುಗಳ ಜ್ಞಾನ ಹೆಚ್ಚಾಗಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ಹೇಳಿದರು.

Advertisement

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಸ್‌.ಆರ್‌. ನಿರಂಜನ್‌ ಮಾತನಾಡಿ, ಇಂದಿನ ಯುಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ತುಂಬಾ ಅವಶ್ಯಕವಾಗಿದೆ. ಕಾರಣ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಶಕ್ತರನ್ನಾಗಿಸಬೇಕು. ಮಕ್ಕಳು ಭಯವಿಲ್ಲದೇ ಎಲ್ಲ ವಿಷಯಗಳ ಬಗ್ಗೆ ಮಾತನಾಡುವುದನ್ನು ಕಲಿಸಬೇಕು ಎಂದು ಹೇಳಿದರು.

ಜಿಪಂ ಸಿಇಒ ಡಾ| ಪಿ. ರಾಜಾ, ಗುಲಬರ್ಗಾ ವಿಶ್ವವಿದ್ಯಾಲಯದ ಡಾ| ಬಿ.ಆರ್‌. ಅಂಬೇಡ್ಕರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ| ಎಸ್‌.ಪಿ. ಮೇಲಕೇರಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಸತೀಶ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮೆಹಬೂಬ್‌ ಪಾಶಾ ಕಾರಟಗಿ, ಬೆಳ್ತ‌ಂಗಡಿ ಸರ್ಕಾರಿ ಪ್ರೌಢಶಾಲೆ ಗಣಿತ ಶಿಕ್ಷಕ ಯಾಕೂಬ್‌ ಕೊಯ್ನಾರು, ಕ್ರೈಸ್‌ ಸಂಸ್ಥೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಆರ್‌.ವೈ. ಬೆಟ್ಟದೂರ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next