Advertisement

ಅಯೋಗ್ಯನ ರಾಣಿಯ ಬೋಲ್ಡ್‌ ಟಾಕ್‌

11:46 AM Aug 13, 2018 | |

ರಚಿತಾ ರಾಮ್‌ ಸಖತ್‌ ಎಕ್ಸೈಟ್‌ ಆಗಿದ್ದಾರೆ. ಅದಕ್ಕೆ ಕಾರಣ “ಅಯೋಗ್ಯ’. ರಚಿತಾ ನಾಯಕಿಯಾಗಿ ನಟಿಸಿರುವ “ಅಯೋಗ್ಯ’ ಚಿತ್ರ ಈ ವಾರ (ಆ.17) ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ರಚಿತಾ ಪಕ್ಕಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಮಂಡ್ಯದ ಖಡಕ್‌ ಹುಡುಗಿ ಎಂದು ನೀವು ಹೇಳುವುದಾದರೆ ಅಭ್ಯಂತರವಿಲ್ಲ. ರಚಿತಾ ಎಕ್ಸೈಟ್‌ ಆಗಲು ಮುಖ್ಯ ಕಾರಣ ಡಬ್ಬಿಂಗ್‌.

Advertisement

ಬೆಂಗಳೂರು ಕನ್ನಡ ಮಾತನಾಡೋದು ರಚಿತಾ ರಾಮ್‌ಗೆ ಕಷ್ಟವೇನಲ್ಲ. ಏಕೆಂದರೆ ರಚಿತಾ ಬೆಂಗಳೂರು ಹುಡುಗಿ. ಆದರೆ, ಮಂಡ್ಯ ಕನ್ನಡ ಮಾತನಾಡೋದು ಸ್ವಲ್ಪ ಕಷ್ಟ. ಆದರೆ, ರಚಿತಾ ಮಾತ್ರ ಅದನ್ನೇ ಸವಾಲಾಗಿ ಸ್ವೀಕರಿಸಿ ಡಬ್ಬಿಂಗ್‌ ಮಾಡಿದ್ದಾರೆ. ಮೊದಲ ಬಾರಿಗೆ ಮಂಡ್ಯ ಭಾಷೆಯಲ್ಲಿ ಡಬ್ಬಿಂಗ್‌  ಮಾಡಿರೋದರಿಂದ ರಚಿತಾ ಸಖತ್‌ ಎಕ್ಸೈಟ್‌ ಆಗಿದ್ದಾರೆ. ಸುಮಾರು ಮೂರೂವರೆ ಗಂಟೆ ಸಮಯದಲ್ಲಿ ತಮ್ಮ ಪಾಲಿನ ಡಬ್ಬಿಂಗ್‌ ಮುಗಿಸಿಬಿಟ್ಟರಂತೆ.

“ಮಂಡ್ಯ ಭಾಷೆಯಲ್ಲಿ ನಾನೇ ಡಬ್ಬಿಂಗ್‌ ಮಾಡಿದ್ದೇನೆ. ಯಾವುದೋ ಒಂದು ಪದ ಬೇರೆ ತರಹ ಇತ್ತು. ಆದರೆ, ಮಂಡ್ಯ ಭಾಷೆಗೆ ಅದು ಸರಿಹೊಂದುತ್ತಿರಲಿಲ್ಲ. ಕೊನೆಗೆ ಅದನ್ನು ತಿಳಿದುಕೊಂಡು ಮಾಡಿದೆ’ ಎಂದು ಖುಷಿಯಾಗುತ್ತಾರೆ. ನಿರ್ದೇಶಕ ಮಹೇಶ್‌, ನಾಯಕ ಸತೀಶ್‌ ಅವರ ಸಹಕಾರದಿಂದ ಡಬ್ಬಿಂಗ್‌ ಸುಲಭವಾಯಿತು ಎನ್ನಲು ರಚಿತಾ ಮರೆಯೋದಿಲ್ಲ.

ಫೆವರೇಟ್‌ ಏಪ್ರಿಲ್‌: ರಚಿತಾ ರಾಮ್‌ “ಏಪ್ರಿಲ್‌’ ಎಂಬ ಸಿನಿಮಾದಲ್ಲಿ ನಟಿಸುತ್ತಿರುವ ಇತ್ತೀಚೆಗೆ ಫ‌ಸ್ಟ್‌ಲುಕ್‌ ಬಿಡುಗಡೆಯಾಗಿರುವ ವಿಚಾರ ನಿಮಗೆ ಗೊತ್ತೇ ಇದೆ.ಸಾಮಾನ್ಯವಾಗಿ ನಟಿಯರು ಬಿಝಿಯಾಗಿರುವಾಗ ನಾಯಕಿ ಪ್ರಧಾನ ಸಿನಿಮಾ ಒಪ್ಪಿಕೊಳ್ಳೋದಿಲ್ಲ. ಆದರೆ, ರಚಿತಾ ಒಪ್ಪಿಕೊಂಡಿದ್ದಾರೆ. ಅದೇ ಒಂದು ಮಜಾ ಎನ್ನುವ ಉತ್ತರ ಅವರಿಂದ ಬರುತ್ತದೆ.

“ಅವಕಾಶ ಕಡಿಮೆಯಾದಾಗ ನಾಯಕಿ ಪ್ರಧಾನ ಸಿನಿಮಾ ಒಪ್ಪಿಕೊಂಡರೆ ಅವಕಾಶವಿಲ್ಲದೇ ಒಪ್ಪಿಕೊಂಡರು ಎಂಬ ಮಾತು ಬರುತ್ತದೆ. ಅದೇ ನಾವು ಚಾಲ್ತಿಯಲ್ಲಿರುವಾಗ, ಬಿಝಿಯಾಗಿರುವಾಗ ನಾಯಕಿ ಪ್ರಧಾನ ಚಿತ್ರದಲ್ಲಿ ನಟಿಸಿ, ನಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕು. ನನಗೆ ವೈಯಕ್ತಿಕವಾಗಿ ತುಂಬಾ ಇಷ್ಟವಾದ ಸಿನಿಮಾ “ಏಪ್ರಿಲ್‌’. ಇತ್ತೀಚೆಗೆ ಫೋಟೋಶೂಟ್‌ ನಡೀತಾ ಇತ್ತು.

Advertisement

ಆ ಮೇಕಪ್‌ನಲ್ಲಿ ಯಾರೂ ನನ್ನನ್ನು ಗುರುತಿಸಿರಲಿಲ್ಲ. ಯಾರೋ ಹೊಸ ಹುಡುಗಿ ಎಂದೇ ಭಾವಿಸಿದ್ದರು. ತುಂಬಾ ಸಹಜವಾಗಿ ಆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ, ಇದೊಂದು ಥ್ರಿಲ್ಲರ್‌ ಸಿನಿಮಾವಾಗಿದ್ದು, ಬೇರೆಯವರ ಸಮಸ್ಯೆಗಳನ್ನು ಬಗೆಹರಿಸುವ ಮನೋವೈದ್ಯೆಯೊಬ್ಬರು ತಾವೇ ಸಮಸ್ಯೆಯಲ್ಲಿ ಸಿಕ್ಕಿಕೊಂಡರೆ ಏನಾಗುತ್ತದೆ ಎಂಬ ಅಂಶದೊಂದಿಗೆ ಈ ಸಿನಿಮಾ ಸಾಗುತ್ತದೆ’ ಎಂದು “ಏಪ್ರಿಲ್‌’ ಬಗ್ಗೆ ಖುಷಿಯಿಂದ ಹೇಳುತ್ತಾರೆ ರಚಿತಾ.

ಉಪ್ಪಿ ಪಾಠ: ರಚಿತಾ ರಾಮ್‌, ಉಪೇಂದ್ರ ನಾಯಕರಾಗಿರುವ “ಐ ಲವ್‌ ಯೂ’ ಚಿತ್ರದಲ್ಲಿ ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಯಾವ ಚಿತ್ರದಲ್ಲೂ ಕಾಣಿಸಿಕೊಳ್ಳದಷ್ಟೂ ಬೋಲ್ಡ್‌ ಪಾತ್ರವಂತೆ. ಅದಕ್ಕೆ ಕಾರಣ ಕಥೆ ಎನ್ನುತ್ತಾರೆ ರಚಿತಾ. “ಈ ಸಿನಿಮಾ ತುಂಬಾ ಪ್ರಾಕ್ಟಿಕಲ್‌ ಆಗಿದೆ. ಎಲ್ಲವನ್ನು ನೇರಾನೇರ ಹೇಳುವ ಸಿನಿಮಾ.

ನಾನಿಲ್ಲಿ ಕಾಲೇಜು ವಿದ್ಯಾರ್ಥಿನಿಯಾಗಿ ಕಾಣಿಸಿಕೊಂಡಿದ್ದೇನೆ. ಲವ್‌ ಬಗ್ಗೆ ಪ್ರಬಂಧ ತಯಾರಿಸುವ ಸಲುವಾಗಿ ಓಡಾಡಿಕೊಂಡಿರುವ ಹುಡುಗಿ. ಉಪೇಂದ್ರ ಅವರದು ಸಖತ್‌ ಪ್ರಾಕ್ಟಿಕಲ್‌ ಆಗಿರುವ ಪಾತ್ರ. ಚಿತ್ರದಲ್ಲಿ ನಾನು ಲವ್‌ ಅಂದರೇನು ಎಂದು ಉಪ್ಪಿ ಅವರನ್ನು ಕೇಳಿದಾಗ ಅವರು ಸೆಕ್ಸ್‌ ಎನ್ನುತ್ತಾರೆ. ಅದು ಹೇಗೆ ಎಂಬುದನ್ನು  ಅರ್ಥಮಾಡಿಸುತ್ತಾರೆ.

ನೇರವಾಗಿ ಸೆಕ್ಸ್‌ ಬಗ್ಗೆ ಪ್ರಸ್ತಾಪ ಮಾಡುವ ಬದಲು ಪ್ರೀತಿ ಮಾಡಿ ಆ ನಂತರ ಸೆಕ್ಸ್‌ನತ್ತ ವಾಲುತ್ತಾರೆ ಎಂದು ಅರ್ಥ ಮಾಡಿಸುತ್ತಾರೆ ಅವರು. ಆ ತರಹದ ಬೋಲ್ಡ್‌ ಆದ ಪಾತ್ರ. ಇಡೀ ಸಿನಿಮಾ ಹಾಗೇ ಸಾಗುತ್ತದೆ. ತೆಲುಗಿನ “ಅರ್ಜುನ್‌ ರೆಡ್ಡಿ’ ಶೈಲಿಯ ಸಿನಿಮಾವಿದು. ಅಲ್ಲಿ ದೃಶ್ಯಗಳ ಮೂಲಕ ಹೇಳಲಾಗಿತ್ತು. ಇಲ್ಲಿ ಸಂಭಾಷಣೆಗಳ ಮೂಲಕ ಹೇಳಲಾಗಿದೆ’ ಎನ್ನುತ್ತಾರೆ ರಚಿತಾ. 

Advertisement

Udayavani is now on Telegram. Click here to join our channel and stay updated with the latest news.

Next