Advertisement
ಪಾಕಿಸ್ಥಾನದ ಪ್ರಧಾನಿ ನವಾಜ್ ಷರೀಫ್ ಅವರನ್ನು ಅನರ್ಹಗೊಳಿಸುವ ದಿಟ್ಟ ಕ್ರಮವನ್ನು ತೆಗೆದುಕೊಂಡಿರುವ ಅಲ್ಲಿನ ಸುಪ್ರೀಂಕೋರ್ಟ್, ಈ ಮೂಲಕ ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯಕ್ಕಿಂತ ಎಷ್ಟೋ ಹೆಜ್ಜೆ ಮುಂದಿಟ್ಟಂತಾಗಿದೆ.
ಶಾಂತಚಿತ್ತರಾಗಿ ಈ ಸನ್ನಿವೇಶವನ್ನು ಎದುರಿಸಿದ್ದಾರೆ. ಅವರು ತಮ್ಮ ಹಿಂದಿನವರು ಮಾಡಿದಂತೆ ಸೇನೆ ತರಿಸಿಕೊಂಡು, ಮಾರ್ಷಲ್ ಲಾ ಹೇರಿ ನ್ಯಾಯಾಧೀಶರುಗಳನ್ನು ವಜಾಗೊಳಿಸಲು ಮುಂದಾಗಿಲ್ಲ.
Related Articles
ಚುನಾವಣಾ ಸಂಬಂಧದ ಪ್ರಕರಣವೊಂದರಲ್ಲಿ ಇಂದಿರಾಗಾಂಧಿಯವರ ವಿರುದ್ಧ ಸರ್ವೋಚ್ಚ ನ್ಯಾಯಾಲಯ ಆದೇಶ ಹೊರಡಿಸಿದ ಸಂದರ್ಭದಲ್ಲಿ ಅವರ ಪ್ರತಿಕ್ರಿಯೆ ಹೇಗಿತ್ತು? ಆಕೆ ಹಿಂದೆ ಮುಂದೆ ನೋಡದೆ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದರು. 1975ರ ಜೂನ್ 24ರಂದು ರಜಾ ಕಾಲದ ನ್ಯಾಯಮೂರ್ತಿ, ವಿ.ಆರ್. ಕೃಷ್ಣ ಅಯ್ನಾರ್ ಅವರು ಅಲಹಾಬಾದ್ ಹೈಕೋರ್ಟಿನ ಆ ದೇಶಕ್ಕೆ ತಡೆಯಾಜ್ಞೆ ನೀಡಿ ಆಕೆ ಪ್ರಧಾನಿಯಾಗಿ ಮುಂದುವರಿಯಲು ಅವಕಾಶ ಮಾಡಿಕೊಟ್ಟರು. ಆದರೆ ಆಕೆ ಸಂಸದೀಯ ಕಲಾಪಗಳಲ್ಲಿ ಪಾಲ್ಗೊಳ್ಳುವಂತಿಲ್ಲ ಎಂಬ ಶರತ್ತನ್ನೂ ಹಾಕಿದರು. ಇದಾದ ಮರುದಿನವೇ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದರು. ನ್ಯಾ| ಕೃಷ್ಣ ಅಯ್ಯರ್ ನಮ್ಮ ದೇಶದ ಅತ್ಯಂತ ಗೌರವಾರ್ಹ ನ್ಯಾಯಾಧೀಶರೆಂಬ ಹೆಸರನ್ನು ಉಳಿಸಿಕೊಂಡಿದ್ದಾರೆ. ಆದರೆ ಅವರು ಅಂದು ಮಾಡಿದ ಕೆಲಸವನ್ನು ಟೀಕಿಸದಿರಲು ಸಾಧ್ಯವಿಲ್ಲ! ವಿ.ಆರ್. ಕೃಷ್ಣ ಅಯ್ಯರ್ ಅವರನ್ನು ಟೀಕಿಸುವುದೆಂದರೆ ಅದು ದೈವನಿಂದನೆಗೆ ಸಮಾನ ಎಂಬುದನ್ನು ನಾನು ಬಲ್ಲೆ. ತುರ್ತು ಪರಿಸ್ಥಿತಿ ಜಾರಿಗೊಳಿಸಿದ ಬಳಿಕ ಇಂದಿರಾ ಗಾಂಧಿ ಅಲ್ಲಿಗೇ ನಿಲ್ಲಿಸಲಿಲ್ಲ. 2 ತಿಂಗಳ ಬಳಿಕ, ಅಕ್ಷರಶಃ ಬಂದೀಖಾನೆಯಾಗಿದ್ದ ಸಂಸತ್ತಿನಲ್ಲಿ ಆಕೆ 39ನೆಯ ಸಂವಿಧಾನ ತಿದ್ದುಪಡಿ ಮಸೂದೆಗೆ
ಅಂಗೀಕಾರ ದೊರಕಿಸಿಕೊಂಡರು. ಈ ತಿದ್ದುಪಡಿಯ ಉದ್ದೇಶ, ರಾಷ್ಟ್ರಪತಿಗಳ, ಉಪರಾಷ್ಟ್ರಪತಿಗಳ, ಪ್ರಧಾನಮಂತ್ರಿಯ, ಲೋಕಸಭೆಯ ಸ್ಪೀಕರ್‌ಗಳ ಚುನಾವಣೆಯಲ್ಲಿ ನಡೆಯುವ ಆಯ್ಕೆ ಯನ್ನು ಪ್ರಶ್ನಿಸಿ ಸಲ್ಲಿಸಲಾಗುವ ದೂರುಗಳನ್ನು ನ್ಯಾಯಾಲಯಗಳು ವಿಚಾರಣೆಗೆ ಸ್ವೀಕರಿಸದಂತೆ ನಿಷೇಧ ಹೇರುವುದಾಗಿತ್ತು.
Advertisement
ಪಾಕಿಸ್ಥಾನದಲ್ಲಿನ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು, ಅದರಲ್ಲೂ ಮುಖ್ಯವಾಗಿ ಅಲ್ಲಿನ ನ್ಯಾಯಾಂಗವನ್ನು ತುಚ್ಛಿàಕಾರದ ಭಾವನೆಯಿಂದ ನೋಡುವ ಪ್ರವೃತ್ತಿ ನಮ್ಮ ದೇಶದಲ್ಲಿದೆ. ಈಗ ಕೂಡ ಕೆಳಧ್ವನಿಯ ಮಾತೊಂದು ಕೇಳಿಬಂದಿದೆ. ಪಾಕ್ ಸುಪ್ರೀಂಕೋರ್ಟು ನವಾಜ್ ಷರೀಫ್ ಅವರನ್ನು ಅನರ್ಹಗೊಳಿಸಿರುವುದು ಅಲ್ಲಿನ ಸೇನೆಯ ಇಷಾರೆಯ ಮೇರೆಗೆ ಎಂಬ ಮಾತು! ಹಾಗೆ ನೋಡಿದರೆ, ಪಾಕಿಸ್ಥಾನದ ನ್ಯಾಯಾಂಗ ವ್ಯವಸ್ಥೆ ಕುರಿತಂತೆ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್‌ನಂಥ ಸಂಘಟನೆಗಳು ನೀಡಿರುವ ಹೇಳಿಕೆಗೆ ನಾವು ಹೆಚ್ಚು ಮಹತ್ವ ನೀಡಬೇಕಾಗಿಲ್ಲ. 2011ರಲ್ಲಿ ನೀಡಿದ್ದ ವರದಿಯೊಂದರಲ್ಲಿ ಈ ಸಂಘಟನೆ ಪಾಕಿಸ್ಥಾನದಲ್ಲಿನ ಪೊಲೀಸ್ ಹಾಗೂ ನ್ಯಾಯಾಂಗ ವ್ಯವಸ್ಥೆಗಳು “ಅತ್ಯಂತ ಭ್ರಷ್ಟ’ವಾಗಿವೆ ಎಂದಿತ್ತು. ಕುತೂಹಲಕಾರಿ ಅಂಶವೆಂದರೆ ಈ ವರದಿಯಲ್ಲಿ ಅಲ್ಲಿನ ಮಿಲಿಟರಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಭ್ರಷ್ಟಾಚಾರ ತೀರಾ ಕನಿಷ್ಠ ಮಟ್ಟದಲ್ಲಿದೆ ಎಂದು ಹೇಳಲಾಗಿತ್ತು. ಟ್ರಾನ್‌ಪರೆನ್ಸಿ ಇಂಟರ್‌ನ್ಯಾಶನಲ್ ಹಾಗೂ ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್‌ನಂಥ ಸಂಘಟನೆಗಳು ನಮ್ಮದೇ ಸಂಸ್ಥೆಗಳನ್ನು, ವಿಶೇಷವಾಗಿ ನ್ಯಾಯಾಂಗ ವ್ಯವಸ್ಥೆಯನ್ನು ತೀರಾ ಕೀಳುಗಳೆಯುವ ರೀತಿಯಲ್ಲಿ ವರದಿ ಮಾಡುತ್ತಿವೆ. ಅವು ಅಮೆರಿಕದಂಥ ರಾಷ್ಟ್ರಗಳಲ್ಲಿನ, ಅದರಲ್ಲೂ ಅಲ್ಲಿನ ಸರ್ವೋಚ್ಚ ನ್ಯಾಯಾಲಯಗಳಲ್ಲಿರುವ ಪಕ್ಷಪಾತ ಪೀಡಿತ, ಜನಾಂಗೀಯ ತಾರತಮ್ಯ ಮನೋಭಾವದ ನ್ಯಾಯಾಧೀಶರ ಬಗ್ಗೆ “ಚಕಾರ’ ಎತ್ತುವುದಿಲ್ಲ. ಷರೀಫ್ರನ್ನು ಅನರ್ಹಗೊಳಿಸಿರುವ ಪಾಕಿಸ್ಥಾನ ಸುಪ್ರೀಂಕೋರ್ಟಿನ ಕೆಳಸ್ತರದ ನ್ಯಾಯಾಧೀಶರ ಕಾರ್ಯನಿರ್ವಹಣೆಯನ್ನು ನಾವು ಗುರುತಿಸಲೇಬೇಕಾಗುತ್ತದೆ. ಕುತೂಹಲಕಾರಿ ಸಂಗತಿಯೆಂದರೆ ಪಾಕಿಸ್ಥಾನದ ಮುಖ್ಯ ನ್ಯಾಯಮೂರ್ತಿ ಮಿಯಾ ಸಕೀಬ್ ನಿಸಾರ್ ಅವರು ಮೇಲೆ ಹೇಳಿದ ನ್ಯಾಯಾಧೀಶರನ್ನೊಳಗೊಂಡ ಪೀಠದ ನೇತೃತ್ವ ವಹಿಸಿರಲಿಲ್ಲ.
ಪಾಕ್ ನ್ಯಾಯಾಧೀಶರುಗಳ ಧೈರ್ಯದ ನಡೆಗಳು2012ರಲ್ಲಿ ಅಲ್ಲಿನ ಸುಪ್ರೀಂಕೋರ್ಟಿನ ಸ್ವಾಯತ್ತೆಯ ತೀವ್ರ ಪ್ರತಿಪಾದಕರಾಗಿದ್ದ ಮುಖ್ಯ ನ್ಯಾಯಮೂರ್ತಿ ಇಫ್ತಿಖಾರ್ ಮೊಹಮ್ಮದ್ ಚೌಧುರಿ ಅವರು ನ್ಯಾಯಾಲಯ ನಿಂದನೆಯ ಪ್ರಕರಣವೊಂದರಲ್ಲಿ ಆಗಿನ ಪ್ರಧಾನಿ ಯೂಸುಫ್ ರಜಾ ಗಿಲಾನಿಯವರನ್ನು ಅನರ್ಹಗೊಳಿಸಿದ್ದರು. ಚರಿತ್ರೆಯ ಪುಟಗಳನ್ನು ಇನ್ನಷ್ಟು ಹಿಂದಕ್ಕೆ ತಿರುಗಿಸಿ ನೋಡಿದರೆ ಅಲ್ಲಿನ ಇನ್ನೋರ್ವ ಧೀರ, ದಿಟ್ಟ ಸರ್ವೋನ್ನತ ನ್ಯಾಯಾಧೀಶ ಹಮ್‌ದೂರು ರಹಮಾನ್ ಅವರು (1968ರಲ್ಲಿ) ಜನರಲ್ ಯಾಹ್ಯಾಖಾನರಿಂದ ಹೇರಲ್ಪಟ್ಟಿದ್ದ ಮಾರ್ಷಲ್ ಕಾಯ್ದೆಯನ್ನು ಅಸಿಂಧುವೆಂದು ಘೋಷಿಸಿ, ಅವರನ್ನು ಅಧಿಕಾರದ ಅತಿಕ್ರಮಿಯೆಂದು ಘೋಷಿಸುವ ಎದೆಗಾರಿಕೆಯನ್ನು ಪ್ರದರ್ಶಿಸಿದ್ದರು. ಹಮ್‌ದೂರ್ ರಹಮಾನ್ ಮೂಲತಃ ಓರ್ವ ಬಂಗಾಲಿ; ಪಾಕಿಸ್ಥಾನಕ್ಕೆ ಸ್ಥಳಾಂತರಗೊಳ್ಳುವ ಮುನ್ನ ಕಲ್ಕತ್ತ ಹೈಕೋರ್ಟಿನಲ್ಲಿ ವಕೀಲಿಕೆ ನಡೆಸುತ್ತಿದ್ದವರು. ಈ ಕ್ರಮಕ್ಕೆ ವ್ಯತಿರಿಕ್ತವಾಗಿ, ಹಿಂದೆ ಮದ್ರಾಸ್ ಹೈಕೋರ್ಟಿನ ನ್ಯಾಯಾಧೀಶರಾಗಿದ್ದು, ಮುಂದೆ ಕೇವಲ ಒಂಬತ್ತು ದಿನಗಳವರೆಗೆ ಪಾಕಿಸ್ಥಾನದ ಶ್ರೇಷ್ಠ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ ಮುಹಮ್ಮದ್ ಶಹಾಬುದ್ದೀನ್ ಅವರು (1960ರ ಮೇಯಲ್ಲಿ) ಇಸ್ಕಂದರ್ ಮಿರ್ಜಾ ಅವರು ದೇಶದ ಮೇಲೆ ಹೇರಿದ್ದ ಮಾರ್ಷಲ್ ಕಾಯ್ದೆಯನ್ನು ಎತ್ತಿ ಹಿಡಿದು ಆದೇಶ ಹೊರಡಿಸಿದ್ದರು. ಪಾಕಿಸ್ಥಾನದಲ್ಲಿನ ಪ್ರಜಾಸತ್ತಾತ್ಮಕ ವ್ಯವಸ್ಥೆ, ವಿಶೇಷವಾಗಿ ಅಲ್ಲಿನ ನ್ಯಾಯಾಂಗ ವ್ಯವಸ್ಥೆ, ಅಲ್ಲಿನ ಮಿಲಿಟರಿ ಮುಖ್ಯಸ್ಥರ ಒಲವು ನಿಲುವುಗಳಿಗೆ ಬಲಿಯಾಗಿರುವುದನ್ನು ಅಗತ್ಯವಾಗಿ ಗಮನಿಸಬೇಕು. ಈ ಮಿಲಿಟರಿ ಸರ್ವಾಧಿಕಾರಿಗಳು ಏನಿಲ್ಲೆಂದರೂ ಮೂರು ಬಾರಿಯಾದರೂ ರಾಷ್ಟ್ರದ ಮೇಲೆ ಮಾರ್ಷಲ್ ಲಾ ಹೇರಿದ್ದಾರೆ. ತಾತ್ಕಾಲಿಕ ಸಾಂವಿಧಾನಿಕ ಆದೇಶಗಳ ಮೂಲಕ, ಕಾನೂನು ಚೌಕಟ್ಟಿಗೆ ಸಂಬಂಧಿಸಿದ ಆದೇಶಗಳ ಮೂಲಕ ಪಾಕಿಸ್ಥಾನಿ ಸಂವಿಧಾನಕ್ಕೆ ತಿದ್ದುಪಡಿ ತಂದಿದ್ದಾರೆ. ಇವರಲ್ಲಿ ಈಗ ಗಡಿಪಾರಾಗಿ ದುಬೈಯಲ್ಲಿ ನೆಲೆಸಿರುವ, ಅಲ್ಲಿಂದಲೇ ನಮ್ಮ ಇಂಗ್ಲಿಷ್ ಟಿವಿ ಚಾನೆಲ್‌ಗಳಿಗೆ ಸಂದರ್ಶನ ನೀಡುತ್ತಿರುವ ಜ| ಪರ್ವೇಜ್ ಮುಶರ್ರಫ್ ಅವರು ಅತ್ಯಂತ ಘೋರ ಅಪರಾಧಿ. ಈ ಮನುಷ್ಯ ಇಫ್ತಿಖಾರ್ ಚೌಧುರಿಯವರನ್ನು ಬಂಧಿಸಿದ್ದು; ಇತರ ನ್ಯಾಯಾಧೀಶರಿಂದ ಬಲವಂತವಾಗಿ ರಾಜೀನಾಮೆ ಕೊಡಿಸಿದ್ದು ಅಷ್ಟೇನೂ ಹಳೆಯ ಕತೆಯೇನಲ್ಲ. ಮುಶರ್ರಫ್ ಅವರು ಹೊಸದಾಗಿ ಒಕ್ಕಣೆ ಹೆಣೆದು ರೂಪಿಸಿಕೊಟ್ಟ ಪ್ರಮಾಣ ವಚನವನ್ನು ಸ್ವೀಕರಿಸಲು ಒಲ್ಲದವರನ್ನು 2000ದಲ್ಲಿ ಪದಚ್ಯುತಿಗೊಳಿಸಲಾಯಿತು. ಮುಂದಿನ ವರ್ಷಗಳಲ್ಲಿ ನ್ಯಾ| ಚೌಧುರಿಯವರ ನೇತೃತ್ವದಲ್ಲಿ ನಡೆದ ಎರಡು ವರ್ಷಗಳ ಅವಧಿಯ “ಲಾಯರ್‌ಗಳ ಆಂದೋಲನ’ದ ಫಲವಾಗಿ 2009ರಲ್ಲಿ ಪಾಕಿಸ್ಥಾನದಲ್ಲಿ ನ್ಯಾಯಾಂಗ ಮತ್ತೆ ನೆಲೆಯೂರುವಂತಾಯಿತು. ನ್ಯಾಯಾಂಗ ವ್ಯವಸ್ಥೆಯ ಇಂಥ ಆಂದೋಲನದ ಫಲವಾಗಿಯೇ ಇಂದು ಪ್ರಧಾನಿಯೊಬ್ಬರ ಪದಚ್ಯುತಿಗೆ ಕಾನೂನುಬದ್ಧ ಮಾರ್ಗವೊಂದು ತೆರೆದುಕೊಳ್ಳುವಂತಾಯಿತು. ಹಮ್‌ದೂರ್ ರಹಮಾನ್ ಅವರಂತೆಯೇ ಪಾಕಿಸ್ಥಾನದಲ್ಲಿ ಒಳ್ಳೆಯ ಹೆಸರು ಮಾಡಿರುವ ನ್ಯಾಯಾಧೀಶರುಗಳೆಂದರೆ – 1960ರಿಂದ 68ರ ವರೆಗೆ ಶ್ರೇಷ್ಠ ನ್ಯಾಯಮೂರ್ತಿಯಾಗಿದ್ದ ಆಲಿವನ್ ರಾಬರ್ಟ್ ಕರ್ನೇಲಿಯಸ್ (ಇವರು ಭಾರತದಲ್ಲಿ – ಆಗ್ರಾ ಮೂಲದ ಐಸಿಎಸ್ ಜಡ್ಜ್ ಆಗಿ ಕೆಲಸ ಮಾಡಿದ್ದ ಆಂಗ್ಲೋ ಇಂಡಿಯನ್), ಮಾನವ ಹಕ್ಕುಗಳ ಪ್ರತಿಪಾದಕರಾಗಿದ್ದ ನ್ಯಾ| ದೋರಬ್ ಪಟೇಲ್, ಪಾಕ್ ಸುಪ್ರೀಂಕೋರ್ಟ್‌ನಲ್ಲಿ ಕಾರ್ಯನಿರ್ವಹಿಸಿದ ಏಕೈಕ ಹಿಂದೂ ನ್ಯಾಯಾಧೀಶರೆನ್ನಬಹುದಾದ ರಾಣಾ ಭಗವಾನ್‌ದಾಸ್ (ಹಂಗಾಮಿ ಮುಖ್ಯ ನ್ಯಾಯಮೂರ್ತಿಯೂ ಆಗಿದ್ದರು) ಹಾಗೂ ಇಫ್ತಿಖಾರ್ ಚೌಧುರಿ. ಇವರಲ್ಲಿ ಕರ್ನೇಲಿಯಸ್ ಹಾಗೂ ದೋರಬ್ ಪಟೇಲ್ ಮುಸ್ಲಿಯೇತರರ ಹಕ್ಕುಗಳ ಪ್ರತಿಪಾದಕರೂ ಆಗಿದ್ದರು. ಪಾಕಿಸ್ಥಾನದಲ್ಲಿ ನಾಗರಿಕರನ್ನೂ ರಹಸ್ಯ ವಿಚಾರಣೆಗೆ ಗುರಿಪಡಿಸುವ ಸ್ವಾತಂತ್ರ್ಯವುಳ್ಳ ಮಿಲಿಟರಿ ನ್ಯಾಯಾಲಯಗಳಿವೆಯೆನ್ನುವುದು ಅಲ್ಲಿನ ನ್ಯಾಯಾಂಗೀಯ ವ್ಯವಸ್ಥೆಯ ಮೇಲಿನ ಕಪ್ಪು ಚುಕ್ಕೆಯೆಂದೇ ಹೇಳಬೇಕು. ನಮ್ಮ ಕುಲಭೂಷಣ್ ಯಾದವ್ ಅವರಿಗೆ ಮರಣದಂಡನೆಯ ಆದೇಶ ಹೊರಡಿಸಿರುವುದು ಇಂಥದೇ ನ್ಯಾಯಾಲಯ. ಅರಕೆರೆ ಜಯರಾಮ್