ಯಕ್ಷಗಾನದ ದಂತಕಥೆಗಳೆನಿಸಿದ ಅಳಿಕೆ, ಬೋಳಾರ ಮತ್ತು ಶೇಣಿಯವರು ಜನಿಸಿ ವರ್ಷ ನೂರಾಯಿತು. ಆದರೆ ಶತಮಾನೋತ್ಸವದ ಆಸುಪಾಸಿನಲ್ಲಿರುವ ಸಂದರ್ಭ; ಹೇಳಿಕೊಳ್ಳುವಂತಹ ಕಾರ್ಯ ಕಲಾಪಗಳೇನೂ ನಡೆದ ಹಾಗಿಲ್ಲ. ಎ. ಸಿ. ಭಂಡಾರಿ ಅವರ ನೇತೃತ್ವದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಈ ಮೂವರು ಕಲಾವಿದರ ಶತಮಾನದ ನೆನಪುಗಳಿಗಾಗಿ ಕಾರ್ಯಕ್ರಮ ರೂಪಿಸುವ ಬಗ್ಗೆ ಚಿಂತನೆ ನಡೆಸಿದೆ. ಇತ್ತೀಚೆಗೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯು ಹಾರಾಡಿ ರಾಮ ಗಾಣಿಗ ಮತ್ತು ಅಳಿಕೆ ರಾಮಯ್ಯ ರೈಯವರ ಶತಕದ ಸ್ಮತಿಯೊಂದಿಗೆ ಕಿರು ಹೊತ್ತಗೆಗಳೆರಡನ್ನು ಹೊರತಂದಿರುವುದು ಗಮನಾರ್ಹ.
ಸಾಧನಶೀಲ ಕಲಾವಿದರು ಗತಿಸಿದ ಬಳಿಕ ಅವರನ್ನು ಸ್ಮರಿಸುವ ಕಾರ್ಯಕ್ರಮಗಳು ನಡೆಯಬೇಕೆಂಬುದು ಸಹಜವೇ. ಆದರೆ ಎಲ್ಲ ಕಲಾವಿದ ರಿಗೂ ಆ ಭಾಗ್ಯವಿಲ್ಲ. ಸಾರ್ವಜನಿಕವಾಗಿ ಅಲ್ಲದಿದ್ದರೂ ಕನಿಷ್ಠ ಕುಟುಂಬಿಕ ರಾದರೂ ಆಗಿ ಹೋದ ಹಿರಿಯ ಸಾಧಕರ ಹೆಸರಿನಲ್ಲಿ ಗಮನಾರ್ಹ ಕಾರ್ಯವನ್ನೇನಾದರೂ ಕೈಗೆತ್ತಿಕೊಂಡರೆ ಅದು ಶ್ಲಾಘÂವೆನಿಸುತ್ತದೆ. ಈ ನಿಟ್ಟಿನಲ್ಲಿ ಅಳಿಕೆ ಮತ್ತು ಬೋಳಾರರ ನೆನಪಿನಲ್ಲಿ ಪ್ರತಿ ವರ್ಷ ನಡೆಯುತ್ತಿರುವ ಸಹಾಯ ನಿಧಿ ವಿತರಣೆ ಮತ್ತು ಪ್ರಶಸ್ತಿ ಪ್ರದಾನ ಉಲ್ಲೇಖನೀಯ.
ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ಮೂಲಕ ಅವರ ಮಕ್ಕಳು ಕೊಡ ಮಾಡುವ “ಅಳಿಕೆ ಸಹಾಯನಿಧಿ’ಯನ್ನು ಈ ಬಾರಿ ಹಿರಿಯ ಕಲಾವಿದರಾದ ಕೆ. ಎಚ್. ದಾಸಪ್ಪ ರೈ ಮತ್ತು ಬಾಯಾರು ಆನಂದ ಪುರುಷರಿಗೆ ಗೃಹಸಮ್ಮಾನ ದೊಂದಿಗೆ ನೀಡಲಾಗಿದೆ. ಅದರಂತೆ ಬೋಳಾರ ನಾರಾಯಣ ಶೆಟ್ಟಿ ಪ್ರತಿಷ್ಠಾನದ ವತಿಯಿಂದ ಬೋಳಾರ ಕರುಣಾಕರ ಶೆಟ್ಟಿ ಅವರ ನೇತೃತ್ವದಲ್ಲಿ ನೀಡಲಾಗುತ್ತಿರುವ “ಬೋಳಾರ ಪ್ರಶಸ್ತಿ’ಗೆ ಈ ಬಾರಿ ಬೋಳಾರರ ಒಡನಾಡಿ ಕಲಾವಿದ, ಅರುವ ಕೊರಗಪ್ಪ ಶೆಟ್ಟಿ ಆಯ್ಕೆಯಾಗಿದ್ದಾರೆ.
ಅರುವ ಕೊರಗಪ್ಪ ಶೆಟ್ಟಿಯವರು ಬೋಳಾರದವರೊಂದಿಗೆ ಸಹಕಲಾವಿದನಾಗಿ ತಿರುಗಾಟ ಮಾಡಿದ ದೀರ್ಘ ಅನುಭವ ಹೊಂದಿರು ವವರು. ಡಿಸೆಂಬರ್ 3, 2017ರಂದು ಒಡಿಯೂರು ಶ್ರೀ ಗುರುದೇವ ಸಂಸ್ಥಾನದಲ್ಲಿ ಬೋಳಾರ ನಾರಾಯಣ ಶೆಟ್ಟರ ಸಂಸ್ಮರಣಾ ಸಮಾರಂಭದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡು ವರು. ಶ್ರೀ ಹನುಮಗಿರಿ ಮೇಳದವರಿಂದ ಯಕ್ಷಗಾನ ಬಯಲಾಟವೂ ಏರ್ಪಾಡಾಗಿದೆ.
ಭಾಸ್ಕರ ರೈ ಕುಕ್ಕುವಳ್ಳಿ