Advertisement

Bolar: ಬೋಳಾರ ಸರಕಾರಿ ಶಾಲೆ ಕೈತೋಟದಲ್ಲಿ 8 ಕೆಜಿ ಭತ್ತದ ಬೆಳೆ!

02:45 PM Dec 11, 2024 | Team Udayavani |

ಬೋಳಾರು: ಮೂರು ತಿಂಗಳ ಹಿಂದೆ ಗದ್ದೆ ಉಳುಮೆ ಮಾಡಿ ನೇಜಿ ನೆಟ್ಟು ಸಂಭ್ರಮಿಸಿದ್ದ ಮಂಗಳೂರಿನ ಬೋಳಾರ ಸರಕಾರಿ ಶಾಲೆಯ ವಿದ್ಯಾರ್ಥಿಗಳು ಸಾಂಪ್ರದಾಯಿಕವಾಗಿಯೇ ಕಟಾವು ನಡೆಸಿ ಉತ್ಸಾಹದಿಂದ ಭತ್ತವನ್ನು ಬೇರ್ಪಡಿ ಸುವ ಕಾರ್ಯ ನಡೆಸಿದರು. 11 ಮಂದಿ ವಿದ್ಯಾರ್ಥಿಗಳು ಹಾಗೂ ನಾಲ್ಕು ಮಂದಿ ಶಿಕ್ಷಕರು ಬೇಸಾ ಯದ ಹೊಸ ಅನುಭವ ಪಡೆದರು. ಪಠ್ಯಕಷ್ಟೇ ಸೀಮಿತವಾಗುತ್ತಿರುವ ಕಾಲದಲ್ಲಿ ಬೋಳಾರ ಸರಕಾರಿ ಶಾಲೆಯ ಸಹ ಶಿಕ್ಷಕಿ ಸುಜಾತಾ ಅವರ ಯೋಚನೆ ವಿದ್ಯಾರ್ಥಿಗಳಿಗೆ ಹೊಸ ಅನುಭವ ನೀಡಿದೆ.

Advertisement

ಬೆಳಗ್ಗೆ ಕಟಾವು ನಡೆಸಿ ಬಳಿಕ ಸಂಜೆಯ ವರೆಗೆ ಪೈರು ಒಣಗಲು ಬಿಟ್ಟು ಸಂಜೆ ಸುಮಾರು ಮೂರು ಗಂಟೆಯ ಬಳಿಕ ಪೈರನ್ನು ಸೂಡಿಗಳಲಾಗಿಸಿ ಭತ್ತವನ್ನು ಬೇರ್ಪಡಿಸುವ ಕಾರ್ಯ ನಡೆಸಿದ್ದಾರೆ. ಶಾಲೆಯ ಬಹುತೇಕ ಎಲ್ಲ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿ ರೈತರ ಕಾಯಕದ ಅನುಭವ ಪಡೆದರು.

ಭತ್ತ ಕಟಾವು ಮಾಡುವ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣ ಅಧಿಕಾರಿ ಎಚ್‌.ಆರ್‌. ಈಶ್ವರ್‌, ಕ್ಷೇತ್ರ ಸಮನ್ವಯಾಧಿಕಾರಿ ಸುಷ್ಮಾ ಅವರು ಉಪಸ್ಥಿತರಿದ್ದು ಮಕ್ಕಳಿಗೆ ಅಭಿನಂದಿಸಿದ್ದಾರೆ. ವಿದ್ಯಾರ್ಥಿಗಳ ಬೇಸಾದ ಆಸಕ್ತಿ ಕಂಡು ಊರಿನ ಜನರೂ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಅಕ್ಕಿ ಎಲ್ಲಿಂದ ಸಿಗುತ್ತದೆ ಎನ್ನುವ ಅರಿವೇ ವಿದ್ಯಾರ್ಥಿಗಳಿಗೆ ಇಲ್ಲದ ಕಾಲಘಟ್ಟದಲ್ಲಿ ಮಂಗಳೂರಿನ ಬೋಳಾರ ಸರಕಾರಿ ಶಾಲೆಯ ಸಹ ಶಿಕ್ಷಕಿ ಸುಜಾತ ಅವರು ತಮ್ಮ ವಿದ್ಯಾರ್ಥಿಗಳಿಗೆ ಬೇಸಾಯದ ಪ್ರಾಯೋಗಿಕ ಅನುಭವ ನೀಡಿರುವುದು ಪ್ರಶಂಸೆಗೆ ಕಾರಣವಾಗಿದೆ.

ಭತ್ತ ಅಕ್ಕಿ ಮಾಡಿ ವಿದ್ಯಾರ್ಥಿಗಳಿಗೆ ವಿತರಣೆ
ಶಾಲೆಯ 20×20 ಜಾಗದಲ್ಲಿ ಬೇಸಾಯ ಮಾಡಿ ಸುಮಾರು 8 ಕೆ.ಜಿ. ಭತ್ತ ಪಡೆಯಲಾಗಿದೆ. ಶಿಕ್ಷಕಿ ಸುಜಾತಾ ಅವರು ಕೂಡ ಕೃಷಿ ಕುಟುಂಬದವರಾದ ಕಾರಣ ಬೇಸಾಯದ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಿಗೆ ನೀಡಲು ಸಹಕಾರಿಯಾಗಿದೆ. ಇದೀಗ ಕೊಯ್ಲು ಮುಗಿದಿದ್ದು, ಬೆಳೆದ ಭತ್ತವನ್ನು ಅಕ್ಕಿ ಮಾಡಿ ವಿದ್ಯಾರ್ಥಿಗಳಿಗೆ ವಿತರಿಸಲು ನಿರ್ಧರಿಸಲಾಗಿದೆ. ಅಲ್ಪ ಪ್ರಮಾಣದಲ್ಲಿ ಶಿಕ್ಷಕಿ ತಮ್ಮ ಮನೆಯಿಂದಲೂ ಅಕ್ಕಿಯನ್ನು ತಂದು ವಿದ್ಯಾರ್ಥಿಗಳಿಗೆ ವಿತರಿಸಲು ನಿರ್ಧರಿಸಿದ್ದಾರೆ.

Advertisement

ಜೋಳ, ರಾಗಿ ಬೆಳೆಸುವ ಯೋಚನೆ
3 ತಿಂಗಳ ಹಿಂದೆ ನಾಟಿ ಮಾಡಲಾಗಿದ್ದು, ಕಟಾವು ಕಾರ್ಯ ಪೂರ್ಣಗೊಂಡಿದೆ. ವಿದ್ಯಾರ್ಥಿಗಳಿಗೆ ಪಠ್ಯೇತರ ವಿಷಯದ ಅರಿವು ಮೂಡಲು ಇದು ಸೂಕ್ತ ವೇದಿಕೆ. ಮುಖ್ಯ ಶಿಕ್ಷಕಿ ಮಾಲತಿ, ಇತರ ಶಿಕ್ಷಕರು, ಹೆತ್ತವರು, ಎಲ್ಲರು ಸಹಕಾರ ನೀಡಿದ್ದಾರೆ. ವಿದ್ಯಾರ್ಥಿಗಳ ಉತ್ಸಾಹವಂತೂ ಇಮ್ಮಡಿಯಾಗಿತ್ತು. ಮುಂದೆ ಜೋಳ, ರಾಗಿ, ಗೆಣಸು ಬೆಳೆಸುವ ಯೋಚನೆ ಇದೆ.
– ಸುಜಾತ, ಬೋಳಾರ ಶಾಲೆಯ ಸಹ ಶಿಕ್ಷಕಿ

ಅನುಭವಾತ್ಮಕ ಕಲಿಕೆ ನೀಡಿದ ಶಿಕ್ಷಿಕರಿಗೆ ವಂದನೆ
ರೈತರು ಹೇಗೆ ಭತ್ತ ಬೆಳೆಯುತ್ತಾರೆ ಎಂಬುದನ್ನು ನಮ್ಮ ಶಾಲೆಯ ಮೂಲಕ ಕಲಿತುಕೊಳ್ಳಲು ಸಾಧ್ಯವಾಗಿದೆ. ಎರಡು ವರ್ಷಗಳಿಂದ ಬೇಸಾಯದ ವಿವಿಧ ಹಂತಗಳನ್ನು ಕಲಿತುಕೊಂಡಿದ್ದೇವೆ. ಇಂತಹ ಅನುಭವಾತ್ಮಕ ಕಲಿಕೆ ನೀಡಿದ ಶಿಕ್ಷಿಕರಿಗೆ ವಂದನೆ.
– ಮುಕ್ತುಂ ಸಾಬ್‌ ವಿದ್ಯಾರ್ಥಿ

Advertisement

Udayavani is now on Telegram. Click here to join our channel and stay updated with the latest news.

Next