ರಾಮನಗರ: ನಗರಕ್ಕೆ ಹೊಂದಿಕೊಂಡಂತೆ ಇರುವ ಬೋಳಪ್ಪನಹಳ್ಳಿ ಕೆರೆ ನಿರ್ವಹಣೆ ಇಲ್ಲದೆ ಸೊರಗುತ್ತಿ ದ್ದು, ಅಕ್ರಮ ಒತ್ತುವರಿಯದ್ದೇ ದೊಡ್ಡ ಸಮಸ್ಯೆ ಯಾಗಿದೆ. ಕಟ್ಟಡ ತ್ಯಾಜ್ಯವನ್ನು ಇಲ್ಲಿ ಸುರಿಯುತ್ತಿರು ವುದು ಮತ್ತೂಂದು ಸಮಸ್ಯೆ. ಈ ಭಾಗದಲ್ಲಿರುವ ಇಟ್ಟಿಗೆ ಫ್ಯಾಕ್ಟರಿಗಳ ಕೆಲವು ಮಾಲಿಕರು ಕೆರೆಯ ಮಣ್ಣನ್ನು ಅಕ್ರಮವಾಗಿ ದೋಚುತ್ತಿದ್ದಾರೆ ಎಂಬುದು ನಾಗರಿಕರ ದೂರು. ಇಷ್ಟೇಲ್ಲಾ ಆದರೂ ಸಂಬಂಧಿಸಿದ ಅಧಿಕಾರಿಗಳು ಮತ್ತು ರಾಜಕಾರಣಿಗಳು ಕೆರೆ ರಕ್ಷಣೆಗೆ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ.
ತಾಲೂಕಿನಲ್ಲಿರುವ ಅತಿ ದೊಡ್ಡ ಕೆರೆಗಳ ಪೈಕಿ ಬೋಳಪ್ಪನ ಕೆರೆಯೂ ಒಂದು. ಈ ಕೆರೆಯಲ್ಲಿ ನೀರು ಶೇಖರಣೆಯಾದರೆ ಅಂತರ್ಜಲಕ್ಕೆ ಕೊರತೆ ಇರೋಲ್ಲ ಎಂಬುದು ನಾಗರಿಕರ ವಾದ. 28.93 ಎಂಸಿಎಫ್ಟಿ ನೀರು ಶೇಖರಣೆ ಈ ಕೆರೆಯ ಸಾಮರ್ಥ್ಯ. 2017, 2018ನೇ ಸಾಲಿನಲ್ಲಿ ಆಗಿದ್ದ ಮಳೆಯಿಂದಾಗಿ ಕೆರೆ ಬಹುತೇಕ ತುಂಬಿತ್ತು. ಆದರೆ ಈಗ ಕೆರೆಯ ಬಹುತೇಕ ನೀರು ಬತ್ತಿ ಹೋಗಿದೆ. ಕೆರೆಯ ಅಂಗಳದ ನಿರ್ವಹಣೆಗೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಮನಸ್ಸು ಮಾಡಿಲ್ಲ ಎಂಬುದಕ್ಕೆ ಕೆರೆಯ ಸಧ್ಯದ ಪರಿಸ್ಥಿತಿಯೇ ಕೈಗನ್ನಡಿಯಾಗಿದೆ.
ಅಣೆಕಟ್ಟು ಆಪೋಷನ, ಈ ಕೆರೆಯನ್ನಾದರೂ ಉಳಿಸಿ: ಬೋಳಪ್ಪನ ಹಳ್ಳಿ ಕೆರೆ ನಿರ್ವಹಣೆ ಇಲ್ಲದೆ, ಸಂಫೂರ್ಣ ಬತ್ತಿ ಹೋದರೆ, ಜಲಮೂಲವೊಂದರ ಅವಸಾನವಾ ಗುತ್ತದೆ. ಈಗಾಗಲೇ ನಗರ ವ್ಯಾಪ್ತಿಯ ಮಾಗಡಿ ರಸ್ತೆಯಲ್ಲಿ ‘ಅಣೆಕಟ್ಟು’ ಹೀಗೆ ಒಣಗಿ ಹೋಗಿದ್ದರಿಂದ, ಅಲ್ಲಿ ಮಹಿಳಾ ಕಾಲೇಜು ಕಟ್ಟಡವನ್ನು ನಿರ್ಮಿಸಲಾಗಿದೆ. ಬೋಳಪ್ಪನ ಕೆರೆಗೆ ಅಧಿಕಾರಿಗಳು ಇಂತಹದ್ದಕ್ಕೆ ಅವಕಾಶ ಮಾಡಿಕೊಡಬಾರದು ಎಂಬ ಕೂಗು ಕೇಳಿದೆ.
2006ರಲ್ಲಿ ಕೆರೆ ಅಭಿವೃದ್ಧಿಯಾಗಿತ್ತು: ಕೆರೆಯ ಅಚ್ಚುಕಟ್ಟು ಪ್ರದೇಶ 48.56 ಹೆಕ್ಟೇರ್ ಇದೆ. ಜಲಾವೃತ ಪ್ರದೇಶ 8.29 ಹೆಕ್ಟೇರ್ ಇದೆ. ಒಟ್ಟು ಜಲಾನಯನ ಪ್ರದೇಶ 1.9 ಚದರ ಕಿಮೀ. ಕೆರೆಯ ಏರಿ 450 ಮೀಟರ್ ಇದ್ದು, ಎತ್ತರ 8.5 ಮೀಟರ್‌ನಷ್ಟಿದೆ. 2006ನೇ ಸಾಲಿನಲ್ಲಿ ರಾಷ್ಟ್ರೀಯ ಯೋಜನೆಯಡಿ ವ್ಯವಸಾಯಕ್ಕೆ ನೇರವಾಗಿ ಸಂಬಂಧಿಸಿದ ಜಲ ಪಾತ್ರಗಳ ದುರಸ್ತಿ, ಜೀರ್ಣೋದ್ಧಾರ ಹಾಗೂ ಪುನರುಜ್ಜೀವನ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅರ್ಥಿಕ ನೆರವಿನಲ್ಲಿ ಹೂಳೆತ್ತಿರುವುದಾಗಿ, ಕೆರೆ ಏರಿ, ಕೋಡಿ ಹಾಗೂ ತೂಬು ದುರಸ್ತಿಗಾಗಿ 12.23ಲಕ್ಷ ರೂ ವೆಚ್ಚ ಮಾಡಿರುವುದಾಗಿ ಸಣ್ಣ ನೀರಾವರಿ ಇಲಾಖೆಯ ಮೂಲಗಳು ಮಾಹಿತಿ ಕೊಟ್ಟಿದೆ.
ಪ್ರವಾಸಿ ತಾಣವಾಗಿ ಅಭಿವೃದ್ಧಿಗೆ ಅವಕಾಶ: ನಗರಕ್ಕೆ ಹೊಂದಿಕೊಂಡಂತಿರುವ ಈ ಕೆರೆಯನ್ನು ಬೆಂಗಳೂರಿನ ಅಲಸೂರು ಕೆರೆಯಂತೆ ಅಭಿವೃದ್ಧಿ ಪಡಿಸಿದರೆ ಬಹುಶಃ ಕರೆಯ ನೀರು ಶೇಖರಣಾ ಸಾಮರ್ಥ್ಯವನ್ನು ಕಾಯ್ದು ಕೊಳ್ಳಬಹುದಾಗಿದೆ. ಪ್ರವಾಸಿ ತಾಣವನ್ನಾಗಿಯೂ ಅಭಿವೃದ್ಧಿಪಡಿಸಬಹುದು ಎಂಬುದು ನಾಗರೀಕರ ಸಲಹೆಯಾಗಿದೆ. ನಗರ ವ್ಯಾಪ್ತಿಯ ರಂಗರಾಯರದೊಡ್ಡಿ ಕೆರೆಯನ್ನು ರಾಮನಗರ ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಗೊಳಿಸಿತ್ತು. ಕೆರೆಯ ಏರಿಯ ಮೇಲೆ ವಾಕಿಂಗ್ ಪಾತ್ ನಿರ್ಮಿಸಿದೆ. ಗಿಡ, ಮರಗಳನ್ನು ಬೆಳೆಸಿದ್ದು ಇದೀಗ ಈ ಕೆರೆ ಸುಂದರ ತಾಣವಾಗಿ, ಜನಾಕರ್ಷಣೆಯ ಕೇಂದ್ರವಾಗಿದೆ. ಬೋಳಪ್ಪನ ಹಳ್ಳಿ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲೇ ಸುಂದರ ಉದ್ಯಾನವನ್ನು ಅಭಿವೃದ್ಧಿಪಡಿಸಬೇಕು. ಕೆರೆಯಲ್ಲಿ ಸದಾ ನೀರು ನಿಲ್ಲುವಂತೆ ಮಾಡಿ ಬೋಟಿಂಗ್ ವ್ಯವಸ್ಥೆಯನ್ನು ಮಾಡಬಹುದು ಎಂಬುದು ನಾಗರೀಕರ ಅಭಿಪ್ರಾಯ.
ನಿರಂತರ ಬರ ಪರಿಸ್ಥಿಯಿಂದ ತತ್ತರಿಸುವ ರಾಮನಗರ ತಾಲೂಕಿನಲ್ಲಿ ಕೆರೆಗಳ ನಿರ್ವಹಣೆ ಸಮರ್ಥವಾಗಿದ್ದರೆ ನೀರು ಶೇಖರಣೆಗೊಂಡು ಅಂತರ್ಜಲ ವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ. ಇಲ್ಲಿ ಚುನಾಯಿತ ಪ್ರತಿನಿಧಿಗಳಿಗಿಂತ ಅಧಿಕಾರಿಗಳ ಪಾತ್ರವೇ ಮುಖ್ಯ ಎಂಬುದು ನಾಗರಿಕರ ಅಭಿಪ್ರಾಯವಾಗಿದೆ.
● ಬಿ.ವಿ.ಸೂರ್ಯ ಪ್ರಕಾಶ್