Advertisement

ಬೋಳಂತೂರು ದರೋಡೆ ಪ್ರಕರಣದ ಸೂತ್ರಧಾರ ಕಾರು ಚಾಲಕ?

12:16 AM Jan 08, 2025 | Team Udayavani |

ವಿಟ್ಲ/ಬಂಟ್ವಾಳ: ಬೋಳಂತೂರು ಸಮೀಪದ ನಾರ್ಶದ ಉದ್ಯಮಿ ಸುಲೈಮಾನ್‌ ಹಾಜಿ ಮನೆಯಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳ ಸೋಗಿನಲ್ಲಿ ಹಣ ಲೂಟಿ ಮಾಡಿದ ಪ್ರಕರಣದ ಪ್ರಮುಖ ಸೂತ್ರಧಾರ ಕಾರಿನ ಚಾಲಕ ಎಂಬುದಾಗಿ ದೃಢಪಟ್ಟಿದೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಕೇಂದ್ರೀಕರಿಸಿದ್ದಾರೆ.

Advertisement

ತಮಿಳುನಾಡು ನೋಂದಣಿಯ ಕಾರಿನಲ್ಲಿ ಆರು ಮಂದಿ ಆಗಮಿಸಿ ತಾವು ಇ.ಡಿ. ಅಧಿಕಾರಿಗಳೆಂದು ಮನೆಗೆ ಪ್ರವೇಶಿಸಿ ಅಲ್ಲಿಂದ ಹಣ ಲೂಟಿಗೈದು ಪರಾರಿಯಾಗಿದ್ದರು. ವಿಶೇಷ ಎಂದರೆ ಅಲ್ಲಿಗೆ ಆಗಮಿಸಿದ್ದ ಆರು ಮಂದಿಯಲ್ಲಿ ಚಾಲಕನಿಗೆ ಮಾತ್ರ ಕನ್ನಡ ಬರುತ್ತಿತ್ತು. ಉಳಿದವರೆಲ್ಲರೂ ಇಂಗ್ಲಿಷ್‌ ಮತ್ತು ಬೇರೆ ಯಾವುದೋ ಭಾಷೆಯಲ್ಲಿ ಮಾತನಾಡುತ್ತಿದ್ದರು. ಅವರು ಮಾತು ಅರ್ಥವಾಗುತ್ತಿಲ್ಲ ಎಂದಾಗ ಚಾಲಕನೇ ಸುಲೈಮಾನ್‌ ಅವರಿಗೆ ನಿರ್ದೇಶನ ನೀಡುತ್ತಿದ್ದ.

ಮೊದಲಾಗಿ ಬೀಡಿ ಕಾರ್ಮಿಕರಿಗೆ ನೀಡಲು ಇರಿಸಿದ್ದ ಹಣವನ್ನು ತೋರಿಸಿದ್ದಾಗ ತಂಡದಲ್ಲಿದ್ದವ ಬೇರೆ ಹಣ ಇರುವ ಬಗ್ಗೆ ಕೇಳಿದ್ದ ಆಗ ಚಾಲಕನೇ ತನಗೆ ಬೇಕಾದ ಹಾಗೆ ಪ್ರಶ್ನೆಗಳನ್ನು ಕೇಳಿ ಹಣ ತೋರಿಸಲು ಹೇಳಿದ್ದ. ಮಾತ್ರವಲ್ಲದೆ ಆತನಿಗೆ ಸುಲೈಮಾನ್‌ ಅವರ ಎಲ್ಲ ವ್ಯವಹಾರಗಳ ಕುರಿತು ಸ್ಪಷ್ಟ ಮಾಹಿತಿ ಇರುವಂತೆ ಪ್ರಶ್ನೆಗಳನ್ನು ಕೇಳುತ್ತಿದ್ದ. ಆದುದರಿಂದ ಇಡೀ ದರೋಡೆಯ ಸಂಚನ್ನು ಈತನೇ ಹೆಣೆದಿರಬೇಕು. ಆತನಿಗೆ ಸ್ಥಳೀಯ ಪರಿಸರದ ಪೂರ್ಣ ಮಾಹಿತಿ ಮಾತ್ರವಲ್ಲದೆ ಸುಲೈಮಾನ್‌ ಅವರ ವ್ಯವಹಾರಗಳ ಬಗ್ಗೆಯೂ ಪೂರ್ತಿ ವಿಷಯ ಗೊತ್ತಿರಬೇಕು ಎಂಬ ಸಂಶಯ ಪೊಲೀಸರದ್ದಾಗಿದೆ. ಆದುದರಿಂದ ಈಗ ಮುಖ್ಯವಾಗಿ ಆತನ ಸೆರೆ ಹಿಡಿಯಲು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಬೇರೆ ರಾಜ್ಯದ ವ್ಯಕ್ತಿಗಳ ಬಳಕೆ
ಕಾರಿನ ಚಾಲಕರ ಜತೆ ಬಂದಿರುವ ಇತರ ವ್ಯಕ್ತಿಗಳು ದೃಢಕಾಯದವರಾಗಿದ್ದು, ಅವರಿಗೆ ಸ್ಥಳೀಯ ಭಾಷೆ ಬರುತ್ತಿರಲಿಲ್ಲ. ದಕ್ಷಿಣ ಭಾರತದ ಭಾಷೆಗಳಾದ ಮಲಯಾಳ, ತಮಿಳು ಕುರಿತು ಸುಲೈಮಾನ್‌ ಅವರಿಗೆ ಅಲ್ಪಸ್ವಲ್ಪ ತಿಳಿದಿದೆ. ಆದರೆ ಅದ್ಯಾವುದೇ ಭಾಷೆಯನ್ನು ಅವರು ಮಾತನಾಡಲಿಲ್ಲ ಎಂದು ಹೇಳುತ್ತಾರೆ. ಇದನ್ನೆಲ್ಲ ಗಮನಿಸಿದಾಗ ಚಾಲಕನೇ ಬೇರೆ ರಾಜ್ಯದವರನ್ನು ಈ ಕೃತ್ಯಕ್ಕೆ ಬಳಸಿರುವ ಶಂಕೆ ವ್ಯಕ್ತವಾಗಿದೆ. ಅವರೆಲ್ಲರೂ ದರೋಡೆ ನಡೆಸಿದ ಬಳಿಕ ಕರ್ನಾಟಕ ದಾಟಿ ಹೊರ ಹೋಗಿರುವ ಸಾಧ್ಯತೆ ಇರುವುದರಿಂದ ಪೊಲೀಸರು ಬೇರೆ ಬೇರೆ ರಾಜ್ಯಗಳಿಗೆ ತನಿಖೆಯನ್ನು ವಿಸ್ತರಿಸಿದ್ದಾರೆ.

ಕಟ್ಟಡ ಮಾರಾಟದ ಸುತ್ತ
ಸುಲೈಮಾನ್‌ ಅವರು ಬಿ.ಸಿ.ರೋಡ್‌ನ‌ಲ್ಲಿದ್ದ ತಮ್ಮ ಕಟ್ಟಡ ಮಾರಿದ್ದ ಹಣವನ್ನು ತಂದಿಟ್ಟಿದ್ದ ವಿಷಯ ಗೊತ್ತಿದ್ದವರೇ ಈ ಕೃತ್ಯ ನಡೆಸಿರುವ ಶಂಕೆ ಇದೆ. ದರೋಡೆಕೋರರು ನಿರ್ದಿಷ್ಟವಾಗಿ ಆ ಹಣ ಎಲ್ಲಿದೆ ಎಂದು ಕೇಳಿ ದೋಚಿರುವುದರಿಂದ ಮಾರಾಟಕ್ಕೆ ಸಂಬಂಧಿಸಿ ಯಾರಿಗೆಲ್ಲ ಮಾಹಿತಿ ಇತ್ತು ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಈ ಮಾಹಿತಿ ಕೂಡ ತಂಡದಲ್ಲಿದ್ದ ಚಾಲಕನಿಗೆ ಗೊತ್ತಿತ್ತು ಎಂಬ ಶಂಕೆ ಇದೆ. ದೂರಿನಲ್ಲಿ 30 ಲಕ್ಷ ರೂ. ಲೂಟಿ ಮಾಡಿದ್ದಾರೆ ಎಂದು ಹೇಳಲಾಗಿತ್ತಾದರೂ ಕಟ್ಟಡ ಮಾರಾಟದ ಭಾರೀ ಮೊತ್ತ ಅಲ್ಲಿತ್ತು ಎಂಬ ಮಾಹಿತಿಯೂ ಹರಿದಾಡುತ್ತಿದೆ.

Advertisement

ಕೇರಳ ನಂಟು?
ಈ ನಡುವೆ ಆರೋಪಿಗಳಲ್ಲಿ ಕೆಲವರು ಕೇರಳಕ್ಕೆ ತೆರಳಿರುವ ಸಂಶಯದಲ್ಲಿ ಪೊಲೀಸರು ತನಿಖೆ ಕೇಂದ್ರೀಕರಿಸಿದ್ದಾರೆ. ಆದರೆ ಪೊಲೀಸರಿಗೆ ಇದುವರೆಗೆ ಯಾವುದೇ ನಿರ್ದಿಷ್ಟ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮನೆ ಮಹಡಿಯಲ್ಲೇ
ಮೊಬೈಲ್‌ಗ‌ಳು ಪತ್ತೆ
ದರೋಡೆಕೋರರು ಇಡೀ ಮನೆಯನ್ನು ಜಾಲಾಡುವ ವೇಳೆ ಮನೆಯ ಮೂರನೇ ಮಹಡಿಯ ಮೇಲೆ ಕೂಡ ಹೋಗಿದ್ದು, ಅಲ್ಲಿಯೇ ಮೊಬೈಲ್‌ನಿಂದ ಸಿಮ್‌ ತೆಗೆದು ಬಿಸಾಡಿರುವುದು ಮಂಗಳವಾರ ಗೊತ್ತಾಗಿದೆ. ಮೊಬೈಲ್‌ನಿಂದ ಸಿಮ್‌ ತೆಗೆಯಲಾಗಿದ್ದು, ಅದನ್ನು ಹಾಳುಗೆಡವಿ ಅಲ್ಲಿಯೇ ಬಿಸಾಡಿದ್ದರು. ಮನೆ ಮಂದಿಯ ಐದೂ ಮೊಬೈಲ್‌ಗ‌ಳು ಒಂದೇ ಮಹಡಿಯಲ್ಲಿ ಪತ್ತೆಯಾಗಿದೆ. ಎಲ್ಲ ಮೊಬೈಲ್‌ಗ‌ಳ ಸಿಮ್‌ ತೆಗೆದು ಬಾಯಿಯಲ್ಲಿ ಕಚ್ಚಿ ಹಾಳು ಮಾಡಿದಂತೆ ಕಾಣಿಸುತ್ತಿದೆ. ಇದುವರೆಗೂ ಮೊಬೈಲ್‌ಗ‌ಳನ್ನು ದರೋಡೆಕೋರರೇ ಕೊಂಡೊಯ್ದಿದ್ದಾರೆ ಎಂದು ಭಾವಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next