ಬೆಳ್ಮಣ್: ಬೋಳ ಗ್ರಾಮ ಪಂಚಾಯತ್‌ನ ವ್ಯಾಪ್ತಿಯಮೃತ್ಯುಂಜಯ ರುದ್ರ ಸೋಮನಾಥೇಶ್ವರ ದೇಗುಲದ ಪಕ್ಕದ ಕಿರು ತೂಗುಸೇತುವೆಯ ಕಬ್ಬಿಣದ ರಾಡ್ ಶುಕ್ರವಾರ ಏಕಾಏಕಿಯಾಗಿ ಮುರಿದು ಬಿದ್ದು ಆತಂಕ ಸೃಷ್ಟಿಸಿದ ಹಿನ್ನೆಲೆಯಲ್ಲಿ ಶನಿವಾರ ಸ್ಥಳಕ್ಕೆ ಭೇಟಿ ನೀಡಿದ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ ಪಂಚಾಯತ್ ವತಿಯಿಂದ ತಾತ್ಕಾಲಿಕ ದುರಸ್ತಿಗೆ ಸೂಚಿಸಿದ್ದಾರೆ.
ಬೋಳದಗುತ್ತು, ಬೋಳ ಮಾರಗುತ್ತು, ಅಂಬರಾಡಿ, ನಡಿಗುತ್ತು ಭಾಗದ ಜನರಿಗೆ ಬೋಳ ದೇಗುಲಕ್ಕೆ ಆಗಮಿಸಲು ಈ ಸೇತುವೆ ಅನುಕೂಲ ಕರವಾಗಿದೆ.
ಇದರ ಪಕ್ಕದಲ್ಲಿ 2 ಕೋ.ರೂ. ವೆಚ್ಚದಲ್ಲಿ ದೊಡ್ಡ ಸೇತುವೆ ನಿರ್ಮಾಣಗೊಳ್ಳಲಿದ್ದು ಈ ಸೇತುವೆ ಮುಗುಳಿ ಕಡೆಯ ಬೋಳ ಗ್ರಾಮಸ್ಥರಿಗೆ ಸಚ್ಚೇರಿಪೇಟೆಗೆ ಬರಲು ಬಲು ಹತ್ತಿರದ ವ್ಯವಸ್ಥೆಯಾಗಲಿದೆ ಎಂದು ಸತೀಶ್ ಪೂಜಾರಿ ತಿಳಿಸಿದರು.
ಇದೇ ಜಾಗದಲ್ಲಿ ನೂತನ ಸೇತುವೆ ನಿರ್ಮಾಣಗೊಳ್ಳಲಿರುವುದರಿಂದ ರಾಡ್ ಮುರಿದ ಸೇತುವೆಯನ್ನು ಪಂಚಾಯತ್ ವತಿಯಿಂದಲೇ ತಾತ್ಕಾಲಿಕವಾಗಿ ದುರಸ್ತಿ ಪಡಿಸಲಾಗುವುದೆಂದು ಸತೀಶ್ ಪೂಜಾರಿ ತಿಳಿಸಿದರು.
ಪಂಚಾಯತ್ ಪಿಡಿಒ ಹರೀಶ್, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಜಯರಾಮ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.