Advertisement

ಬೋಲ ಸ್ಮತಿಯಾನ ಪ್ರದರ್ಶನ –ಸಂವಾದ –ಸಂಸ್ಮರಣೆ

09:02 AM Aug 18, 2017 | Team Udayavani |

ಓರ್ವ ಸಾಹಿತಿಯಾಗಿ, ನಾಡಿನ ಸಂಸ್ಕೃತಿಯ ಆಳವಾದ ಜ್ಞಾನವನ್ನು ಹೊಂದಿ ಲೋಕಕ್ಕೆ ಮಹತ್ವದ ಹೊತ್ತಗೆಗಳನ್ನು ನೀಡಿ ಕಣ್ಮರೆಯಾದವರು ಬೋಲ ಚಿತ್ತರಂಜನ ದಾಸ್‌ ಶೆಟ್ಟರು. ಹೆಚ್ಚು ಜನಪ್ರಿಯತೆಗೋ ಆಗ್ರಹಕ್ಕೊ ತನ್ನನ್ನು ಒಡ್ಡಿಕೊಕೊಳ್ಳದೆ ಆದರ್ಶ ಜೀವನವನ್ನು ನಡೆಸಿದ ಹಿರಿಮೆ ಇವರದ್ದು.

Advertisement

ಚಿತ್ತರಂಜನದಾಸರು ಕಳೆದ ವರ್ಷ ಆಗಸ್ಟ್‌ 6ರಂದು ಕೀರ್ತಿಶೇಷರಾದಾಗ‌ ಅವರ “ಅಳಿಯ ಸಂತಾನ ಮಾತೃಧರ್ಮ’ ಕೃತಿ ಮಂಗಳೂರಿನ ಆಕೃತಿ ಪ್ರಿಂಟ್ಸ್‌ನಲ್ಲಿ ಹೆಚ್ಚಿನ ಮುದ್ರಣ ಸಂಬಂಧಿ ಕೆಲಸ ಕಾರ್ಯಗಳು ಮುಗಿದು ಪ್ರಕಟನೆಗೆ ಸಿದ್ಧವಾಗಿತ್ತು. ಅವರು ದಿವಂಗತರಾದ ಕಾರಣ ಕೃತಿ ಪ್ರಕಟವಾಗದೆ ಉಳಿದು, ಇದೇ ಆಗಸ್ಟ್‌ 6ರಂದು ಅವರ ವರ್ಷದ ಸಂಸ್ಮರಣೆಯ ಸಂದರ್ಭ ಶೆಟ್ಟರ ಸಹಧರ್ಮಿಣಿ ಕುಶಲ ಶೆಟ್ಟಿ ಹಾಗೂ ಸುಪುತ್ರರಾದ ಸ್ನೇಹರಾಜ ಶೆಟ್ಟಿ, ತಿಲಕ್‌ರಾಜ್‌ ಶೆಟ್ಟಿ ಅವರ ಯೋಜನೆಯಲ್ಲಿ ಸಂಚಾಲನ ಸಮಿತಿಯ ಕಾರ್ಯನಿರ್ವಹಣೆಯಲ್ಲಿ “ಬೋಲ ಸ್ಮತಿ ಕಾರ್ಯಕ್ರಮ’ವಾಗಿ ನೆರವೇರಿತು.

ಮಂಗಳೂರಿನ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದಲ್ಲಿ “ಬೋಲ ಸ್ಮತಿಯಾನ’ದ ನಾಲ್ಕು ಅರ್ಥಪೂರ್ಣ ಕಾರ್ಯಕ್ರಮಗಳು ಜರಗಿದವು. ಅನಾವರಣಗೊಂಡ ಬೋಲದವರ ಕೃತಿ  “”ಮಾತೃಧರ್ಮ ಅಳಿಯ ಸಂತಾನ” ಆಧಾರಿತ “ಬೋಲದೂರುಡು ಅಮರ್‌ ಬೀರೆರ್‌’ ಯಕ್ಷಗಾನ, ಅದೇ ಕೃತಿಯಲ್ಲಿ ಸಿರಿಯ ಕಥೆ ಇರುವ ಹಿನ್ನೆಲೆಯಲ್ಲಿ “ಸತ್ಯನಾಪುರತ ಸಿರಿ’ ತುಳು ಸಮೂಹ ನೃತ್ಯ ರೂಪಕ, ಬೋಲ ವ್ಯಕ್ತಿ ಮತ್ತು ಕೃತಿ ಸಂವಾದ ಕಾರ್ಯಕ್ರಮ ಹಾಗೂ ಸಂಸ್ಮರಣೆಯ ಸಭಾ ಸಮಾರಂಭ ನೆರವೇರಿದವು.               

ಕೃತಿಗೆ ಮುನ್ನುಡಿಯನ್ನು ಬರೆದ ಡಾ| ವಿವೇಕ ರೈಯವರು ಕೃತಿ ಬಿಡುಗಡೆ ಮಾಡಿ “ಬೋಲದವರ ಕೊನೆಯ ಮಹತ್ವಕಾಂಕ್ಷೆಯ ಕೃತಿಯಿದು. ಅವರದ್ದೇ ಆದ ಮೂರು ಬೇರೆ ಬೇರೆ ಕೃತಿಗಳ ಈ ಕಟ್ಟನ್ನು ಕಟ್ಟುವಲ್ಲಿ ಅವರ ಮನಸ್ಸಿನಲ್ಲಿ ಏನು ಚಿಂತನೆ ಇತ್ತು ಎನ್ನುವುದು ನಮಗೆ ಗೊತ್ತಿಲ್ಲ. ಆದರೆ ಈ ಮೂರು ಕೃತಿಗಳನ್ನು ಒಟ್ಟು ಮಾಡಿ ಬದುಕಿನ ಬಗ್ಗೆ ಒಂದು ಸಾತ್ವಿಕತೆಯನ್ನು ಪ್ರಕಟಿಸಲು ಅವರು ಬಯಸಿದ್ದರು ಎನ್ನುವುದು ಗೋಚರವಾಗುವ ಸತ್ಯ. ಸದಾ ಪ್ರಯೋಗಶೀಲರಾದ ಬೋಲದ ಶೆಟ್ಟರು ತುಳು ಸಂಸ್ಕೃತಿಯ ಶರೀರದಲ್ಲಿ ಕನ್ನಡ ಸಾಹಿತ್ಯದ ವಿಶಿಷ್ಟ ಕಟ್ಟಡಗಳನ್ನು ಹೊಸದಾಗಿ ಕಟ್ಟಿದವರು. ಈ ಹೊಸ ಸಾಹಿತ್ಯ ಮನೆಗಳ ಪ್ರವೇಶದ ಸಂಭ್ರಮದ ಹೊತ್ತಿನಲ್ಲಿ ಬೋಲರು ನಮ್ಮೊಡನೆ ಇಲ್ಲ. ಎನ್ನುವ ನೋವು ಗಾಢ ವಿಷಾದ ನಮ್ಮನ್ನು ಆವರಿಸಿದೆ. ಮನೆಯೊಳಗೆ ಮನೆಯೊಡೆಯನಿಲ್ಲ ಆದರೆ ಅವರ ಚಿತ್ತ ವಿಹಾರ ನಮ್ಮ ಕಣ್ಣ ಮುಂದೆ ಇದೆ. ಅದನ್ನು ನಾವು ಅನುಸರಿಸಲೇಬೇಕು’ ಎಂದು ಹಿರಿಮೆಯ ಮಾತುಗಳನ್ನು ಆಡಿದರು. ವಿಮರ್ಶಕ ಡಾ| ಎಂ. ಪ್ರಭಾಕರ ಜೋಶಿಯವರು “ಬೋಲರವರು ಸರಳ ಜೀವಿ ಓರ್ವ ಉತ್ತಮ ಸಾಹಿತಿ, ಕಾದಂಬರಿಕಾರ, ಕಥೆಗಾರ ಎಲ್ಲವೂ ಆಗಿದ್ದರು. ಶೆಟ್ಟರ ಬದುಕು ಕಷ್ಟದ ಆರ್ಥಿಕ ಸಂಕಷ್ಟದಲ್ಲಿ ಬೆಳೆದು ಬಂದಿದ್ದರೂ ಅವರು ಕುಗ್ಗಿದವರು ಅಲ್ಲ. ಸಾಹಿತ್ಯದ ಕಾಯಕ ನಿರಂತರವಾಗಿ ನಡೆಸಿಕೊಂಡು ಬಂದ ಕಾರಣದಿಂದ ಇವತ್ತು ಎತ್ತರದ ಸ್ಥಾನಕ್ಕೆ ಏರಿದ್ದಾರೆ. ಅವರಿಲ್ಲಿ ಬಿಟ್ಟು ಹೋದ ಸಾಹಿತ್ಯ ಕುರಿತಿನ್ನು ಆಳವಾದ ಚರ್ಚೆ ಸಂವಾದಗಳು ನೆರವೇರುತ್ತಾ ಅದರ ಮೌಲ್ಯ ಪ್ರಕಟವಾಗಬೇಕು’ ಎಂದರು. 

“ಬೋಲ ವ್ಯಕ್ತಿ ಮತ್ತು ಕೃತಿ ಸಂವಾದ’ ಕಾರ್ಯಕ್ರಮದಲ್ಲಿ ಸಮನ್ವಯಕಾರರಾಗಿ ಡಾ| ಸುನೀತಾ ಎಂ. ಶೆಟ್ಟಿ ಭಾಗವಹಿಸಿದರೆ, “ಬೋಲ ಸಾಹಿತ್ಯ ಗುಣಧರ್ಮ, ಬೋಲ ಜೀವನ ಧರ್ಮ’ ಈ ಕುರಿತಾಗಿ ಡಾ| ಗಣನಾಥ ಶೆಟ್ಟಿ ಎಕ್ಕಾರು ಹಾಗೂ ಡಾ| ಗಣೇಶ ಅಮೀನ್‌ ಸಂಕಮಾರ್‌ ವಿಚಾರ ಮಂಡನೆ ಮಾಡಿದರು.

Advertisement

ಕೃತಿ ಪ್ರಕಟನೆಯ ಅಂತಿಮವಾದ ಮುದ್ರಣ ರೂಪಕ್ಕೆ ಸ್ಪಂದಿಸಿದ ಸಾಹಿತಿ ಭಾಸ್ಕರ ರೈ ಕುಕ್ಕುವಳ್ಳಿ ಹಾಗೂ ಪ್ರಾಧ್ಯಾಪಕ ಡಾ| ದಿನಕರ ಎಸ್‌. ಪಚ್ಚನಾಡಿ ಅವರ ಸಂಯೋಜನೆ ಹಾಗೂ ಪ್ರಸಂಗ ರಚನೆಯಲ್ಲಿ “ಬೋಲದೂರುಡು ಅಮರ್‌ ಬೀರೆರ್‌’ ಯಕ್ಷಗಾನ ನೆರವೇರಿತು.  ಕೋಟಿ ಚೆನ್ನಯರು ಬೋಲದೂರಿಗೆ ಆಗಮಿಸಿ ಬ್ರಹ್ಮ ಬನದಲ್ಲಿ ಸಂಜೀವಿನಿ ಔಷಧಿಯ ಆಘ್ರಾಣಿಸಿ, ಗುತ್ತಿನಾಳ್ವರ ಬಡತನ ಹೋಗಲಾಡಿಸಿದ್ದು ಕಥೆಯ ಮುಖ್ಯ ಭಾಗ. ಕೇಂಜವ ಹಕ್ಕಿಗಳ ನೃತ್ಯ ರೂಪಕ, ಮಹಾಶೇಷ ಸಂಕಪಾಲನ ಯುದ್ಧ, ಸ್ವರ್ಣ ಕೇದಗೆ ದೇಯಿಯಾಗಿ ಮದುವೆಯಾಗುವಲ್ಲಿಗೆ ಕಥೆ ಮುಕ್ತಾಯವಾಯಿತು. ಪುತ್ತಿಗೆ ರಘುರಾಮ ಹೊಳ್ಳರ ಭಾಗವತಿಕೆಯಲ್ಲಿ ದಾಸಪ್ಪ ರೈ, ಕೊಳ್ತಿಗೆ ನಾರಾಯಣ ಗೌಡ, ಸರಪಾಡಿ ಅಶೋಕ್‌ ಶೆಟ್ಟಿ, ಸದಾಶಿವ ಕುಲಾಲ್‌ ಮೊದಲಾದ ಪ್ರಸಿದ್ಧ ಕಲಾವಿದರಿದ್ದು ಪ್ರದರ್ಶನ ಉತ್ತಮವಾಯಿತು.

ಡಾ| ಅಮೃತ ಸೋಮೇಶ್ವರ ಅವರ ಸಾಹಿತ್ಯದ “ಸತ್ಯಾನಾಪುರದ ಸಿರಿ’ ತುಳು ಸಮೂಹ ನೃತ್ಯ ರೂಪಕಕ್ಕೆ ಸನಾತನ ನಾಟ್ಯಾಲಯದ ವಿ| ಶಾರದಾಮಣಿ ಶೇಖರ್‌ ಹಾಗೂ ವಿ| ಶ್ರೀಲತಾ ನಾಗರಾಜ್‌ ನಿರ್ದೇಶನ ಮಾಡಿ ದರು. ಇವರ ಶಿಷ್ಯೆಯರು ಹಾಗೂ ಆಹ್ವಾನಿತ ಕಲಾವಿದರ ನೃತ್ಯಾಭಿನಯದಲ್ಲಿ ಕಾರ್ಯಕ್ರಮ ಪ್ರಸ್ತುತವಾಯಿತು. ಜೀವತಾವಧಿಯಲ್ಲಿ ಬೋಲದ ಶೆಟ್ಟರು ಸಾಧಿಸಿದ ಸಾಹಿತ್ಯ ಕೈಂಕರ್ಯ ಹಾಗೂ ಆ ಆದರ್ಶದ ಹಿರಿಮೆ “ಸ್ಮತಿಯಾನ’ವಾಗಿ ಸಂಸ್ಮರಣ, ಕೃತಿ ವಿಮೋಚನ, ಸಾಹಿತ್ಯ ದರ್ಶನ, ರಂಗಪ್ರದರ್ಶನವಾಗಿ ಅವರ ಚರಿತೆಯಲ್ಲೊಂದು ದಾಖಲೆಯನ್ನು ನಿರ್ಮಿಸಿತು.

ಕೆ. ಚಂದ್ರಶೇಖರ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next