ಕಲಬುರಗಿ: ಅಫಜಲಪುರ ತಾಲೂಕಿನ ಚಿನ್ಮಯಗಿರಿ-ಮಹಾಂತಪುರ ತಪೋಭೂಮಿಯಲ್ಲಿ ಸ್ಥಾಪನೆಯಾಗಿರುವ ಕೆಪಿಆರ್ ಸಕ್ಕರೆ ಕಾರ್ಖಾನೆ ಬಾಯ್ಲರ್ ಪೂಜೆ ರವಿವಾರ ನಡೆಯಿತು.
ಚಿನ್ಮಯಗಿರಿ-ಮಹಾಂತಪುರದ ಮಹಾಂತೇಶ್ವರ ಮಠದ ಹಿರಿಯ ಪೀಠಾಧಿಪತಿ ಸಿದ್ಧರಾಮ ಶಿವಾಚಾರ್ಯರು ಬಾಯ್ಲರ್ ಪೂಜೆ ನೆರವೇರಿಸಿ, ವರ್ಷದೊಳಗೆ ಸಕ್ಕರೆ ಕಾರ್ಖಾನೆ ಕಾರ್ಯಾರಂಭ ಮಾಡಿರುವುದು ಕಾರ್ಯಕ್ಷಮತೆಗೆ ಹಿಡಿದ ಕನ್ನಡಿಯಾಗಿದೆ. ಹಿಡಿದ ಕಾರ್ಯ ಸಕಾಲಕ್ಕೆ ನೆರವೇರಿಸಲಾಗಿದೆ ಎಂದು ಶ್ಲಾಸಿದರು.
ಯಾವುದೇ ಕೆಲಸವನ್ನು ಶ್ರದ್ಧೆ ಹಾಗೂ ಆಸಕ್ತಿಯಿಂದ ನಿರ್ವಹಿಸಿದರೆ ಯಶಸ್ಸು ನಿಶ್ಚಿತ ಎಂಬುದಕ್ಕೆ ಸಕ್ಕರೆ ಕಾರ್ಖಾನೆ ಪ್ರಾರಂಭವಾಗಿರುವುದೇ ಸಾಕ್ಷಿಯಾಗಿದೆ ಎಂದು ನುಡಿದರು.
ಕಾರ್ಖಾನೆ ಮಾಲೀಕ ಆನಂದ ರಾಮಸ್ವಾಮಿ ಮಾತನಾಡಿ, ಡಿ. 19ರಿಂದ ಕಬ್ಬು ನುರಿಸುವ ಕಾರ್ಯ ಆರಂಭವಾಗಲಿದೆ. ಇದಕ್ಕಾಗಿ ಸಕಲ ಸಿದ್ಧತೆ ಆರಂಭಿಸಲಾಗಿದೆ. ಅಲ್ಲದೇ ತಮ್ಮ ಕಂಪನಿಯಿಂದ ಮುಂದಿನ ದಿನಗಳಲ್ಲಿ ಸಮುದಾಯ ಆಸ್ಪತ್ರೆ ತೆರೆಯಲಾಗುವುದು. ಇತರ ಸಾಮಾಜಿಕ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಮಹಾಂತಪುರ ವಿದ್ಯಾಪೀಠದ ಸಹ ಅಧ್ಯಕ್ಷ, ಸರ್. ಎಂ. ವಿಶ್ವೇಶ್ವರ ವಿಜ್ಞಾನಿ ಪ್ರಶಸ್ತಿ ಪುರಸ್ಕೃತ ಡಾ| ಎಂ.ಎಸ್. ಜೋಗದ ಮಾತನಾಡಿ, ಕೆಪಿಆರ್ ಸಕ್ಕರೆ ಕಾರ್ಖಾನೆಯವರು ಆರಂಭದಲ್ಲಿ ಹೇಳಿ ದಂತೆ ನಡೆದುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಠದ ಕಿರಿಯ ಪೀಠಾಧಿಪತಿ ಪೂಜ್ಯ ವೀರಮಹಾಂತ ಶಿವಾಚಾರ್ಯರು, ಚೆನ್ನಬಸಯ್ಯ ಸ್ವಾಮೀಜಿ, ಸಾವಿತ್ರಿ ಎಂ. ಜೋಗದ, ಶಿವಶರಣಪ್ಪ ಹೀರಾಪುರ, ಗೌಡಪ್ಪಗೌಡ, ಯಲ್ಲನಗೌಡ, ಮಹಾಂತಪ್ಪ ಅವರಾದಿ ಹಾಗೂ ಕಾರ್ಖಾನೆ ಅಧಿಕಾರಿಗಳು ಇದ್ದರು.