ಬೀಳಗಿ: ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಕೇಂದ್ರ ಸರಕಾರದಿಂದ 8ರಿಂದ 32 ವರ್ಷದ ಬಡ ಹೆಣ್ಣು ಮಕ್ಕಳಿಗೆ 2 ಲಕ್ಷ ಹಣ ಸಿಗುತ್ತದೆ ಎಂದು ನಂಬಿಸಿ ತಾಲೂಕಿನ ಬಾಡಗಂಡಿ, ಹೆಗ್ಗೂರ ಗ್ರಾಮ ಸೇರಿದಂತೆ ಹಲವೆಡೆ ನೂರು, ಇನ್ನೂರು, ಐವತ್ತು ರೂ.ಗೆ ಅರ್ಜಿ ಫಾರ್ಮ್ ಮಾರಾಟ ಮಾಡುವ ಮೂಲಕ ಮುಗ್ಧ ಜನರನ್ನು ವಂಚಿಸಲಾಗುತ್ತಿದೆ.
ಏನಿದು ಪ್ರಕರಣ: ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಫಾರ್ಮ್ ತುಂಬಿ, ತಾವು ಕಲಿತಿರುವ ಶಾಲೆಯ ಹಾಗೂ ತಾವು ವಾಸಿಸುವ ಗ್ರಾಮದ ಗ್ರಾಪಂನಿಂದ ಮೊಹರು ಸಹಿ ಮಾಡಿಸಬೇಕು. ನಂತರ, ಆ ಫಾರ್ಮ್ನ್ನು ಭಾರತ ಸರಕಾರದ ಅಡಿಯಲ್ಲಿರುವ ಇಲಾಖೆಯೊಂದರ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕೆಂದು ಜನರನ್ನು ನಂಬಿಸಲಾಗುತ್ತಿದೆ. ಹಿಂದಿಯಲ್ಲಿರುವ ನಕಲಿ ಅರ್ಜಿ ಫಾರ್ಮಗಳನ್ನು ಯಾರ ಭಯವೂ ಇಲ್ಲದೆ ಎಗ್ಗಿಲ್ಲದೆ ಮಾರಾಟ ಮಾಡುತ್ತಿರುವ ಜಾಲ ಲಕ್ಷಾಂತರ ಹಣ ಲೂಟಿ ಮಾಡಿದೆ. ಈ ಫಾರ್ಮ ಮತ್ತೆಲ್ಲೂ ಸಿಗುವುದಿಲ್ಲ. ಬೇಕಿದ್ದರೆ ತೆಗೆದುಕೊಳ್ಳಿ ಅರ್ಜಿ ಹಾಕಲು ಬಹಳ ಅವಧಿಯಿಲ್ಲ. 2 ವರ್ಷದಲ್ಲಿ 2 ಲಕ್ಷ ರೂ ಬರುತ್ತದೆ. ನೂರಾರು ರೂಪಾಯಿಗೆ ಹಿಂಜರಿಯಬೇಡಿ ಎಂದು ಜನರನ್ನು ಮರಳು ಮಾಡಿ ಬೇಟಿ ಬಚಾವೋ ಹೆಸರಲ್ಲಿ ಹಣ ಬಾಚುತ್ತಿದ್ದಾರೆ.
ಪ್ರಭಾವಿಗಳೇ ಇದರ ಸೂತ್ರಧಾರಿಗಳು: ಕೆಲ ರಾಜಕೀಯ ಪ್ರಭಾವಿಗಳ ಹೆಸರು ಹೇಳಿಕೊಳ್ಳುತ್ತಿರುವವರೇ ಈ ಜಾಲದಲ್ಲಿದ್ದಾರೆ. ಜನರನ್ನು ನಂಬಿಸಲು ರಾಜಕಾರಣಿಗಳ ಹೆಸರು ಕೂಡ ಬಳಕೆಯಾಗುತ್ತಿರುವುದು ಕಂಡು ಬಂದಿದೆ. ಇಂತವರ ಮಾತನ್ನು ನಂಬಿದ ಮುಗ್ಧ ಜನತೆ ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಅರ್ಜಿ ಫಾರ್ಮ್ ಪಡೆಯಲು ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಈಗಾಗಲೇ ತಾಲೂಕಿನ ಬಾಡಗಂಡಿ, ಹೆಗ್ಗೂರಲ್ಲಿ ಸಾವಿರಾರು ಅರ್ಜಿ ಫಾರ್ಮ್ ಮಾರಾಟ ಮಾಡಲಾಗಿದೆ. ಅರ್ಜಿ ಫಾರ್ಮ ಪ್ರತಿಷ್ಠಿತ ವ್ಯಕ್ತಿಗಳ ಮನೆಯಲ್ಲಿಯೇ ಮಾರಾಟವಾಗುತ್ತಿವೆ ಎಂದು ಹೇಳಲಾಗುತ್ತಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ಸರಕಾರದ ಯಾವುದೇ ಇಂತಹ ಯೋಜನೆ ಇರದಿದ್ದರೂ ಕೂಡ, ಆಯಾ ಸ್ಥಳೀಯ ಗ್ರಾಪಂ, ಶಾಲಾ ಮುಖ್ಯೋಪಾಧ್ಯಾಯರು ಅರ್ಜಿ ಫಾರ್ಮ್ ಗೆ ಮೊಹರು ಸಹಿ ಮಾಡಿ ಕಳಿಸುವುದರಿಂದ ಜನತೆ ಇನ್ನಷ್ಟು ನಂಬಲು ಕಾರಣವಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ಹಿಂದುಮುಂದು ನೋಡದೆ ಸಹಿ ಮಾಡುತ್ತಿದ್ದಾರೆ.
ಕ್ರಮಕ್ಕೆ ಆಗ್ರಹ: ಸುಳ್ಳಿನ ಕಂತೆಯ ಅರ್ಜಿ ಫಾರ್ಮ್ ಹಿಡಿದುಕೊಂಡು ಸಾರ್ವಜನಿಕರನ್ನು ವಂಚಿಸುತ್ತಿರುವ ವ್ಯವಸ್ಥಿತ ಜಾಲದ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.
ಇದೊಂದು ಬೋಗಸ್ ಅರ್ಜಿ ಫಾರ್ಮ್ ಇರುತ್ತದೆ. ಇದು ದುಡ್ಡು ಹೊಡೆಯುವ ಸಂಚು. ಇಂತಹ ವಂಚಕರಿಗೆ ಯಾರೂ ಮರುಳಾಗಬೇಡಿ. ಬೇಟಿ ಬಚಾವೋ ಬೇಟಿ ಪಡಾವೋ ಯಾವುದೇ ಯೋಜನೆ ಸರಕಾರದಿಂದ ಬಂದಿಲ್ಲ. ಕಾರಣ, ಜನತೆ ಮೋಸ ಹೋಗಬಾರದು.
•ನೀಲಾ ತೆಗ್ಗಿ, ಸಿಡಿಪಿಒ ಬೀಳಗಿ
ರವೀಂದ್ರ ಕಣವಿ