ನೆನಪುಗಳಿಲ್ಲದ ಬದುಕು ಇಲ್ಲ. ನೆನಪುಗಳಿಲ್ಲದ ಬದುಕು ಅದು ಬದುಕಲ್ಲ ಬರಡು. ನೆನಪು ಒಂದು ಅನುಭವದ ಅಭಿವ್ಯಕ್ತಿ.
ನೆನಪುಗಳನ್ನೇ ಕೆಂದ್ರವಾಗಿಸಿಟ್ಟುಕೊಂಡು ಹೆಣೆದ ಕೃತಿ ಅಂಜನಾ ಹೆಗಡೆ ಅವರ ‘ಬೊಗಸೆಯಲ್ಲೊಂದು ಹೂನಗೆ’ ಕನ್ನಡಿಗರ ಓದಿಗೆ ದೊರಕಿದೆ.
ಈ ಕೃತಿಯ ಓದಿಗೆ ಪ್ರತಿಕ್ರಿಯೆಯಾಗಿ ವಿರ್ಮರ್ಶಿಸುವ ಪ್ರಯತ್ನ ಮಾಡುವ ಅಂತ ಅನ್ನಿಸಲೇ ಇಲ್ಲ. ಸ್ವಚ್ಛಂದ ಭಾವಗಳನ್ನು, ನೆನಪುಗಳನ್ನು ಏನು ವಿಮರ್ಶಿಸಿ ಗುಡ್ಡೆ ಕಡಿದು ಹಾಕುವುದಕ್ಕಿದೆ…? ಮುನ್ನುಡಿಯಲ್ಲಿ ಸೇತುರಾಂ ಅವರು ಹೇಳಿದ ಹಾಗೆ ‘ಈ ಬರಹಗಳು ವಿಮರ್ಶೆಗೆ ಹೋಗುವುದಿಲ್ಲ. ಭಾವಗಳಲ್ಲಿ ಸುಳ್ಳಿಲ್ಲ, ಕುತರ್ಕವಿಲ್ಲ. ಹಾಗಾಗಿ ವಿಮರ್ಶೆ ಸಲ್ಲ.’ ನೆನಪುಗಳನ್ನು ಸ್ವೀಕರಿಸಬಹುದು ಮತ್ತು ಅತ್ಯಂತ ಆಪ್ತವಾಗಿ ಸವಿಯಬಹುದಾದ ಮತ್ತೆ ಮತ್ತೆ ನೆನಪಿಸಿಕೊಳ್ಳಬಹುದಾದ, ನೆನಪಿಗೆ ಯೋಗ್ಯವಾದ ನೆನಪುಗಳೇ ಇಲ್ಲಿವೆ. ಹಾಗಾಗಿ ವಿಮರ್ಶೆಯ ಪ್ರಯತ್ನ ಮಾಡುವುದು ತಪ್ಪಾಗುತ್ತದೆ ಎಂದು ಅರಿತಿದ್ದೇನೆ. ಎನ್ನುವಲ್ಲಿಗೆ ಇದು ಅಪ್ಪಟ ಅನಿಸಿಕೆ ಎನ್ನುವುದಕ್ಕೆ ನನ್ನದೇ ಪ್ರಮಾಣ ಪತ್ರ.
ಲೇಖಕಿ ಅಂಜನಾ ಹೆಗಡೆ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರು. ಶಿರಸಿ ಅಲ್ಲಿ ಹುಟ್ಟಿ ಬೆಳೆದ ಮೇಲೆ ಇಂತಹ ನೆನಪುಗಳು ಇರದಿರಲು ಸಾಧ್ಯವಿಲ್ಲ. ಎಳವೆಯ ದಿನಗಳನ್ನು ಕಷ್ಟನೋ, ಸುಖನೋ ಏನೋ … ಬದುಕು ಬಂದ ಹಾಗೆ ಸ್ವೀಕರಿಸಿದ್ದಾರೆ ಮತ್ತು ಅದನ್ನು ಸಹ್ಯ, ಅಸಹ್ಯ ಸ್ಥಿತಿಗಳೊಂದಿಗೆ ಅಪ್ಪಿದ್ದಾರೆ, ಒಪ್ಪಿದ್ದಾರೆ ಎನ್ನುವುದನ್ನು ಇಲ್ಲಿನ ಪ್ರತಿ ನೆನಪಿನ ಲಹರಿಗಳಲ್ಲಿ ಕಾಣಸಿಗುತ್ತದೆ.
ಸದ್ಯ, ಸಹಜ ಕಾಡು, ಗುಡ್ಡ, ಝರಿ, ಕಾಡಬೆಳದಿಂಗಳು, ಮಳೆ, ಜಲಪಾತಗಳು, ಎಲ್ಲೆಲ್ಲೂ ಸ್ವಚ್ಛ ಹಸಿರಿನೊಂದಿಗೆ ಉಸಿರು ಕಂಡು ಬೆಳೆದು, ಮದುವೆಯಾಗಿ ಬೆಂಗಳೂರು ಎಂಬ ಕಾಂಕ್ರೀಟ್ ಕಾಡುಗಳ ನಡುವೆ ವಾಸ ಕಂಡುಕೊಂಡ ಅಂಜನಿಯವರಿಗೆ ಶಿರಸಿಯ ನೆನಪುಗಳು ಒಂದಿನಿತು ಮಾಸಿಲ್ಲ. ಮಾಸದೇ ಇರುವ ಬದುಕು ಅವರ ಬಾಲ್ಯ ಕೊಟ್ಟಿದೆ. ಅವರ ಎಳೆಯ ವಯಸ್ಸು ಒದಗಿಸಿದೆ. ಅವರ ಯೌವನ ಧಾರೆಯೆರೆದಿದೆ. ಹಾಗಾಗಿ ಅದು ಅಳಿಸುವುದಲ್ಲ. ಮಾಸುವುದಲ್ಲ. ಮರೆವಿಗೆ ಸೇರುವವುಗಳಲ್ಲ ಎಂದು ಪ್ರತಿ ಭಾವಗಳ ಕನ್ನಡಿಯಂತಿರುವ ಇಲ್ಲಿನ ಬರಹಗಳು ಸ್ಪಷ್ಟ ಉತ್ತರ ನೀಡುತ್ತವೆ.
ಹೆಣ್ಣಿನಲ್ಲಿನ ವಿಶೇಷವಾದ ಶಕ್ತಿಯೇ ಅಂತದ್ದು. ಹೆಣ್ಣು ತನ್ನ ಬದುಕಿನ ಉದ್ದಕ್ಕೂ ನೆನಪುಗಳನ್ನು ಸಂಗ್ರಹಿಸುತ್ತಲೇ ಹೋಗುತ್ತಾಳೆ. ಅದು ನೆನಪಿಸಲಿಚ್ಚಿಸುವ, ನೆನಪಿಸಲಿಚ್ಚಿಸದ ನೆನಪುಗಳನ್ನೂ ಕೂಡ. ಮತ್ತೆ ಮತ್ತೆ ಮೆಲುಕು ಹಾಕುವಂತಹ ನೆನಪುಗಳನ್ನು ಒಬ್ಬ ಹೆಣ್ಣು ಖುಷಿ ಪಡುವಷ್ಟು ಗಂಡಾದವ ಖುಷಿ ಪಡಲಾರ. ಹೆಣ್ಣಿನ ಸಂವೇದನೆಯೇ ಹಾಗೆ. ಆಕೆಯ ಇರುವಿಕೆಯೇ ಹಾಗೆ. ನೋವನ್ನು ನುಂಗಿ ಬದುಕುವ, ಮತ್ತು ಸುಂದರ ನೆನಪುಗಳೊಂದಿಗೆ ಬದುಕನ್ನು ವಿಶೇಷವಾಗಿಸಿಕೊಳ್ಳುವ ವಿಶೇಷ ಶಕ್ತಿ ಅಪಾರವಾಗಿ ಇರುವುದು ಹೆಣ್ಣಿನಲ್ಲಿ ಮಾತ್ರ.
ಅಂಜನಾ ತಮ್ಮ ಬಾಲ್ಯಗಳನ್ನು, ಯೌವನವನ್ನು ಬ್ರಾಹ್ಮಣ ಕೌಟುಂಬಿಕ ವ್ಯವಸ್ಥೆಯ ಚೌಕಟ್ಟಿನೊಳಗೆಯೇ ತುಂಬಾ ಚೆಂದಾಗಿ ಅನುಭವಿಸಿದ್ದಾರೆ, ಮತ್ತದನ್ನು ನೂರ್ಕಾಲ ಉಳಿಸಿಕೊಳ್ಳುವ ಹಾಗೆ ದುಡಿಸಿಕೊಂಡಿದ್ದಾರೆ ಎನ್ನುವುದನ್ನು ಈ ಕೃತಿ ಸ್ಪಷ್ಟವಾಗಿ ತಿಳಿಸುತ್ತದೆ.
ಮುಗಿದು ಹೋದ ಸಂಭ್ರಮಗಳೆಂದರೇ ಬಣ್ಣಗಳೇ ಅಲ್ಲವೇ..?!(ಬಣ್ಣಗಳಲ್ಲದ್ದಿದ ಬದುಕು) ನೆನಪುಗಳ ಜನನ ಭಾವನೆಗಳಿಂದ. ಭಾವನೆಗಳು ಬಣ್ಣಗಳಿಂದ ಹುಟ್ಟುವವುಗಳು. ಕಪ್ಪಿಗೆ ನೋವು, ನೀಲಿಗೆ ವಿಷಾದ, ಕೆಂಪಿಗೆ ಅನುರಾಗ, ಹಸಿರಿಗೆ ಚೇತನ …ಹೀಗೆ ಒಂದೊಂದಕ್ಕೆ ಒಂದು.
‘ಛೇ.. ಆ ದಿನಗಳು ಚೆನ್ನಾಗಿದ್ವು… ಮತ್ತೆ ಬಾಲ್ಯವನ್ನು ನೋಡ್ಬೇಕು, ಅಮ್ಮನ ಮಡಿಲಲ್ಲಿ ಮಲಗಬೇಕು, ಮನೆಯ ಅಂಗಳದಲ್ಲಿ ಆಟ ಆಡಬೇಕು, ತೋಟದ ಮಾವಿನ ಮರಕ್ಕೆ ಜೋಕಾಲಿ ಕಟ್ಟಿ ಆಡಬೇಕು.. ಅಂತ ಯಾರಿಗನ್ನಿಸಿರಲಿಕ್ಕಿಲ್ಲ ಹೇಳಿ. ಎಲ್ಲರಿಗೂ ಮತ್ತೊಮ್ಮೆ ಬಾಲ್ಯವನ್ನು ಕಾಣಬೇಕು ಅಂತ ಆಸೆ ಇದ್ದೇ ಇರುತ್ತದೆ. ಆದರೇ ಅದು ಅಸಾಧ್ಯ. ನೆನಪುಗಳಲ್ಲಿ ಕಾಣಬಹುದು ಅಷ್ಟೇ. ಅದನ್ನು ಮತ್ತೆ ಅನುಭವಿಸುವುದಕ್ಕೆ ಸಾಧ್ಯವಿಲ್ಲ. ಬಾಲ್ಯದ ಹಂತವನ್ನು ದಾಟಿ ಬಂದ ಮೇಲೆ ಅದನ್ನು ಮತ್ತೆ ಸಂಭ್ರಮಿಸಲು ಸಾಧ್ಯವಾಗಿಸುವ ಶಕ್ತಿ ನೆನಪಿಗಷ್ಟೇ ಇದೆ. ಇಲ್ಲಿನ ಪ್ರತಿ ಲೇಖನಗಳು ಒಮ್ಮೆ ಮತ್ತೆ ಬಾಲ್ಯವನ್ನು ಕಂಡು ಬರೋಣ ಅಂತನ್ನಿಸದೇ ಇರದು.
ಸುತ್ತಲಿನ ಹಸಿರು, ಮನೆ, ಮನೆಯಂಗಳ, ಬಾಲ್ಯ, ಹಸು, ಬಾಲ್ಯದ ಸಂವಹನ, ಮೈಯರಳಿಸಿ ನಿಂತ ಸಂಪಿಗೆ ಮರ, ವಸಂತದಲ್ಲಿ ಚಿಗುರಿದ ಮಾವು, ಯೌವನ, ಮನೆಯ ವಾತಾವರಣ, ಅಜ್ಜನ ಕಥೆಗಳು, ಹರೆಯ, ತುಂಟಾಟ, ಬೈಗುಳ, ಹಠ, ಹೆದರಿಕೆ, ಗುಬ್ಬಿಗೂಡು, ಕಾಲೇಜಿನ ಕುಡಿ ಮೀಸೆಯ ಹುಡುಗ, ಗ್ರೀಟಿಂಗ್ ಕಾರ್ಡ್ ಗಳು … ಹೀಗೆ ಹತ್ತು ಹಲವು ಲೇಖಕಿಯ ಮನಸ್ಸಿನ ಕ್ಯಾನ್ವಾಸ್ ನ ಮೇಲೆ ಸಂಜೆಯ ಅನುರಾಗವನ್ನು ಬಿಡಿಸಿವೆ.
(
ಲೇಖಕಿ ಅಂಜನಾ ಹೆಗಡೆ)
ಶೀರ್ಷಿಕೆ ಲೇಖನ ‘ಬೊಗಸೆಯಲ್ಲೊಂದು ಹೂನಗೆ’ಯಲ್ಲಿ, ಒಪ್ಪಿಕೊಂಡ ಪ್ರಸ್ತುತ ಬದುಕಿನ ಬಗ್ಗೆ ತೆಳುವಾದ ಅಸಮಾಧಾನವೂ ಕಾಣುವುದಕ್ಕೆ ಸಿಗುತ್ತದೆ. ಬದುಕನ್ನು ಸ್ವೀಕರಿಸಿದ ಬಗೆ ಮತ್ತು ಅದನ್ನು ಒಪ್ಪಿ ನಡೆದಿದ್ದು ಒಂದು ರೀತಿಯ ಪಾಠವಾಗಿಯೂ ಕಾಣಿಸುತ್ತದೆ.
ಜಾಳಾದ ಸಂಬಂಧಗಳ ಬಗ್ಗೆ ನೋವಿದೆ. ನಗರ ಜೀವನದಲ್ಲಿ ಹಳ್ಳಿಯ ನೆನಪಿದೆ. ಕರ್ಟನ್ನಿನ ಮೇಲೋಂದು ಕೇತಕಿ ಹೂವನ್ನು ಕಾಣುವ ಭಾವನೆ ಇದೆ. ಕಿಟಕಿಯಿಂದ ಒಳಗೆ ನುಸುಳುತ್ತಿದ್ದ ಬಿಸಿಲ ಬೆಳಕನ್ನು ತಡೆಹಿಡಿಯುತ್ತಿದ್ದ ಅಮ್ಮನ ಹಳೆಯ ಚೆಂದದ ಸೀರೆಯೊಂದು ಕರ್ಟನ್ನಾಗಿ ಬದಲಾದ ನೆನಪಿದೆ.
ನೆನಪುಗಳ ನಡುವೆ ಅಲ್ಲಲ್ಲಿ ಸಿಗುವ ಅಭಿವೃದ್ಧಿಯ ಹೆಸರಿನಲ್ಲಿ ಬರಡಾದ ಬದುಕು, ಬದಲಾಗದ ರೀತಿಯಲ್ಲಿ ಬದಲಾದ ಜೀವನ ಕ್ರಮಗಳ ಬಗ್ಗೆ ತಡೆಯಲಾರದ ಮೃದು ಕೋಪ ಇದೆ.
ಇದು ಕೇವಲ ನೆನಪುಗಳ ಲಹರಿಯಷ್ಟೇ ಅಲ್ಲ. ಇದೊಂದು ಗದ್ಯ ದೃಶ್ಯಕಾವ್ಯ. ಓದುಗನೊಬ್ಬನಿಗೆ ದೃಶ್ಯಗಳನ್ನು ಕಣ್ಮುಂದೆ ತರಿಸುವಂತಹ ಭಾಷಾ ಶೈಲಿ ಓದನ್ನು ಮತ್ತಷ್ಟು ಆಪ್ತ ಅನ್ನಿಸುತ್ತದೆ.
ಕೇವಲ ಇಪ್ಪತ್ತೆರಡು ಲೇಖನಗಳಿಗೆ ಅಂಜನಾ ಅವರ ಶಿರಸಿಯ ನೆನಪುಗಳು ಮುಗಿದಿಲ್ಲ ಅಂತ ನನಗನ್ನಿಸುತ್ತದೆ. ಆ ನೆನಪುಗಳೆಲ್ಲಾ ಅಜರಾಮರವಾಗಲಿ.
ಕೃತಿಯ ಓದಿನಲ್ಲಿ ಅಂಜನಾ ಅವರ ನೆನಪುಗಳೊಳಗೆ ಹೋಗಿದ್ದೆ. ಆಪ್ತ ಎನ್ನಿಸಿವೆ. ಜೊತೆಗೆ, ಇಂತಹ ಬಾಲ್ಯದ ನೆನಪುಗಳು ಸಿಗಲಿಲ್ವಲ್ಲ ಎಂಬ ಹೊಟ್ಟೆಕಿಚ್ಚು ಕೂಡ.
-ಶ್ರೀರಾಜ್ ವಕ್ವಾಡಿ
ಇದನ್ನೂ ಓದಿ : ಚುನಾವಣೋತ್ತರ ಹಿಂಸಾಚಾರವನ್ನು ತಡೆಗಟ್ಟಲು ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿ : ಧಂಕರ್