ಹೊಸದಿಲ್ಲಿ: 1986ರ ಬೊಫೋರ್ಸ್ ಫಿರಂಗಿ ಹಗರಣ ಮತ್ತೆ ಸುದ್ದಿಯಾಗಿರುವಂತೆಯೇ, ಕಾಂಗ್ರೆಸನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ಲೋಕಸಭೆಯಲ್ಲಿ ಬಿಜೆಪಿ ಈ ವಿಚಾರವನ್ನು ಪ್ರಸ್ತಾವಿಸಿದೆ. ಪ್ರಕರಣದ ಬಗ್ಗೆ ಸರಿಯಾಗಿ ತನಿಖೆಯಾಗಬೇಕು, ಪೂರ್ಣ ಸತ್ಯ ಹೊರಬರಬೇಕು ಎಂದು ಅದು ಆಗ್ರಹಿಸಿದೆ. ಲೋಕಸಭೆಯಲ್ಲಿ ಈ ವಿಚಾರವನ್ನು ಬಿಜೆಪಿ ಸದಸ್ಯರಾದ ಮೀನಾಕ್ಷಿ ಲೇಖೀ ಮತ್ತು ನಿಶಿಕಾಂತ್ ದುಬೆ ಪ್ರಸ್ತಾವಿಸಿ, ಹಗರಣ ಕುರಿತಂತೆ ಸ್ವೀಡನ್‌ನ ಹಿರಿಯ ಅಧಿಕಾರಿ ಸ್ಟೆನ್ ಲಿಂಡ್‌ಸ್ಟಾರ್ಮ್ ಅವರ ಹೇಳಿಕೆಯನ್ನು ಉದಾಹರಿಸಿದರು.
‘ಹಗರಣದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಭಾಗಿಯಾಗಿದ್ದು, ಈ ಕುರಿತ ಭಾರೀ ದಾಖಲೆಗಳನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ ಎಂದು ಲಿಂಡ್‌ಸ್ಟಾರ್ಮ್ ಹೇಳಿದ್ದಾರೆ. ಅಲ್ಲದೆ ಇದು ಹಿಂದೆ ಅಂದುಕೊಂಡಿದ್ದಕ್ಕಿಂತಲೂ ದೊಡ್ಡ ಮೊತ್ತದ ಲಂಚ ಪಡೆದಿರುವ ಪ್ರಕರಣವಾಗಿರುವ ಸಾಧ್ಯತೆ ಇದೆ’ ಎಂದು ಹೇಳಿದರು. ಇದಕ್ಕೆ ದನಿಗೂಡಿಸಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್, ಸಾರ್ವಜನಿಕ ಜೀವನದಲ್ಲಿ ಸಂಭಾವಿತರಾಗಿ ನಿಲ್ಲಬೇಕಾದರೆ ಕಾಂಗ್ರೆಸ್ ಮರು ತನಿಖೆಯನ್ನು ಒಪ್ಪಿಕೊಳ್ಳಬೇಕು ಎಂದರು.