Advertisement

ಜೈಲು ಅಕ್ರಮ ತಡೆಯಲು ಬಾಡಿವೋರ್ನ್ ಕೆಮರಾ

08:22 AM Jul 17, 2022 | Team Udayavani |

ಬೆಂಗಳೂರು: ಜೈಲುಗಳಲ್ಲಿ ಪಾರದರ್ಶಕತೆ ತರಲು ರಾಜ್ಯ ಕಾರಾಗೃಹ ಹಾಗೂ ಸುಧಾರಣ ಇಲಾಖೆ ಮುಂದಾಗಿದ್ದು, ಸಂಚಾರ ಪೊಲೀಸರ ಮಾದರಿಯಲ್ಲಿಯೇ ಜೈಲು ಸಿಬಂದಿಗೂ “ಬಾಡಿವೋರ್ನ್’ ಕೆಮರಾ ನೀಡಿದೆ.

Advertisement

ಜೈಲುಗಳಲ್ಲಿ ಅಧಿಕಾರಿ-ಸಿಬಂದಿಯಿಂದಲೇ ಕೈದಿಗಳ ಮೇಲೆ ದೌರ್ಜನ್ಯ, ಹಲ್ಲೆ ಮಾತ್ರವಲ್ಲದೆ, ಮೊಬೈಲ್‌, ಸಿಗರೇಟ್‌, ಮದ್ಯ, ಮಾದಕ ವಸ್ತುಗಳು ಪೂರೈಕೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಎಂಟು ಕೇಂದ್ರ ಕಾರಾಗೃಹಗಳು ಮತ್ತು ಒಂದು ಜಿಲ್ಲಾ ಕಾರಾಗೃಹದ ಸಿಬಂದಿಗೆ ಒಟ್ಟು 95 ಬಾಡಿವೋರ್ನ್ ಕೆಮರಾ ಕೊಡಲಾಗಿದೆ.

ಬೆಂಗಳೂರು ಪರಪ್ಪನ ಅಗ್ರಹಾರ ಕಾರಾಗೃಹ, ವಿಜಯಪುರ, ಧಾರವಾಡ, ಬೆಳಗಾವಿ, ಬಳ್ಳಾರಿ, ಶಿವಮೊಗ್ಗ, ಕಲಬುರಗಿ, ಮೈಸೂರು ಕೇಂದ್ರ ಕಾರಾಗೃಹ ಮತ್ತು ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ  ಕೆಮರಾ ನೀಡಲಾಗಿದೆ ಎಂದು ಇಲಾಖೆ  ತಿಳಿಸಿದೆ.

ಇತ್ತೀಚಿನ ವರ್ಷಗಳಲ್ಲಿ ಜೈಲಿನಲ್ಲಿ ಡ್ರಗ್ಸ್‌, ಗುಟ್ಕಾ, ಮೊಬೈಲ್‌ ಬಳಕೆ ಹಾಗೂ ಇತರ ಅನೈತಿಕ ಚಟುವಟಿಕೆಗಳು ಸಾಮಾನ್ಯವಾಗಿವೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಹಾಗೂ ಸ್ಥಳೀಯ ಪೊಲೀಸರು ದಾಳಿ ನಡೆಸಿದಾಗ ಅವ್ಯವಹಾರ ನಡೆಯುತ್ತಿರುವುದು ಬೆಳಕಿಗೆ ಬಂದಿದ್ದು, ಡ್ರಗ್ಸ್‌, ಮೊಬೈಲ್‌, ಗುಟ್ಕಾ ಜಪ್ತಿ ಮಾಡಿದ ಹಲವು ಉದಾಹರಣೆಗಳಿವೆ.

ಕೆಮರಾ ನಿರ್ವಹಣೆಗೆ ಪ್ರತ್ಯೇಕ ಘಟಕ
ಜೈಲು ವಾರ್ಡನ್‌, ಕಾನ್‌ಸ್ಟೆಬಲ್‌ರಿಂದ ಇನ್‌ಸ್ಪೆಕ್ಟರ್‌ ಹಂತದ ಅಧಿಕಾರಿ ಸಿಬಂದಿ ಕಡ್ಡಾಯವಾಗಿ ಕೆಮರಾ ಧರಿಸಬೇಕು.   ಬ್ಯಾರಕ್‌, ಅಡುಗೆ ಮನೆ, ಆರೋಗ್ಯ ಕೇಂದ್ರ ಸೇರಿ ಎಲ್ಲೆಡೆ ಹೋಗುವಾಗಲೂ  ಕಡ್ಡಾಯವಾಗಿ  ಕೆಮರಾ ಧರಿಸಿರಬೇಕು. ಉದ್ದೇಶಪೂರ್ವಕವಾಗಿ ಕ್ಯಾಮೆರಾ ಆಫ್ ಮಾಡುವುದು, ದಿಕ್ಕು ಬದಲಿಸುವುದು (ಶೌಚಾಲಯ ಹೊರತು ಪಡಿಸಿ) ಕಂಡು ಬಂದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ಕ್ಯಾಮೆರಾಗಳ ನಿರ್ವಹಣೆಗೆ ಆಯಾ ಜೈಲುಗಳಲ್ಲಿಯೇ ಪ್ರತ್ಯೇಕ ಘಟಕ ಸ್ಥಾಪಿಸಲಾಗಿದ್ದು, ಸಿಬಂದಿ ನಿಯೋಜಿಸಲಾಗಿದೆ ಎಂದು ಜೈಲಿನ ಮೂಲಗಳು ತಿಳಿಸಿವೆ.

Advertisement

ಒಂದು ವರ್ಷದಲ್ಲಿ 5ಜಿ ಜಾಮರ್‌ ಅಳವಡಿಕೆ
ಈಗಾಗಲೇ ಜೈಲುಗಳಲ್ಲಿ 2ಜಿ ಜಾಮರ್‌ ಅಳವಡಿಸಲಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಎಲ್ಲರೂ 4 ಜಿಯಿಂದ 5 ಜಿ ನೆಟ್‌ವರ್ಕ್‌ ಮೊಬೈಲ್‌ ಬಳಕೆ ಮಾಡುತ್ತಿದ್ದಾರೆ.  ಹೀಗಾಗಿ ಮುಂದಿನ ಒಂದು ವರ್ಷದಲ್ಲಿ 5 ಜಿ ಜಾಮರ್‌ ಅಳವಡಿಸಲಾಗುತ್ತದೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ 5 ಸೇರಿ ರಾಜ್ಯದ ಎಲ್ಲ ಜೈಲುಗಳಲ್ಲಿ  5ಜಿ ಜಾಮರ್‌  ಅಳವಡಿಕೆ ಸರಕಾರ ಸೂಚಿಸಿದೆ ಎಂದು  ಅಧಿಕಾರಿಗಳು ತಿಳಿಸಿದ್ದಾರೆ.

 -ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next