ಕೋವಿಡ್ ಆತಂಕ ಮತ್ತು ಲಾಕ್‌ಡೌನ್ ನಡುವೆಯೇ ಸದ್ದಿಲ್ಲದೆ ಅನೇಕರು ತಮ್ಮ ಸಿನಿಮಾ ಕೆಲಸಗಳನ್ನು ಪೂರ್ಣಗೊಳಿಸಿ ಕೊಂಡಿದ್ದಾರೆ. ಹೀಗೆ ಕೋವಿಡ್ ಭಯದ ನಡುವೆಯೇ ಶುರುವಾದ ಚಿತ್ರವೊಂದು ಸದ್ಯ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದೆ. ಅದರ ಹೆಸರು “ಬಾಡಿ ಗಾಡ್’.
ಪ್ರಭು ಶ್ರೀನಿವಾಸ್ “ಬಾಡಿ ಗಾಡ್’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮನೋಜ್, ಮಠ ಗುರುಪ್ರಸಾದ್, ಪದ್ಮಜಾರಾವ್, ನಿರಂಜನ್, ಅಶ್ವಿನ್ ಹಾಸನ್ ಮೊದಲಾದವರು”ಬಾಡಿ ಗಾಡ್’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಬಾಡಿ ಗಾಡ್’ ಚಿತ್ರದ ಟೈಟಲ್ ಮತ್ತು ಕಥಾಹಂದರ ಬಗ್ಗೆ ಮಾತಿಗಿಳಿದ ನಿರ್ದೇಶಕ ಪ್ರಭು ಶ್ರೀನಿವಾಸ್, “ಸತ್ತ ವ್ಯಕ್ತಿಯ ದೇಹದ ಹಿಂದೆ ಹೆಣೆಯಲಾಗಿರುವ ವಿಭಿನ್ನ ಕಥೆ ಈ ಸಿನಿಮಾದಲ್ಲಿದೆ. ಲಾಕ್‌ಡೌನ್ ಸಮಯದಲ್ಲಿ ಸೀಮಿತ ಕಲಾವಿದರು ಮತ್ತು ತಂತ್ರಜ್ಞರನ್ನು ಇಟ್ಟುಕೊಂಡು ಸಿನಿಮಾ ನಿರ್ದೇಶಿಸಿದ್ದೇನೆ. ಮೊದಲು ಈ ಕಥೆಯನ್ನು ನನ್ನ ಸ್ನೇಹಿತರ ಬಳಿ ಹೇಳಿದೆ. ಅವರೆ ನಿರ್ಮಾಣ ಮಾಡಬೇಕಿತ್ತು. ಆದ್ರೆ ಕಾರಣಾಂತರದಿಂದ ನಾನೇ ನಿರ್ಮಾಣ ಮಾಡಬೇಕಾಯಿತು. ಪ್ರಮೋಷನಲ್ ಸಾಂಗ್ ಒಂದನ್ನು ಹೊರತುಪಡಿಸಿ ಈಗಾಗಲೇ ಉಳಿದೆಲ್ಲ ಚಿತ್ರೀಕರಣ ಮುಕ್ತಾಯವಾಗಿದೆ’ ಎಂದರು.
ಇದನ್ನೂ ಓದಿ:ಪ್ರೇಕ್ಷಕರ ಸನಿಹಕೆ ಬರೋಕೆ ರೆಡಿ: ಆಗಸ್ಟ್ 1ಕ್ಕೆ ಟ್ರೇಲರ್, ಆ. 20ಕ್ಕೆ ಸಿನಿಮಾ ರಿಲೀಸ್
ಇನ್ನು ಚಿತ್ರದಲ್ಲಿ ಪ್ರಮುಖಪಾತ್ರದಲ್ಲಿಕಾಣಿಸಿಕೊಂಡಿರುವ ಮಠ ಗುರುಪ್ರಸಾದ್, “ಲಾಕ್ ಡೌನ್ ಸಮಯದಲ್ಲಿ ಖಾಲಿ ಕುಳಿತ್ತಿದ್ದ ನನಗೆ ನಿರ್ದೇಶಕರು ಹೇಳಿದ ಈ ಕಥೆ ಇಷ್ಟವಾಯಿತು. ಇದರಲ್ಲಿ ಅರವತ್ತರ ಆಸುಪಾಸಿನ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇಲ್ಲಿಯವರೆಗೆ ಪತ್ರಕರ್ತ, ನಿರ್ದೇಶಕನಾಗಿ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದ ನನಗೆ ಇದರಲ್ಲೊಂದು ಹೊಸಥರದ ಪಾತ್ರ ಸಿಕ್ಕಿದೆ. ಚೆನ್ನಾಗಿ ಓದಿದ್ದ, ಮಗ-ಮಗಳು ವಿದೇಶದಲ್ಲಿ ನೆಲೆಸಿರುತ್ತಾರೆ. ವಯಸ್ಸಾದವರಿಗೆ ಮಕ್ಕಳ ಅವಶ್ಯಕತೆ ಎಷ್ಟಿರುತ್ತದೆ ಎನ್ನುವುದನ್ನ ನನ್ನ ಪಾತ್ರ ಹೇಳುತ್ತದೆ’ ಎಂದರು
ಈ ಹಿಂದೆ “ಮೊಗ್ಗಿನ ಮನಸ್ಸು’, “ಓ ಪ್ರೇಮವೇ’ ಮುಂತಾದ ಚಿತ್ರಗಳಲ್ಲಿ ಮನೋಜ್ “ಬಾಡಿಗಾಡ್’ ನಾಯಕನಾಗಿ ಅಭಿನಯಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ನಾಯಕ ನಟ ಮನೋಜ್, “ಇದರಲ್ಲಿ ನನ್ನದು ಮಧ್ಯಮ ವರ್ಗದ ಕುಟುಂಬದ ಹುಡುಗನ ಪಾತ್ರ. ಸಿನಿಮಾದಲ್ಲಿ ನನ್ನ ಹಾಗೂ ಗುರು ಪ್ರಸಾದ್ ಅವರ ಕಾಂಬಿನೇಶನ್ ನೋಡುಗರಿಗೆ ಇಷ್ಟವಾಗಲಿದೆ’ ಎಂದರು.