ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ನಲ್ಲಿ ಗುರುವಾರ ಸಂಜೆ ಭಯೋತ್ಪಾದಕರೊಂದಿಗೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ ನಾಪತ್ತೆಯಾಗಿದ್ದ ಜೂನಿಯರ್ ಕಮಿಷನ್ಡ್ ಆಫೀಸರ್ (ಜೆಸಿಒ) ಸೇರಿದಂತೆ ಇಬ್ಬರು ಸೈನಿಕರ ಮೃತದೇಹಗಳನ್ನು ಸೇನೆಯು ಪತ್ತೆ ಮಾಡಿದೆ.
ಸುಮಾರು 48 ಗಂಟೆಗಳ ಕೂಂಬಿಂಗ್ ಕಾರ್ಯಾಚರಣೆಯ ನಂತರ ನಾಪತ್ತೆಯಾಗಿದ್ದ ಇಬ್ಬರು ಸೈನಿಕರ ಮೃತದೇಹ ಪತ್ತೆಯಾಗಿದೆ.
ಭಾರತದಲ್ಲಿ ಪ್ರಕ್ಷುಬ್ಧತೆಯನ್ನು ಹುಟ್ಟುಹಾಕುವ ನಿಟ್ಟಿನಲ್ಲಿ ಪಾಕಿಸ್ತಾನ ಬೆಂಬಲಿತ ಅಲ್ ಖೈದ ಉಗ್ರ ಸಂಘಟನೆ ಇತ್ತೀಚೆಗೆ ಭಾರತದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸುವ ಬಗ್ಗೆ ಎರಡು ವಿಡಿಯೋ ಸಹ ಬಿಡುಗಡೆ ಮಾಡಿತ್ತು. ಈ ಬೆನ್ನಿಗೆ ಉಗ್ರರು ಅಡಗಿದ್ದಾರೆ ಎಂಬ ಮಾಹಿತಿಯ ಮೇಲೆ ಭಾರತೀಯ ಸೇನೆ ಕಳೆದ ಗುರುವಾರ ಕಾಶ್ಮೀರದ ಫೂಂಚ್ ನಗರದಲ್ಲಿ ಉಗ್ರರಿಗಾಗಿ ತೀವ್ರ ಹುಡುಕಾಟ ನಡೆಸಿತ್ತು. ಈ ವೇಳೆ ಉಗ್ರರು ಸೈನಿಕರ ವಿರುದ್ಧ ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಐದು ಮಂದಿ ಯೋಧರು ಹುತಾತ್ಮರಾಗಿದ್ದರು. ಹೀಗಾಗಿ ಈ ಭಾಗದಲ್ಲಿ ಸೇನೆ ಕೂಬಿಂಗ್ ಕಾರ್ಯಾಚರಣೆ ನಡೆಸಿ 48 ಗಂಟೆಗಳಲ್ಲಿ ಎಲ್ಲಾ ಉಗ್ರರನ್ನೂ ಹೊಡೆದುರುಳಿಸಿ ಭಾರತೀಯ ಸೈನಿಕರ ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ ಎನ್ನಲಾಗಿದೆ. ಈ ಕಾರ್ಯಾಚರಣೆಯಲ್ಲಿ ಒಟ್ಟು 9 ಜನ ಸೈನಿಕರು ಹುತಾತ್ಮರಾಗಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಸಿಂಘು ಗಡಿ ಹತ್ಯೆ: ಪೊಲೀಸರೆದುರು ಶರಣಾದ ಮತ್ತಿಬ್ಬರು ನಿಹಾಂಗ್ ಸಿಖ್ಖರು
ಮೂಲಗಳ ಪ್ರಕಾರ, ಸೇನೆಯು ಗುರುವಾರ ಭಯೋತ್ಪಾದಕರಿಂದ ಭಾರೀ ಗುಂಡಿನ ದಾಳಿಗೆ ಒಳಗಾದ ನಂತರ ಜೆಸಿಒ ಮತ್ತು ಯೋಧ ನಾಪತ್ತೆಯಾಗಿದ್ದಾರೆ. “ಪೂಂಛ್ ನ ಮೆಂಧರ್ ನ ನಾರ್ ಖಾಸ್ ಅರಣ್ಯದ ದಟ್ಟ ಅರಣ್ಯ ಪ್ರದೇಶದಲ್ಲಿ ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಸುಬೇದಾರ್ ಅಜಯ್ ಸಿಂಗ್ ಮತ್ತು ನಾಯಕ್ ಹರೇಂದ್ರ ಸಿಂಗ್ ಅವರ ಮೃತದೇಹ ಪತ್ತೆಯಾಗಿದೆ” ಎಂದು ಸೇನೆಯು ಇಂದು ಹೇಳಿಕೆಯಲ್ಲಿ ತಿಳಿಸಿದೆ.
ಡೇರಾ ಕಿ ಗಲಿಯಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಪಡೆದ ನಂತರ ಸೇನೆಯು ಕೂಂಬಿಂಗ್ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಆರಂಭಿಕ ಶೂಟೌಟ್‌ನಲ್ಲಿ, ಒಬ್ಬ ಜೂನಿಯರ್ ಕಮಿಷನ್ಡ್ ಆಫೀಸರ್ (JCO) ಸೇರಿದಂತೆ ಐವರು ಸೈನಿಕರು ಸಾವನ್ನಪ್ಪಿದರು.