ನವದೆಹಲಿ: ಬಿಹಾರದ ಗಂಗಾನದಿ ತೀರದಲ್ಲಿ ಶವಗಳು ತೇಲುತ್ತಾ ಬಂದ ಘಟನೆ ಬೆನ್ನಲ್ಲೇ ಇದೀಗ ಉತ್ತರಪ್ರದೇಶದ ಗಾಜಿಪುರ್ ಗಂಗಾನದಿ ತೀರದಲ್ಲಿ ಮೃತದೇಹಗಳು ಮಂಗಳವಾರ(ಮೇ 11) ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಚಿಕಿತ್ಸೆ ನೀಡದೆ ವೈದ್ಯರ ನಿರ್ಲಕ್ಷ: ಚಿಕಿತ್ಸೆಗಾಗಿ ಮೂರು ಗಂಟೆ ಓಮ್ನಿಯಲ್ಲೇ ನರಳಾಡಿದ ರೋಗಿ
ಬಿಹಾರದ ಬಕ್ಸರ್ ಪ್ರದೇಶದಲ್ಲಿನ ಗಂಗಾನದಿ ತೀರದಲ್ಲಿ ಸೋಮವಾರ ನೂರಕ್ಕೂ ಅಧಿಕ ಶವಗಳು ಪತ್ತೆಯಾಗಿದ್ದು, ಈ ಘಟನೆ ಸ್ಥಳೀಯರಲ್ಲಿ ಆಘಾತ ಮತ್ತು ಆಕ್ರೋಶವನ್ನು ಉಂಟು ಮಾಡಿಸಿತ್ತು. ಇದು ಉತ್ತರಪ್ರದೇಶದಿಂದಲೇ ತೇಲಿ ಬಂದ ಶವಗಳು ಎಂದು ಬಿಹಾರ ಅಧಿಕಾರಿಗಳು ಆರೋಪಿಸಿದ್ದರು.
ಉತ್ತರಭಾರತದ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ 19 ಸೋಂಕು ಕ್ಷಿಪ್ರವಾಗಿ ಹರಡುತ್ತಿದ್ದು, ನದಿಯಲ್ಲಿ ತೇಲಿ ಬರುತ್ತಿರುವ ಶವಗಳು ಕೋವಿಡ್ 19 ರೋಗಿಗಳದ್ದು ಎಂದು ಶಂಕಿಸಲಾಗಿದೆ. ಗ್ರಾಮೀಣ ಪ್ರದೇಶದ ಸ್ಮಶಾನಗಳಲ್ಲಿ ಯಾವುದೇ ಕೋವಿಡ್ ಶವಗಳ ಅಂತ್ಯಸಂಸ್ಕಾರ ನಡೆಸುತ್ತಿಲ್ಲ. ಕೋವಿಡ್ ಸೋಂಕು ಹರಡುತ್ತದೆ ಎಂಬ ಭಯದಿಂದ ಕುಟುಂಬದ ಸದಸ್ಯರು ಶವಗಳನ್ನು ನದಿಗೆ ಬಲವಂತವಾಗಿ ಎಸೆಯುತ್ತಿರಬಹುದು ಎಂದು ಶಂಕಿಸಲಾಗಿದೆ.
ಸ್ಥಳೀಯರ ತೀವ್ರತರನಾದ ಭಯದಿಂದ ಶವಗಳನ್ನು ನದಿಗೆ ಎಸೆಯುವುದರಿಂದ ನೀರು ಇನ್ನಷ್ಟು ಕಲುಷಿತಗೊಳ್ಳುವ ಮೂಲಕ ಸೋಂಕು ಶೀಘ್ರವಾಗಿ ಹರಡಲಿದೆ ಎಂದು ತಿಳಿಸಿರುವ ಸ್ಥಳೀಯ ಅಧಿಕಾರಿಗಳು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.